ದೇಶದ 1592 ತಾಲೂಕುಗಳಲ್ಲಿ ಜಲಶಕ್ತಿ ಯೋಜನೆ ಜಾರಿ: ಜೇಮ್ಸ್ ಮ್ಯಾಥ್ಯೂ

Update: 2019-07-16 18:09 GMT

ಚಿಕ್ಕಮಗಳೂರು, ಜು.16: ಪ್ರಸಕ್ತ ದಿನಗಳಲ್ಲಿ ಏರಿಕೆಯಾಗುತ್ತಿರುವ ಜನಸಂಖ್ಯೆ, ಇಳಿಮುಖವಾಗುತ್ತಿರುವ ವಾಡಿಕೆ ಮಳೆ ಪ್ರಮಾಣ, ಪ್ರಕೃತಿ ವೈಪರೀತ್ಯಗಳ ವ್ಯತ್ಯಾಸದಿಂದ ಪ್ರತೀ ಹನಿ ನೀರು ಅಮೃತವಾಗುತ್ತಿರುವ ದಿನಗಳಲ್ಲಿ ಎಲ್ಲಾ ಜೀವಿಗಳನ್ನು ಕಾಪಾಡುವುದು ಪ್ರತಿಯೊಬ್ಬರ ಧ್ಯೇಯವಾಗಬೇಕಾಗಿದೆ ಎಂದು ಕೇಂದ್ರ ಸರಕಾರದ ಪರಿಸರ ಇಲಾಖೆಯ ಸಲಹೆಗಾರ ಜೇಮ್ಸ್ ಮ್ಯಾಥ್ಯೂ ಅಭಿಪ್ರಾಯಿಸಿದ್ದಾರೆ.

ಕಡೂರು ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಲಶಕ್ತಿ ಅಭಿಯಾನ ಯೋಜನೆ ಅನುಷ್ಠಾನಗೊಳಿಸುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ 256 ಜಿಲ್ಲೆಗಳ ಪೈಕಿ 1,592 ತಾಲೂಕುಗಳು ಬರಪೀಡಿತ ತಾಲೂಕುಗಳಾಗಿವೆ. ಕರ್ನಾಟಕದ18 ಜಿಲ್ಲೆಗಳಲ್ಲಿ 59 ತಾಲೂಕುಗಳು ಬರಪೀಡಿತ ತಾಲೂಕುಗಳಾಗಿವೆ. ಈ ಎಲ್ಲ ಬರಪೀಡಿತ ತಾಲೂಕುಗಳಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿಗೂ ಈ ಯೋಜನೆ ಜಾರಿಯಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ನೀರಿನ ಮಿತ ಬಳಕೆ ಬಗ್ಗೆ ಎಲ್ಲರಲ್ಲೂ ಜನಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ಚಿಕ್ಕ ವಯಸ್ಸಿನಲ್ಲೆ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಜಲಸಂಪನ್ಮೂಲಗಳ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಗ್ರಾಪಂ ಅಧಿಕಾರಿಗಳು ಹೆಚ್ಚು ಮಾಡಬೇಕು. ಪ್ರತಿಯೊಂದು ಹಳ್ಳಿಗಳಲ್ಲಿ ನೀರಿನ ಮಿತ ಬಳಕೆ ಬಗ್ಗೆ ಅರಿವು ಮೂಡಿಸುವ ಜೊತೆಗೆ ಎಲ್ಲಾ ಸರಕಾರಿ ಕಟ್ಟಡಗಳು, ಹೊಸದಾಗಿ ನಿರ್ಮಿಸುವ ಮನೆಗಳಿಗೆ ಮಳೆ ನೀರು ಕೊಯ್ಲು ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ನಿಯಮ ಪಾಲಿಸುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದ ಅವರು, ಮಳೆ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆದು ಆ ನೀರನ್ನು ಕೆರೆ, ಬಾವಿ, ಬೋರ್‍ವೆಲ್‍ಗಳಲ್ಲಿ ಇಂಗುವ ವ್ಯವಸ್ಥೆ ಕೈಗೊಳ್ಳಬೇಕು ಎಂದು ಹೇಳಿದರು.

