Big Breaking- ರಾಜೀನಾಮೆ, ಅನರ್ಹತೆ ನಿರ್ಧಾರ ಕೈಗೊಳ್ಳಲು ಸ್ಪೀಕರ್ ಸ್ವತಂತ್ರರು: ಸುಪ್ರೀಂ ಕೋರ್ಟ್

Update: 2019-07-17 14:34 GMT

ಹೊಸದಿಲ್ಲಿ,ಜು.17: ಇಡೀ ರಾಷ್ಟ್ರದ ಕುತೂಹಲವನ್ನು ಕೆರಳಿಸಿದ್ದ,ಕರ್ನಾಟಕದ 15 ಅತೃಪ್ತ ಶಾಸಕರು ತಮ್ಮ ರಾಜೀನಾಮೆಗಳನ್ನು ಸ್ವೀಕರಿಸುವಂತೆ ವಿಧಾನಸಭಾ ಸ್ಪೀಕರ್‌ಗೆ ನಿರ್ದೇಶ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ಕುರಿತು ತನ್ನ ಮಧ್ಯಂತರ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ಪ್ರಕಟಿಸಿದೆ. ನ್ಯಾಯಾಲಯದ ತೀರ್ಪು ಅಡ್ಡಗೋಡೆಯ ಮೇಲೆ ದೀಪವನ್ನಿರಿಸಿದಂತಿದ್ದು,ಸ್ಪೀಕರ್ ಪರಮಾಧಿಕಾರದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎನ್ನುತ್ತಲೇ ಕಾಲಮಿತಿಯೊಳಗೆ ಅತೃಪ್ತ ಶಾಸಕರ ರಾಜೀನಾಮೆಗಳ ಬಗ್ಗೆ ನಿರ್ಧಾರವೊಂದನ್ನು ಕೈಗೊಳ್ಳುವಂತೆ ಅವರಿಗೆ ಸೂಚಿಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ಪೀಠವು ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಲು ಅಥವಾ ಗೈರುಹಾಜರಾಗಲು ಅತೃಪ್ತ ಶಾಸಕರಿಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಿದೆ. ಶಾಸಕರ ಇಚ್ಛೆಗೆ ವಿರುದ್ಧವಾಗಿ ಅಧಿವೇಶನಕ್ಕೆ ಹಾಜರಾಗುವಂತೆ ಅವರ ಮೇಲೆ ಯಾವುದೇ ರೀತಿಯ ಒತ್ತಡವನ್ನು ಹೇರುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ನ್ಯಾಯಾಲಯದ ತೀರ್ಪಿನಿಂದಾಗಿ ವಿಶ್ವಾಸ ಮತದ ವೇಳೆ ಈ ಅತೃಪ್ತ ಶಾಸಕರು ಸದನಕ್ಕೆ ಗೈರಾಗುವ ಮೂಲಕ ತಮ್ಮ ಪಕ್ಷಗಳ ಸಚೇತಕಾಜ್ಞೆಗಳನ್ನು ಉಲ್ಲಂಘಿಸಿದರೂ ಅನರ್ಹತೆಯ ಕುಣಿಕೆಯಿಂದ ಪಾರಾಗಲಿದ್ದಾರೆ. ಹೀಗಾಗಿ ತೀರ್ಪು ಸ್ಪೀಕರ್ ಅವರ ಪರಮಾಧಿಕಾರವನ್ನು ಗೌರವಿಸಿದ್ದರೂ ಮೈತ್ರಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಮು.ನ್ಯಾ.ಗೊಗೊಯಿ ಅವರು ಪ್ರಕಟಿಸಿದ ತೀರ್ಪು ತನಗೆ ಸೂಕ್ತವೆನಿಸಿದ ಸಮಯದಲ್ಲಿ ಅತೃಪ್ತ ಶಾಸಕರ ರಾಜೀನಾಮೆಗಳ ಕುರಿತು ನಿರ್ಧಾರವನ್ನು ತೆಗೆದುಕೊಳ್ಳುವ ಸ್ಪೀಕರ್ ಅವರ ವಿವೇಚನಾಧಿಕಾರವನ್ನು ಒಪ್ಪಿಕೊಂಡಿದೆ. ಇದೇ ವೇಳೆ ಜುಲೈ 18ರಂದು ನಿಗದಿಯಾಗಿರುವ ವಿಶ್ವಾಸ ಮತ ಕಲಾಪದಿಂದ ಅತೃಪ್ತ ಶಾಸಕರು ಹೊರಗುಳಿಯಬಹುದೆಂಬ ಸ್ಪಷ್ಟ ಸುಳಿವನ್ನೂ ಅದು ನೀಡಿದೆ.

