ಬಿಲ್ ಗೇಟ್ಸ್‌ರನ್ನು ಹಿಂದಿಕ್ಕಿದ ಆರ್ನಾಲ್ಟ್ ಈಗ ವಿಶ್ವದ ಎರಡನೇ ಅತ್ಯಂತ ಶ್ರೀಮಂತ

Update: 2019-07-17 18:40 GMT

ಹೊಸದಿಲ್ಲಿ,ಜು.17: ಕಳೆದ ಏಳು ವರ್ಷಗಳಿಂದಲೂ ಬ್ಲೂಮ್‌ಬರ್ಗ್ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದ ಮೈಕ್ರೋಸಾಫ್ಟ್ ಸಹಸ್ಥಾಪಕ,ಅಮೆರಿಕದ ಬಿಲ್ ಗೇಟ್ಸ್ ಅವರನ್ನು ಮಂಗಳವಾರ ಓವರ್‌ಟೇಕ್ ಮಾಡುವ ಮೂಲಕ ಫ್ರಾನ್ಸ್‌ನ ಬೆರ್ನಾರ್ಡ್ ಆರ್ನಾಲ್ಟ್ ಅವರು ಈಗ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಗೇಟ್ಸ್ ಈಗ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಅಮಝಾನ್‌ನ ಸ್ಥಾಪಕ ಜೆಫ್ ಬೆಜೊಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಐಷಾರಾಮಿ ವಸ್ತುಗಳನ್ನು ತಯಾರಿಸುವ ಎಲ್‌ವಿಎಂಎಚ್‌ ಒಡೆತನವನ್ನು ಹೊಂದಿರುವ ಆರ್ನಾಲ್ಟ್ ಅವರ ನಿವ್ವಳ ಆಸ್ತಿ ವೌಲ್ಯ ಈಗ 107.6 ಬಿ.ಡಾ.ಗಳಿಗೇರಿದ್ದು,ಇದು ಗೇಟ್ಸ್ ಅವರ ನಿವ್ವಳ ಆಸ್ತಿ ಮೌಲ್ಯಕ್ಕಿಂತ 200 ಮಿ.ಡಾ.ಗಳಷ್ಟು ಅಧಿಕವಾಗಿದೆ. ಆರ್ನಾಲ್ಟ್ 2019ರಲ್ಲಿ ತನ್ನ ಆಸ್ತಿಯನ್ನು 30 ಬಿ.ಡಾ.ಗಳಷ್ಟು ಹೆಚ್ಚಿಸಿಕೊಂಡಿದ್ದು,ಇದು ಬ್ಲೂಮ್‌ಬರ್ಗ್ ಪಟ್ಟಿಯಲ್ಲಿರುವ 500 ಕುಬೇರರ ಪೈಕಿ ಅತ್ಯಂತ ಹೆಚ್ಚಿನ ವ್ಯಕ್ತಿಗತ ಗಳಿಕೆಯಾಗಿದೆ.

70ರ ಹರೆಯದ ಆರ್ನಾಲ್ಟ್ ಕಳೆದ ತಿಂಗಳಷ್ಟೇ ಈ ಪ್ರತಿಷ್ಠಿತ ಪಟ್ಟಿಗೆ ಸೇರ್ಪಡೆಗೊಂಡಿದ್ದರು. ಆಗಷ್ಟೇ ಅವರ ನಿವ್ವಳ ಆಸ್ತಿ ಮೌಲ್ಯ ಮೊದಲ ಬಾರಿಗೆ 100 ಬಿ.ಡಾ.ದಾಟಿತ್ತು. ಬೆಜೊಸ್,ಆರ್ನಾಲ್ಟ್ ಮತ್ತು ಗೇಟ್ಸ್ ಅವರ ಸಂಪತ್ತನ್ನು ಸೇರಿಸಿದರೆ ಅದು ವಾಲ್‌ಮಾರ್ಟ್,ಎಕ್ಸಾನ್ ಮೊಬಿಲ್ ಕಾರ್ಪ್ ಮತ್ತು ವಾಲ್ಟ್ ಡಿಸ್ನಿ ಕಂ.ಸೇರಿದಂತೆ ಅಮೆರಿಕದ ಶೇರು ವಿನಿಮಯ ಕೇಂದ್ರ ನಾಸ್ಡಾಕ್‌ನ ಎಸ್ ಆ್ಯಂಡ್ ಪಿ ಇಂಡೆಕ್ಸನಲ್ಲಿಯ ಹೆಚ್ಚುಕಡಿಮೆ ಪ್ರತಿ ಕಂಪನಿಯ ವೈಯಕ್ತಿಕ ಮಾರುಕಟ್ಟೆ ಮೌಲ್ಯವನ್ನು ಮೀರಿಸುತ್ತದೆ.

ಅಗ್ನಿ ಅವಘಡಕ್ಕೆ ತುತ್ತಾದ ನೋಟ್ರೆ ಡೇಮ್ ಕೆಥೆಡ್ರಲ್‌ನ ಪುನರ್‌ನಿರ್ಮಾಣಕ್ಕಾಗಿ ಕಳೆದ ಎಪ್ರಿಲ್‌ನಲ್ಲಿ 650 ಮಿ.ಡಾ.ಗೂ ಅಧಿಕ ಮೊತ್ತವನ್ನು ವಾಗ್ದಾನ ಮಾಡಿರುವವರಲ್ಲಿ ಆರ್ನಾಲ್ಟ್ ಮತ್ತು ಅವರ ಕುಟುಂಬ ಒಂದಾಗಿದೆ. ತನ್ನ ಫ್ಯಾಮಿಲಿ ಹೋಲ್ಡಿಂಗ್ ಕಂಪನಿಯ ಮೂಲಕ ಎಲ್‌ವಿಎಂಎಚ್‌ನಲ್ಲಿ ಅರ್ಧದಷ್ಟು ನಿಯಂತ್ರಣ ಹೊಂದಿರುವ ಆರ್ನಾಲ್ಟ್ 1949ರಲ್ಲಿ ತಾನು ಹುಟ್ಟುವ ಮೂರು ವರ್ಷಗಳಿಗೆ ಮೊದಲು ಸ್ಥಾಪನೆಯಾಗಿದ್ದ ಫ್ಯಾಷನ್ ಕಂಪನಿ ಕ್ರಿಶ್ಚಿಯನ್ ಡಯರ್ ನಲ್ಲಿ ಶೇ.97ರಷ್ಟು ಪಾಲು ಬಂಡವಳವನ್ನೂ ಹೊಂದಿದ್ದಾರೆ.

ಅಂದ ಹಾಗೆ ಗೇಟ್ಸ್ ದಾನಕಾರ್ಯಗಳಿಗಾಗಿ ತನ್ನ ಸಂಪತ್ತಿನ ಬಹುಭಾಗವನ್ನು ವಿನಿಯೋಗಿಸಿರದಿದ್ದರೆ ಇಂದಿಗೂ ವಿಶ್ವದ ನಂ.1 ಶ್ರೀಮಂತ ಆಗಿಯೇ ಉಳಿಯುತ್ತಿದ್ದರು. ಅವರು ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನಕ್ಕೆ 35 ಬಿ.ಡಾ.ಗೂ ಹೆಚ್ಚಿನ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News