ಹಿಂದಿನ ನಮ್ಮ ಪೂರ್ವಿಕರು ಹೆಚ್ಚಾಗಿ ಓದಿದವರಲ್ಲದಿದ್ದರೂ ಅವರ ತಂತ್ರಜ್ಞಾನ ಅರಿವಿನಿಂದ ಕೆರೆ, ಕಟ್ಟೆ, ಗೋ ಕಟ್ಟೆ, ಚೆಕ್‍ಡ್ಯಾಂ, ಭೂಮಿಗೆ ನೀರು ಇಂಗಿಸುವ ಕೆಲವೊಂದು ಮಹತ್ತರವಾದ ಅಂಶಗಳನ್ನು ಅಳವಡಿಸಿಕೊಂಡಿದ್ದರಿಂದ ಈ ಹಿಂದೆ ಎಲ್ಲೆಡೆ ಅಂತರ್ಜಲ ಹೆಚ್ಚಿತ್ತು. ಆಗ ಎರಡು ಮೂರು ವರ್ಷಗಳ ಕಾಲ ಮಳೆ ಇಲ್ಲದಿದ್ದರೂ ಅಂತರ್ಜಲ ಬಳಸಿಕೊಂಡು, ಕೆರೆ ಕಟ್ಟೆ ಅವಲಂಬಿಸಿ ಜನ ಜಾನುವಾರುಗಳ ಬದುಕುವ ಸ್ಥಿತಿ ಇತ್ತು. ಪ್ರಸಕ್ತ ನೀರಿನ ಬಗ್ಗೆ ನಿರ್ಲಕ್ಷ್ಯದಿಂದಾಗಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ವೈಜ್ಞಾನಿಕ ತಂತ್ರಜ್ಞಾನದಿಂದ ಭೂಮಿಗೆ ನೀರು ಇಂಗಿಸುವ ಯೋಜನೆ ಮಾಡಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಈ ಬಗ್ಗೆ ಎಚ್ಚರ ಅತ್ಯಗತ್ಯ ಎಂದ ಅವರು, ಕಡೂರು ತಾಲೂಕು ಬರ ಪೀಡಿತ ತಾಲೂಕು ಅಥವಾ ಮಳೆ ವಂಚಿತ ತಾಲೂಕು ಎಂಬ ಅಪಖ್ಯಾತಿಯಿಂದ ಹೊರಬರಬೇಕಾದರೆ ಎಲ್ಲಾ ಹಳ್ಳಿಗಳಲ್ಲಿರುವ ಕೆರೆಗಳ ಪುನಃಶ್ಚೇತನ ಮಾಡಬೇಕು. ಕೆರೆಗಳಿಗೆ ಮಳೆ ನೀರು ಸರಾಗವಾಗಿ ಸೇರುವಂತೆ ನೋಡಿಕೊಳ್ಳಬೇಕು. ಗಿಡ ಮರಗಳನ್ನು ಹೆಚ್ಚು-ಹೆಚ್ಚು ನೆಡುವುದರ ಜೊತೆಗೆ ಪರಿಸರಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಸರಕಾರಿ ಇಲಾಖೆಗಳು ಹಾಗೂ ಜನಸಾಮಾನ್ಯರ ಮನೆ ಮನಸ್ಸುಗಳಲ್ಲಿ ನೀರಿನ ಮಹತ್ವ ಮತ್ತು ನೀರು ಸಂರಕ್ಷಣೆ ಬಗ್ಗೆ ಜಾಗೃತಿಗೆ ಮುಂದಾಗಬೇಕು. ಜಲಶಕ್ತಿ ಯೋಜನೆ ಬಹಳ ಉಪಯುಕ್ತ ಯೋಜನೆಯಾಗಿದ್ದು ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಈ ಯೋಜನೆಯ ಯಶಸ್ವಿಗೆ ಇಲ್ಲಿನ ಸಾರ್ವಜನಿಕರು ಬಹಳ ಉತ್ಸುಕರಾಗಿದ್ದಾರೆ. ಅಧಿಕಾರಿಗಳು ಪ್ರತೀವಾರ ಇದರ ಮೇಲುಸ್ತುವಾರಿ ಮಾಡುತ್ತಿರುವುದು ಹಾಗೂ ಪ್ರತಿದಿನದ ಮಾಹಿತಿ ಪಡೆಯುತ್ತಿರುವುದು ನೋಡಿದರೆ ಕಡೂರು ತಾಲೂಕು ಜಲಶಕ್ತಿ ಯೋಜನೆಯ ಅನುಷ್ಠಾನದಲ್ಲಿ ಯಶಸ್ವಿಯಾಗುತ್ತದೆ ಎಂದು ಆಶಿಸಿದರು.

