ರಾಜಕೀಯ ಅಸ್ಥಿರತೆ ನಡುವೆಯೂ ಪೊಲೀಸರಿಗೆ ಸಿಹಿ ಸುದ್ದಿ: ಔರಾದ್ಕರ್ ವರದಿ ಜಾರಿಗೆ ರಾಜ್ಯ ಸರಕಾರ ತೀರ್ಮಾನ

Update: 2019-07-16 17:21 GMT

ಬೆಂಗಳೂರು, ಜು. 16: ರಾಜಕೀಯ ಅಸ್ಥಿರತೆಯ ನಡುವೆಯೂ ಪೊಲೀಸರಿಗೆ ರಾಜ್ಯ ಸರಕಾರ ಸಿಹಿಸುದ್ದಿ ನೀಡಿದ್ದು, ವೇತನ ಪರಿಷ್ಕರಣೆ ಹಾಗೂ ಭಡ್ತಿ ತಾರತಮ್ಯ ನಿವಾರಣೆ ಸೇರಿದಂತೆ ಪೊಲೀಸರ ಅನೇಕ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ರಾಜ್ಯ ಸರಕಾರ ತೀರ್ಮಾನಿಸಿದೆ.

ಪೊಲೀಸ್ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ನೀಡಿದ್ದ ವರದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ಅಂಕಿತ ಹಾಕಿದ್ದು, ಶೀಘ್ರವೇ ಈ ಸಂಬಂಧ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆಗಳಿವೆ.

ಪೊಲೀಸ್ ಸಿಬ್ಬಂದಿಗೆ ಶೇ.30ರಷ್ಟು ವೇತನ ಹೆಚ್ಚಳಕ್ಕೆ ಬದಲಾಗಿ ಶೇ.12.5ರಷ್ಟು ವೇತನ ಹೆಚ್ಚಳಕ್ಕೆ ಸರಕಾರ ಒಪ್ಪಿಗೆ ನೀಡಿದೆ. ವರದಿ ಜಾರಿಯಿಂದ ಸರಕಾರದ ಮೇಲೆ 630 ಕೋಟಿ ರೂ.ಹೆಚ್ಚುವರಿ ಹೊರೆ ಬೀಳಲಿದ್ದು, ಆರ್ಥಿಕ ಹೊರೆಯನ್ನು ತಪ್ಪಿಸಲು ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಗೊತ್ತಾಗಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ (2016ರ ಜೂನ್) ಪೊಲೀಸ್ ಸಿಬ್ಬಂದಿ ವೇತನ-ಭತ್ತೆ ಹೆಚ್ಚಳ ಸೇರಿದಂತೆ ರಾಜ್ಯ ಸರಕಾರ ನೌಕರರಿಗೆ ಸರಿಸಮವಾಗಿ ಪೊಲೀಸ್ ಸಿಬ್ಬಂದಿಯನ್ನು ಪರಿಗಣಿಸಬೇಕೆಂಬ ಆಗ್ರಹದ ಹಿನ್ನೆಲೆಯಲ್ಲಿ ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

ಸಮಿತಿಯು ಮಹಾರಾಷ್ಟ್ರ, ಗುಜರಾತ್ ಸೇರಿ ವಿವಿಧ ರಾಜ್ಯಗಳಲ್ಲಿನ ಪೊಲೀಸ್ ಸಿಬ್ಬಂದಿ ವೇತನ, ಭತ್ತೆ ಸೇರಿದಂತೆ ಇನ್ನಿತರ ಸೌಲಭ್ಯಗಳ ಬಗ್ಗೆ ಅಧ್ಯಯನ ನಡೆಸಿ ಸಮಗ್ರ ವರದಿಯನ್ನು ಸಲ್ಲಿಸಿತ್ತು. ಆದರೆ, ರಾಜ್ಯ ಸರಕಾರಕ್ಕೆ ಸಿಬ್ಬಂದಿ ವೇತನ ಹೆಚ್ಚಳದಿಂದ ಆರ್ಥಿಕ ಹೊರೆ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳಲು ವಿಳಂಬವಾಗಿತ್ತು. ಆದರೆ, ಇದೀಗ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಒತ್ತಾಯ ಹಾಗೂ ಆರ್ಥಿಕ ಇಲಾಖೆ ಅನುಮೋದನೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪೊಲೀಸ್ ಸಿಬ್ಬಂದಿ ವೇತನ ಮತ್ತು ಭತ್ತೆ ಹೆಚ್ಚಳ ಸಂಬಂಧದ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ನಿರ್ಧರಿಸಿದೆ.

ರಾಜ್ಯ ಪೊಲೀಸರ ದಶಕದ ಬೇಡಿಕೆಯಾಗಿದ್ದ ಔರಾದ್ಕರ್ ಸಮಿತಿ ವರದಿಯನ್ನು ಪ್ರಸ್ತುತ ಸರಕಾರದಲ್ಲಿ ನಾವು ಜಾರಿ ಮಾಡಿದ್ದೇವೆ. ಇದು ಸಿಬ್ಬಂದಿಯ ಕಲ್ಯಾಣಕ್ಕೆ ನಮಗಿರುವ ಬದ್ಧತೆಯನ್ನು ತೋರಿಸುತ್ತದೆ. ಸಮಸ್ತ ಪೊಲೀಸ್ ಸಿಬ್ಬಂದಿಗೆ ನನ್ನ ಅಭಿನಂದನೆಗಳು. ನಾನು ಎಂದೆಂದೂ ಈ ವರದಿಯ ಅನುಷ್ಠಾನಕ್ಕೆ ಬದ್ಧನಾಗಿದ್ದೆ, ವರದಿಯ ಜಾರಿ ನನಗೆ ಅತ್ಯಂತ ಹರ್ಷ ತಂದಿದೆ.
-ಎಂ.ಬಿ.ಪಾಟೀಲ್, ಗೃಹ ಸಚಿವ
 

ಪೊಲೀಸರ ಕಾರ್ಯಭಾರ, ಜನರ ರಕ್ಷಣೆಯ ಜವಾಬ್ದಾರಿಯನ್ನು ಗುರುತಿಸಿ ಮೂರು ವರ್ಷಗಳ ಬೇಡಿಕೆಯಾದ ಔರಾದ್ಕರ್ ಸಮಿತಿ ವರದಿಯ ಅನ್ವಯ ಪೊಲೀಸರ ವೇತನ ಶ್ರೇಣಿ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಸರಕಾರದ ಈ ನಡೆ ಪೊಲೀಸರಲ್ಲಿ ನವ ಚೈತನ್ಯ ತುಂಬಲಿದೆ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ (ಟ್ವಿಟರ್‌ನಲ್ಲಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News