 ಸರ್ವೋಚ್ಚ ನ್ಯಾಯಾಲಯವು ತಮಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಿರುವ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಸಂವಿಧಾನದ 10ನೇ ಅನುಸೂಚಿಯ ನಿಯಮ 2(ಬಿ) ಅಡಿ ಪಕ್ಷಾಂತರಕ್ಕಾಗಿ ಅನರ್ಹತೆಯ ಭೀತಿಯಿಲ್ಲದೆ ಪಕ್ಷದ ವಿಪ್‌ನ್ನು ಉಲ್ಲಂಘಿಸಬಹುದಾಗಿದೆ. ನಿಯಮ 2(ಬಿ) ಅಡಿ ಶಾಸಕರು ತಮ್ಮ ಪಕ್ಷದ ವಿಪ್ ಅನ್ನು ಉಲ್ಲಂಘಿಸಿ ಸದನದಲ್ಲಿ ಮತವನ್ನು ಚಲಾಯಿಸಿದರೆ ಅಥವಾ ಮತದಾನದಿಂದ ದೂರವುಳಿದರೆ ಪಕ್ಷಾಂತರಕ್ಕಾಗಿ ಅನರ್ಹಗೊಳ್ಳುತ್ತಾರೆ.

 ಹಾಲಿ ಪ್ರಕರಣದಲ್ಲಿ ಈ ನ್ಯಾಯಾಲಯದ ಯಾವುದೇ ನಿರ್ದೇಶ ಅಥವಾ ಅಭಿಪ್ರಾಯದ ಮೂಲಕ ಸ್ಪೀಕರ್ ಅವರ ವಿವೇಚನಾಧಿಕಾರಕ್ಕೆ ತಡೆಯೊಡ್ಡುವಂತಿಲ್ಲ. ಅತೃಪ್ತ ಶಾಸಕರ ರಾಜೀನಾಮೆಗಳ ಕುರಿತು ಸಂವಿಧಾನದ ವಿಧಿ 208ರಡಿ ದತ್ತ ಅಧಿಕಾರದಂತೆ ರೂಪಿಸಲಾಗಿರುವ ಕರ್ನಾಟಕ ವಿಧಾನಸಭೆಯಲ್ಲಿ ವಿಧಿವಿಧಾನಗಳು ಮತ್ತು ಕಲಾಪಗಳ ನಿಯಮಾವಳಿಗಳ ನಿಯಮ 202ರೊಂದಿಗೆ ಓದಿಕೊಳ್ಳಲಾಗುವ ವಿಧಿ 190ಕ್ಕೆ ಅನುಗುಣವಾಗಿ ನಿರ್ಧಾರವನ್ನು ಕೈಗೊಳ್ಳಲು ಸ್ಪೀಕರ್‌ಗೆ ಸ್ವಾತಂತ್ರವಿರಬೇಕು ಎಂದು ನ್ಯಾಯಾಲಯವು ಎತ್ತಿ ಹಿಡಿದಿದೆ.

ಸ್ಪೀಕರ್ ರಾಜೀನಾಮೆಗಳ ಕುರಿತು ನಿರ್ಧಾರವನ್ನು ತೆಗೆದುಕೊಂಡ ಬಳಿಕ ಅದನ್ನು ತನ್ನ ಮುಂದೆ ಸಲ್ಲಿಸಬೇಕು ಎಂದು ನ್ಯಾಯಾಲಯವು ಸೂಚಿಸಿದೆ. ಸ್ಪೀಕರ್ ನಿರ್ಧಾರ ಮತ್ತು ಅದರಿಂದ ಮೊಳಕೆಯೊಡೆಯುವ ಯಾವುದೇ ಕಾನೂನು ವಿವಾದಗಳು ಭವಿಷ್ಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಪರಿಶೀಲನೆಗೆ ಒಳಗಾಗಲಿದೆ ಎನ್ನುವುದನ್ನು ಇದು ಬೆಟ್ಟು ಮಾಡುತ್ತಿದೆ.

 ನ್ಯಾಯಾಲಯದ ತೀರ್ಪು ಬಾಕಿಯುಳಿದಿರುವ ಅನರ್ಹತೆ ಕಲಾಪ ಮತ್ತು ರಾಜೀನಾಮೆಗಳ ಕುರಿತು ತ್ವರಿತ ನಿರ್ಧಾರವನ್ನು ತೆಗೆದುಕೊಳ್ಳಲು ಸ್ಪೀಕರ್‌ಗೆ ಪ್ರಚೋದಿಸಬಹುದು. ಜು.16ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರ ಪರ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು,ಅನರ್ಹತೆ ಮತ್ತು ರಾಜೀನಾಮೆಗಳ ಕುರಿತು ಸ್ಪೀಕರ್ ‘ನಾಳೆಯೇ’ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದರು.