ಕೇಂದ್ರ ಸಮಿತಿಯ ಸದಸ್ಯ ಸಂಶೋಧಕ ಶ್ರೀನಿವಾಸ ವಿಠಲ್ ಮಾತನಾಡಿ, ಜಲಶಕ್ತಿ, ಅಮೃತ್‍ಯೋಜನೆಯಂತಹ ಯೋಜನೆಗಳನ್ನು ತ್ವರಿತವಾಗಿ ಜಾರಿಯಾಗಲು ಹಾಗೂ ಶಿಸ್ತುಬದ್ಧ ಯೋಜನೆಯ ಅಂದಾಜುಪಟ್ಟಿ ತಯಾರಿಸಿ ಲೋಪವಾಗದಂತೆ ಕಾರ್ಯಗತಕ್ಕೆ ಎಲ್ಲಾ ಅಧಿಕಾರಿಗಳು ಮುಂದಾಗಬೇಕು. ನರೇಗಾದಂತ ಕಾರ್ಯಕ್ರಮಗಳಲ್ಲಿ ಮಳೆ ನೀರು ಸಂಗ್ರಹ, ಭೂಮಿಗೆ ನೀರು ಇಂಗಿಸುವುದು, ಅರಣ್ಯ ಹೆಚ್ಚಿಸುವುದು, ಕೆರೆಕಟ್ಟೆಗಳ ಅಭಿವೃದ್ಧಿಗೆ ಸಹಕರಿಸುವುದು ಅತ್ಯಗತ್ಯ. ಸಾರ್ವಜನಿಕರು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಮುದಾಯಗಳ ಮುಖಂಡರು, ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸಾಮೂಹಿಕವಾಗಿ ಈ ಯೋಜನೆಯನ್ನು ಮುನ್ನಡೆಸಿದಾಗ ಮಾತ್ರ ಇದಕ್ಕೆ ಯಶಸ್ಸು ಸಿಗುತ್ತದೆ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಾಗೂ ಜಲಶಕ್ತಿಯ ಮೇಲುಸ್ತುವಾರಿ ಸದಸ್ಯ ಸೋಮಸುಂದರ್ ಮಾತನಾಡಿ, ಕಡೂರು ತಾಲೂಕಿನ ಸುಮಾರು ಅರವತ್ತು ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳು, ಕುಡಿಯುವ ನೀರಿನ ಬೋರ್‍ವೇಲ್‍ಗಳು, ಬಾವಿಗಳ ಪುನಃಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅಂರ್ತಜಲ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಾಜಗೋಪಾಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ ನಾಯ್ಕ ಉಪಸ್ಥಿತರಿದ್ದರು.

