ಬಣಕಲ್ ಸರಕಾರಿ ಉರ್ದು ಶಾಲೆಯಲ್ಲಿ ಮೂಲಸೌಕರ್ಯದ ಕೊರತೆ: ಊಟದ ಹಾಲ್‌ನಲ್ಲಿ ಮಕ್ಕಳಿಗೆ ಶಿಕ್ಷಣ !

Update: 2019-07-16 18:28 GMT

ಬಣಕಲ್, ಜು.16: ಇಲ್ಲಿನ ಚರ್ಚ್ ರಸ್ತೆಯಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಮೇಲ್ಛಾವಣಿ ದುಸ್ತಿತಿಯಲ್ಲಿದ್ದು, ಮಕ್ಕಳ ಹಾಜರಾತಿ ಹೆಚ್ಚಿದ್ದರೂ ಕೊಠಡಿಗಳ ಕೊರತೆಯಿಂದ ಊಟದ ಹಾಲ್, ಶಾಲಾ ಕಚೇರಿಯಲ್ಲಿ ತರಗತಿ ನಡೆಸುವ ಅವ್ಯವಸ್ಥೆ ಎದುರಾಗಿದೆ ಎಂದು ಶಾಲೆಯ ಸಮಿತಿಯ ಅಧ್ಯಕ್ಷ ಮುಹಮ್ಮದ್ ಇದ್ರೀಸ್ ದೂರಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯು ಆರು ದಶಕಗಳ ಹಿಂದೆ ಸ್ಥಾಪನೆಯಾಗಿ 64 ಮಕ್ಕಳಿದ್ದರು. ಪ್ರಸ್ತುತ ಈ ಶಾಲೆಯಲ್ಲಿ ಶಾಲಾ ಸಮಿತಿಯ ಸಹಕಾರದಿಂದ 160 ಮಕ್ಕಳು ಎಲ್‌ಕೆಜಿಯಿಂದ ಏಳನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ಶಾಲಾ ಕಚೇರಿ ಹಾಗೂ ಊಟದ ಹಾಲ್‌ನಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ದುಃಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕೆಲವು ತರಗತಿಗಳಿಗೆ ಕೊಠಡಿ ಕೊರತೆಯಿಂದ ಕಂಬೈಂಡ್ ಮಾಡಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇನ್ನು ಮಕ್ಕಳ ಸಂಖ್ಯೆ ಹೆಚ್ಚಿದ್ದರೂ ಶೌಚಾಲಯದ ಕೊರತೆ ಎದುರಾಗಿದೆ. ಶೌಚಾಲಯದ ಬಾಗಿಲುಗಳು ಮಳೆಯಿಂದ ಹಾನಿಯಾಗಿವೆ. ಈ ಶೌಚಾಲಯಗಳು ಎರಡು ದಶಕಗಳ ಹಿಂದೆ ರಾಜೀವ್ ಗಾಂಧಿ ಯೋಜನೆಯಡಿ ನಿರ್ಮಾಣವಾಗಿದ್ದು ಮಕ್ಕಳಿಗೆ ಸಮರ್ಪಕವಾದ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಪೋಷಕರ ಆಕ್ರೋಶಕ್ಕೂ ಕಾರಣವಾಗಿದೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಸರಕಾರಿ ಶಾಲೆಗಳು ಮಕ್ಕಳಿಲ್ಲದೇ ಮುಚ್ಚುತ್ತಿರುವ ಘಟನೆಗಳೇ ಹೆಚ್ಚಿವೆ. ಇಲ್ಲಿ ಮೌಲ್ಯವರ್ಧಿತ ಶಿಕ್ಷಣ, ಶಾಲಾ ಸಮಿತಿಯ ಸಹಕಾರದಿಂದ ಮಕ್ಕಳನ್ನು ಶಾಲೆಗೆ ಸೆಳೆಯಲಾಗುತ್ತಿದೆ. ಆದರೆ ಕೊಠಡಿಗಳ ಅವ್ಯವಸ್ಥೆಯಿಂದ ಮಕ್ಕಳು ಶಿಕ್ಷಣ ಪಡೆಯಲು ಹೈರಾಣರಾಗಬೇಕಿದೆ ಎಂದು ಮುಹಮ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ಸರಕಾರದಿಂದ ಮಣೆ ತರಹದ ಕೆಲವು ಪುರಾತನ ನೆಲಬೆಂಚುಗಳಿದ್ದು, ಅವುಗಳೂ ಹಾಳಾಗಿವೆ. ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಬೆಂಚುಗಳ ಕೊರತೆಯೂ ಉಂಟಾಗಿದೆ. ಶಾಲಾ ಮೇಲ್ಚಾವಣಿಯ ಮರದ ಜಂತಿ ಮಳೆಗೆ ಮುರಿದಿದ್ದು ಕಟ್ಟಡದ ಸ್ಥಿತಿಯೂ ಶಿಕ್ಷಣಕ್ಕೆ ಯೋಗ್ಯವಾಗಿಲ್ಲ ಎಂಬಂತಾಗಿದೆ ಎಂದು ಅವರು ಹೇಳಿದರು. ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಸೌಲಭ್ಯದ ಅವ್ಯವಸ್ಥೆಯ ಬಗ್ಗೆ ಕೊಠಡಿಗಳ ಕೊರತೆಯ ಬಗ್ಗೆ ಶೀಘ್ರವೇ ಗಮನ ಹರಿಸಿ ಶಾಲೆಗೆ ಉತ್ತಮ ಕೊಠಡಿಗಳ ವ್ಯವಸ್ಥೆ ಮಾಡಿಕೊಡಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News