ಆದಾಗ್ಯೂ ರಾಜೀನಾಮೆಗಳನ್ನು ತಿರಸ್ಕರಿಸಲು ಸ್ಪೀಕರ್‌ಗೆ ಇರುವ ಕಾರಣಗಳು ಸೀಮಿತವಾಗಿವೆ. ರಾಜೀನಾಮೆಯು ಸೂಕ್ತ ನಮೂನೆಯಲ್ಲಿ ಇಲ್ಲದಿದ್ದರೆ ಅಥವಾ ಅದು ಸ್ವಇಚ್ಛೆಯದಲ್ಲ ಅಥವಾ ಬೋಗಸ್ ಆಗಿದೆ ಎಂದಿದ್ದರೆ ಮಾತ್ರ ಅವರು ಅದನ್ನು ತಿರಸ್ಕರಿಸಬಹುದಾಗಿದೆ. ಈ ಪ್ರಕರಣದಲ್ಲಿ ಶಾಸಕರು ತಾವು ತಮ್ಮ ಸ್ವಇಚ್ಛೆಯಿಂದ ರಾಜೀನಾಮೆಗಳನ್ನು ಸಲ್ಲಿಸಿದ್ದೇವೆ ಮತ್ತು ಅವು ನಿಜವಾಗಿವೆ ಎಂದು ಈಗಾಗಲೇ ನ್ಯಾಯಾಲಯದಲ್ಲಿ ಅಫಿಡವಿಟ್‌ಗಳನ್ನು ಸಲ್ಲಿಸಿದ್ದಾರೆ.

ಬುಧವಾರದ ತನ್ನ ಮಧ್ಯಂತರ ತೀರ್ಪು ‘ವಿವೇಕಯುತ’ವಾಗಿದೆ ಎಂದು ಬಣ್ಣಿಸಿರುವ ನ್ಯಾಯಾಲಯವು,ಸ್ಪೀಕರ್ ಅಧಿಕಾರ ಮತ್ತು ಬಂಡುಕೋರ ಶಾಸಕರ ಹಕ್ಕುಗಳ ನಡುವೆ ಸಾಂವಿಧಾನಿಕ ಸಮತೋಲನ ಕಾಯ್ದುಕೊಳ್ಳುವುದಷ್ಟೇ ತನ್ನ ಆದೇಶದ ಉದ್ದೇಶವಾಗಿದೆ ಎಂದು ಹೇಳಿದೆ.

ಬುಧವಾರದ ತೀರ್ಪಿನಿಂದಾಗಿ ನ್ಯಾಯಾಲಯವು ತನ್ನ ಜು.11ರ ಆದೇಶದಿಂದ ಸಂಪೂರ್ಣ ‘ಯು’ತಿರುವನ್ನು ಪಡೆದುಕೊಂಡಿದೆ. ಒಟ್ಟು 15 ಶಾಸಕರ ಪೈಕಿ 10 ಶಾಸಕರ ರಾಜೀನಾಮೆಗಳ ಕುರಿತು ತಕ್ಷಣವೇ ಅಥವಾ ಅದೇ ದಿನ ಸಂಜೆಯೊಳಗೆ ನಿರ್ಧಾರವನ್ನು ಕೈಗೊಳ್ಳುವಂತೆ ಅದು ಆಗ ಸ್ಪೀಕರ್‌ಗೆ ನಿರ್ದೇಶ ನೀಡಿತ್ತು.

ಅತೃಪ್ತರಿಗೆ ಸಂಪೂರ್ಣ ಸ್ವಾತಂತ್ರ:

ಮುಂದಿನ ಆದೇಶದವರೆಗೆ ವಿಧಾನಸಭೆಯ 15 ಸದಸ್ಯರು ಹಾಲಿ ನಡೆಯುತ್ತಿರುವ ಅಧಿವೇಶನದ ಕಲಾಪಗಳಲ್ಲಿ ಭಾಗಿಯಾಗುವಂತೆ ಅವರ ಮೇಲೆ ಒತ್ತಡ ಹೇರುವಂತಿಲ್ಲ ಮತ್ತು ಕಲಾಪದಲ್ಲಿ ಭಾಗವಹಿಸಬೇಕೋ ಬೇಡವೋಎನ್ನುವುದನ್ನು ನಿರ್ಧರಿಸುವ ಆಯ್ಕೆಯನ್ನು ಅವರಿಗೇ ನೀಡಬೇಕು ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News