ದೇಶದಲ್ಲಿ ಪಾರಂಪರಿಕ ಜಲ ಮೂಲಗಳಾದ ಕೆರೆ, ಬಾವಿ, ನದಿಗಳನ್ನು ಸಂರಕ್ಷಣೆ ಮಾಡದಿದ್ದರೆ ಪ್ರತಿಜೀವ ರಾಶಿಗಳಿಗೆ ಕಂಟಕ ಎದುರಾಗಲಿದೆ. ಇದರಿಂದ ಪಾರಾಗಲು ಜಲಸಂರಕ್ಷಣೆ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕೆ ಮುಖ್ಯವಾಗಿ ಸಮುದಾಯದ ಸಹಕಾರ ಮುಖ್ಯ. ಜಲಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಹಕ್ಕು ಎಂಬುದನ್ನು ಅರಿತು ಪ್ರತೀ ಮನೆಗಳಲ್ಲೂ ನೀರು ಸಂರಕ್ಷಣೆಗೆ ಮುಂದಾಗಬೇಕು.
- ಆರ್.ಸುಶೀಲ್ ಖಜೂರಿಯ, ಪರಿಸರ ಇಲಾಖೆಯ ಕೇಂದ್ರ ಸಮಿತಿಯ ಹೆಚ್ಚುವರಿ ಮುಖ್ಯ ಇಂಜಿನಿಯರ್

ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ಸುಮಾರು 350 ಎಕರೆ ವ್ಯಾಪ್ತಿಯ ಕೆರೆಯನ್ನು ಅಭಿವೃದ್ಧಿ ಪಡೆಸುವ ನಿಟ್ಟಿನಲ್ಲಿ ಕೇಂದ್ರ ಪರಿಸರ ಇಲಾಖೆಯ ಅಧ್ಯಯನ ತಂಡ ಮಂಗಳವಾರ ಕೆರೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿತು. ಕೆರೆಯನ್ನು ಅಭಿವೃದ್ಧಿ ಪಡಿಸಿದರೆ ಸುತ್ತಮುತ್ತ ಅನೇಕ ಕೆರೆ, ಕಟ್ಟೆ, ಬಾವಿ, ಬೋರ್‍ವೇಲ್‍ಗಳಿಗೆ ಅನುಕೂಲವಾಗಲಿದೆ ಎಂದು ತಂಡದ ಸದಸ್ಯರು ಈ ವೇಳೆ ಅಭಿಪ್ರಾಯಿಸಿದರು. ಬಳಿಕ ತಾಲೂಕಿನ ಯಳ್ಳಂಬಳಸೆ ಗ್ರಾಪಂ ವ್ಯಾಪ್ತಿಯ ಯಳಗೊಂಡನಹಳ್ಳಿ ಗ್ರಾಮದಲ್ಲಿ ನಿರ್ಮಿಸುತ್ತಿರುವ 38 ಕಿ.ಮೀ ಉದ್ದದ ಭದ್ರಾ ಚಾನಲ್ ಕಾಮಗಾರಿ ಸ್ಥಳಕ್ಕೂ ಅಧ್ಯಯನ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿತು. ನಂತರ ವೇದಾವತಿ ನದಿಗೆ ಪೂರಕವಾಗಿ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಚೆಕ್‍ಡ್ಯಾಂ ಕಾಮಗಾರಿಯನ್ನೂ ವೀಕ್ಷಿಸಿತು. ಇದೇ ವೇಳೆ ಕೆಲವೆಡೆ ಗ್ರಾಮಸ್ಥರು, ತಾಲೂಕಿನಾದ್ಯಂತ ನೀರಿಗೆ ತೀವ್ರ ಬರವಿದೆ.ಈ ಭಾಗದಲ್ಲಿ 550ರಿಂದ ಒಂದು ಸಾವಿರ ಅಡಿ ಬೋರ್‍ವೇಲ್ ಕೋರೆದರು ನೀರು ಸಿಗುತ್ತಿಲ್ಲ ಎಂದು ಸ್ಥಳಿಯರು ಸಮಿತಿ ಮುಂದೇ ಅಳಲು ತೋಡಿಕೊಂಡರು. ಯಳ್ಳಂಬಳಸೆ ಸುತ್ತಮುತ್ತ ಕುಡಿಯುವ ನೀರಿನ ಬೋರ್‍ವೇಲ್‍ಗಳ ಸ್ಥಿತಿಗತಿಗಳ ಬಗ್ಗೆ ತಜ್ಞರಿಂದ ತಂಡ ಮಾಹಿತಿ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News