ಸನ್ ರೈಸರ್ಸ್ ಹೈದರಾಬಾದ್ ಗೆ ಟ್ರೆವರ್ ಬೆಲಿಸ್ ಕೋಚ್

Update: 2019-07-19 05:01 GMT

ಹೊಸದಿಲ್ಲಿ, ಜು.18: ಇಂಗ್ಲೆಂಡ್‌ನ ವಿಶ್ವಕಪ್‌ವಿಜೇತ ಕೋಚ್ ಟ್ರೆವರ್ ಬೆಲಿಸ್ ಗುರುವಾರ ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್‌ನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಹಾಲಿ ಕೋಚ್ ಆಸ್ಟ್ರೇಲಿಯದ ಟಾಮ್ ಮೂಡಿ ಅವರಿಂದ ತೆರವಾದ ಸ್ಥಾನವನ್ನು ಬೆಲಿಸ್ ತುಂಬಲಿದ್ದಾರೆ.

ಮುಂದಿನ ತಿಂಗಳು ಆ್ಯಶಸ್ ಸರಣಿ ಆರಂಭವಾದ ಬಳಿಕ ಬೆಲಿಸ್ ಇಂಗ್ಲೆಂಡ್ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಆಸ್ಟ್ರೇಲಿಯದ ಮಾಜಿ ಆಲ್‌ರೌಂಡರ್ ಮೂಡಿ ಕಳೆದ ಏಳು ವರ್ಷಗಳಿಂದ ಸನ್‌ರೈಸರ್ಸ್ ತಂಡದ ಕೋಚ್ ಆಗಿದ್ದರು. 2016ರಲ್ಲಿ ಟ್ರೋಫಿ ಜಯಿಸಲು ಮಾರ್ಗದರ್ಶನ ನೀಡಿದ್ದರು.

ಎಚ್ಚರಿಕೆಯ ಪರಿಗಣನೆಯ ಬಳಿಕ ಸನ್‌ರೈಸರ್ಸ್ ಫ್ರಾಂಚೈಸಿ ಹೆಡ್ ಕೋಚಿಂಗ್ ಪಾತ್ರದ ಬಗ್ಗೆ ಹೊಸ ದಿಕ್ಕಿನತ್ತ ತೆರಳಲು ನಿರ್ಧರಿಸಲಾಗಿದೆ. ಟಾಮ್ ಮೂಡಿಗೆ ದಾರಿ ಮಾಡಿಕೊಡಲಾಗುವುದು ಎಂದು ಟೀಮ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಟ್ರೆವರ್ ಈಗಾಗಲೇ ಕೋಲ್ಕತಾ ನೈಟ್ ರೈಡರ್ಸ್ ತಂಡ ಎರಡು ಬಾರಿ ಐಪಿಎಲ್ ಟ್ರೋಫಿ ಜಯಿಸಲು ಮಾರ್ಗದರ್ಶನ ನೀಡಿದ್ದರು. ಸಿಡ್ನಿ ಸಿಕ್ಸರ್ ತಂಡ ಬಿಗ್ ಬ್ಯಾಶ್ ಲೀಗ್ ಟ್ರೋಫಿ ಗೆಲ್ಲಲು ನೆರವಾಗಿದ್ದರು.

ಹೊಸ ಕೋಚ್ ಅಧಿಕಾರದ ಅವಧಿಯನ್ನು ಈ ತನಕ ಬಹಿರಂಗಪಡಿಸಲಾಗಿಲ್ಲ. ಸನ್‌ರೈಸರ್ಸ್ ಫ್ರಾಂಚೈಸಿ ಮೂಡಿ ನೀಡಿದ್ದ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದೆ.

‘‘ನಾವು ಟಾಮ್ ಮೂಡಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇವೆ. ಅವರು ಫ್ರಾಂಚೈಸಿ ಮೇಲೆ ಭಾರೀ ಪರಿಣಾಮಬೀರಿದ್ದಾರೆ. ಕಳೆದ ಏಳು ವರ್ಷಗಳಲ್ಲಿ 5 ಬಾರಿ ಪ್ಲೇ-ಆಫ್‌ಗೆ ತೇರ್ಗಡೆಯಾಗಲು ನೆರವಾಗಿದ್ದಾರೆ. 2016ರಲ್ಲಿ ಚಾಂಪಿಯನ್‌ಪಟ್ಟಕ್ಕೇರಲು ನೆರವಾಗಿದ್ದಾರೆ’’ ಎಂದು ಫ್ರಾಂಚೈಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಸನ್‌ರೈಸರ್ಸ್ ಫ್ರಾಂಚೈಸಿ 2019ರ ಐಪಿಎಲ್‌ನಲ್ಲಿ ಎಲಿಮಿನೇಟರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೋತ ಬಳಿಕ ನಾಲ್ಕನೇ ಸ್ಥಾನ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News