ಶಾಸಕ ರೋಷನ್ ಬೇಗ್ ‘ಸಿಟ್’ ವಶಕ್ಕೆ: ಬಿಜೆಪಿ-ಸಿಎಂ ಎಚ್‌ಡಿಕೆ ನಡುವೆ ಟ್ವೀಟ್ ವಾಗ್ವಾದ

Update: 2019-07-16 12:31 GMT
ಶಾಸಕ ರೋಷನ್ ಬೇಗ್

ಬೆಂಗಳೂರು, ಜು. 16: ‘ಐ ಮಾನಿಟರಿ ಅಡ್ವೈಸರಿ(ಐಎಂಎ) ಕಂಪೆನಿ ವಂಚನೆ’ ಪ್ರಕರಣ ಸಂಬಂಧ ಶಾಸಕ ರೋಷನ್ ಬೇಗ್ ಅವರನ್ನು ‘ಸಿಟ್’ ವಶಕ್ಕೆ ಪಡೆದಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ವಿಪಕ್ಷ ಬಿಜೆಪಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.

ನಿನ್ನೆ ರಾತ್ರಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆಯುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ, ‘ರೋಷನ್‌ಬೇಗ್ ಬೆಂಗಳೂರು ಬಿಟ್ಟು ತೆರಳಲು ಪ್ರಯತ್ನಿಸಿದ್ದರು. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಸಂತೋಷ್ ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಬೇಗ್ ಜತೆಗಿದ್ದರು.

ಈ ವೇಳೆ ಸಿಟ್ ಅಧಿಕಾರಿಗಳು ನೋಡಿದ ಕೂಡಲೇ ಬಿಎಸ್‌ವೈ ಆಪ್ತ ಸಂತೋಷ್ ಪರಾರಿಯಾಗಿದ್ದು, ಕೋಟ್ಯಂತರ ರೂ.ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಬೇಗ್ ತಲೆ ಮರೆಸಿಕೊಳ್ಳಲು ಸಹಾಯ ಮಾಡಲು ಬಿಜೆಪಿ ನಾಯಕರ ಬಣ್ಣ ಬಯಲಾಗಿದೆ. ಈ ಮೂಲಕ ಮೈತ್ರಿ ಸರಕಾರ ಅಸ್ಥಿರಗೊಳಿಸಲು ಬಿಜೆಪಿ ಮುಖಂಡರು ಪ್ರಯತ್ನಿಸಿರುವುದು ಸ್ಪಷ್ಟವಾಗಿದೆ’ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಟ್ವಿಟ್ಟರ್ ಮೂಲಕವೇ ತಿರುಗೇಟು ನೀಡಿರುವ ಬಿಜೆಪಿ, ‘ರೋಷನ್ ಬೇಗ್ ನಿಜಕ್ಕೂ ಆರೋಪಿಯಾಗಿದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಜು.12ರ ರಾತ್ರಿ ನಗರದ ಖಾಸಗಿ ಹೊಟೇಲ್‌ನಲ್ಲಿ ಗುಟ್ಟಾಗಿ ಏಕೆ ಭೇಟಿ ಮಾಡಬೇಕಿತ್ತು. ಬೇಗ್ ಅವರನ್ನು ಗುಪ್ತವಾಗಿ ಭೇಟಿಯಾದ ಬಗ್ಗೆ ಸಿಎಂ ಬಹಿರಂಗವಾಗಿ ವಿವರಣೆ ನೀಡಬೇಕಲ್ಲವೆ’ ಎಂದು ಪ್ರಶ್ನಿಸಿದೆ.

‘ಸರಕಾರಕ್ಕೆ ರೋಷನ್ ಬೇಗ್ ಬೆಂಬಲ ನೀಡುತ್ತಿರುವ ವೇಳೆ ಎಲ್ಲವೂ ಚೆನ್ನಾಗಿಯೇ ಇತ್ತು. ಯಾವಾಗ ಅವರು ತಮ್ಮ ಬೆಂಬಲ ಹಿಂಪಡೆದುಕೊಂಡರೋ ಅಂದಿನಿಂದ ಅವರಿಗೆ ಕುಮಾರಸ್ವಾಮಿ ಅಧಿಕಾರಿಗಳನ್ನು ಬಳಸಿಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಟ್ವಿಟ್ಟರ್ ಮೂಲಕ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News