ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣ: ನಾಲ್ವರು ಸಾವು

Update: 2019-07-18 18:39 GMT

ಬೆಂಗಳೂರು, ಜು.18: ನಗರದ ಹೊರವಲಯದ ದೇವಹಳ್ಳಿ, ಕೆಆರ್‌ಪುರಂ ಹಾಗೂ ವೈಟ್‌ಫೀಲ್ಡ್ ವಿಭಾಗ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟು, ಓರ್ವ ಗಾಯಗೊಂಡಿದ್ದಾನೆ.

ಗುರುವಾರ ಮುಂಜಾನೆ ಇಲ್ಲಿನ ವೈಟ್‌ಫೀಲ್ಡ್‌ನ ಕಾಡುಗೋಡಿ ಮುಖ್ಯರಸ್ತೆಯ ಸಫಲ್ ಎಣ್ಣೆ ಕಾರ್ಖಾನೆ ಮುಂಭಾಗ ಬಿಎಂಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಹೋಗುತ್ತಿದ್ದ ಖಾಸಗಿ ಕಂಪೆನಿಯ ಉದ್ಯೋಗಿ ಮೃತಪಟ್ಟಿದ್ದಾರೆ.

ಬಳ್ಳಾರಿ ಮೂಲದ ವಿಜ್ಞಾಸಾಗರ್ (23) ಮೃತ ಉದ್ಯೋಗಿ ಎಂದು ತಿಳಿದುಬಂದಿದ್ದು, ಇವರು ಹೊಸಕೋಟೆಯಲ್ಲಿ ವಾಸವಿದ್ದರು. ಕೆಲಸಕ್ಕೆಂದು ಬೈಕ್‌ನಲ್ಲಿ ಹೋಗುವಾಗ ಕಾಡುಗೋಡಿ ಓ ಫಾರಂ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿವಿದ್ದು, ಘಟನೆ ಸಂಬಂಧ ಬಿಎಂಟಿಸಿ ಬಸ್ ಚಾಲಕನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಸವಾರ ಸಾವು: ಬುಧವಾರ ರಾತ್ರಿ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದ ರಮೇಶ್ ಕುಮಾರ್(45) ಎಂಬುವವರು ಲಾರಿ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.

ಗುಜರಾತ್ ಮೂಲದ ರಮೇಶ್ ಕುಮಾರ್ ಕೂಲಿ ಕೆಲಸ ಮಾಡಿಕೊಂಡಿದ್ದು, ಕೆಲಸ ಮುಗಿಸಿಕೊಂಡು ವೈಟ್‌ಫೀಲ್ಡ್‌ನ ಮನೆಗೆ ಸೈಕಲ್‌ನಲ್ಲಿ ಬರುವಾಗ ಲಾರಿ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಈ ಎರಡೂ ಪ್ರಕರಣಗಳನ್ನು ದಾಖಲಿಸಿರುವ ವೈಟ್‌ಫೀಲ್ಡ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಯುವಕ ಮೃತ್ಯು: ಕೆ.ಆರ್.ಪುರಂನ ಟಿನ್‌ಫ್ಯಾಕ್ಟರಿಯ ಮೇಲುಸೇತುವೆ ಬಳಿ ಬೋನ್ಸ್ ಆಪ್‌ನ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಕೇರಳ ಮೂಲದ ಶರತ್(25) ಎಂಬುವವರು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಮೃತಪಟ್ಟಿದ್ದು, ಹಿಂಬದಿ ಸವಾರ ಅಖಿಲ್ ಜೋಸೆಫ್ (26) ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕೇರಳ ಮೂಲದ ಇವರಿಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೋರಮಂಗಲದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.

ಬುಧವಾರ ರಾತ್ರಿ ಬೌನ್ಸ್ ಸ್ಕೂಟರ್ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗಾಯಗೊಂಡ ಅಖಿಲ್ ಜೋಸೆಫ್, ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಕೆ.ಆರ್. ಪುರಂ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಸಾವು: ದೇವನಹಳ್ಳಿಯ ಕೋಟೆ ಕ್ರಾಸ್ ಬಳಿ ಬುಧವಾರ ರಾತ್ರಿ 9ರ ವೇಳೆ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾರು ಹರಿದು ಸಾವನ್ನಪ್ಪಿದ್ದಾರೆ.

ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಾರು ಹರಿದು ಮೃತಪಟ್ಟ ವ್ಯಕ್ತಿಯು ಸುಮಾರು 60 ವರ್ಷ ವಯಸ್ಸಿನವರಾಗಿದ್ದು, ಸದ್ಯಕ್ಕೆ ಅವರ ಹೆಸರು, ವಿಳಾಸ ತಿಳಿದುಬಂದಿಲ್ಲ. ದೇವನಹಳ್ಳಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News