ಜು.19ಕ್ಕೆ ಮತ್ತೆ ವಿಚಾರಣೆಗೆ ಹಾಜರಾಗಲು ರೋಷನ್ ಬೇಗ್‌ಗೆ ಸಿಟ್ ಸೂಚನೆ

Update: 2019-07-16 12:37 GMT

ಬೆಂಗಳೂರು, ಜು.16: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಶಿವಾಜಿನಗರ ಶಾಸಕ ಆರ್.ರೋಷನ್ ಬೇಗ್ ಅನ್ನು ಸತತ 2 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿ, ಬಿಡುಗಡೆ ಮಾಡಿರುವ ಸಿಟ್ ತನಿಖಾಧಿಕಾರಿಗಳು, ಪುನಃ ಜು.19ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪುಣೆಗೆ ಹೊರಟಿದ್ದ ರೋಷನ್ ಬೇಗ್‌ನನ್ನು ಬೇರೆ ಕಡೆ ಹೋಗಬಾರದೆನ್ನುವ ಕಾರಣಕ್ಕೆ ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದ ಸಿಟ್ ತನಿಖಾಧಿಕಾರಿಗಳು, ತೀವ್ರ ವಿಚಾರಣೆ ನಡೆಸಿದರು.

ಐಎಂಎ ಸಂಸ್ಥೆಯ ವಂಚನೆ ಸಂಬಂಧ ಮಾಹಿತಿ ಸಂಗ್ರಹಿಸಿರುವ ಅಧಿಕಾರಿಗಳು, ಹಣಕಾಸು ವ್ಯವಹಾರ ಸಂಬಂಧ ಮತ್ತು ಬ್ಯಾಂಕ್ ವಹಿವಾಟು ಪ್ರಕ್ರಿಯೆ ಕುರಿತು ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ರೋಷನ್ ಬೇಗ್ ಸ್ಪಷ್ಟವಾಗಿ ಉತ್ತರಿಸಿಲ್ಲ ಎಂದು ಹೇಳಲಾಗುತ್ತಿದೆ.

ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಪಡೆದು, ಮಧ್ಯರಾತ್ರಿ ವಿಮಾನ ನಿಲ್ದಾಣಕ್ಕೆ ಹೊರಟಿರುವ ಕಾರಣ, ವಿಶೇಷ ವಿಮಾನ ಕಾಯ್ದಿರಿಸಿದ್ದು ಯಾರು ಎಂದೆಲ್ಲಾ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳಿದ್ದಾರೆ ಎಂದು ಸಿಟ್ ಮೂಲಗಳು ತಿಳಿಸಿವೆ.

ಗೈರು: ಐಎಂಎ ಸಂಸ್ಥೆ ಮುಖ್ಯಸ್ಥ ಮನ್ಸೂರ್ ಖಾನ್ ವಿದೇಶಕ್ಕೆ ಹೋದ ಬಳಿಕ ಬಿಡುಗಡೆ ಮಾಡಿದ ಆಡಿಯೊದಲ್ಲಿ ಶಾಸಕ ರೋಷನ್ ಬೇಗ್ ಅವರು ಕೋಟ್ಯಂತರ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆಂಬ ಆರೋಪ ಮಾಡಿದ್ದರು.

ಈ ಸಂಬಂಧ ಜು.11ರಂದು ರೋಷನ್ ಬೇಗ್ ವಿಚಾರಣೆಗೆ ಹಾಜರಾಗದೆ ಕಾಲಾವಕಾಶ ಕೋರಿದ್ದರು. ನಂತರ ಜು.15ರಂದು ವಿಚಾರಣೆಗೆ ಹಾಜರಾಗುವಂತೆ ಸಿಟ್ ನೋಟಿಸ್ ನೀಡಿದ್ದರೂ ಹಾಜರಾಗಿರಲಿಲ್ಲ ಎನ್ನಲಾಗಿದೆ.

ಜನ್ಮದಿನದಂದೇ ವಶಕ್ಕೆ!

ಶಾಸಕ ರೋಷನ್ ಬೇಗ್ ಅವರು ಜು.15ರಂದು ತಮ್ಮ 68ನೇ ಜನ್ಮ ದಿನವನ್ನು ಆಚರಣೆ ಮಾಡುತ್ತಿದ್ದರು. ಈ ದಿನವೇ ಸಿಟ್ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿತು.

ಪೊಲೀಸ್ ಭದ್ರತೆ

ಐಎಂಎ ವಂಚನೆ ಪ್ರಕರಣ ಸಂಬಂಧ ಸಿಟ್ ತನಿಖಾಧಿಕಾರಿಗಳು ರೋಷನ್ ಬೇಗ್ ಅನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮವಾಗಿಶಿವಾಜಿನಗರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶಾಸಕರ ನಿವಾಸದ ಬಳಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೈಕೋರ್ಟ್ ಮೊರೆ

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್ ಅವರು ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಸೋಮವಾರ ರಾತ್ರಿ ಸಿಟ್ ತನಿಖಾಧಿಕಾರಿಗಳು ವಶಕ್ಕೆ ಪಡೆದಿರುವುದನ್ನು ಪ್ರಶ್ನಿಸಿ ಶಾಸಕರ ಪರ ವಕೀಲ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News