ವಂಚನೆ ಪ್ರಕರಣ: ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಬಂಧನ

Update: 2019-07-19 17:56 GMT

ಹೊಸದಿಲ್ಲಿ, ಜು. 19: ಪೋಂಝಿ ಹಗರಣಕ್ಕೆ ಸಂಬಂಧಿಸಿ ಐ ಮೊನಿಟರಿ ಅಡ್ವೈಸರಿ ಜುವೆಲ್ಸ್ (ಐಎಂಎ) ಮಾಲಕ ಮುಹಮ್ಮದ್ ಮನ್ಸೂರ್‌ನನ್ನು ಹೊಸದಿಲ್ಲಿಯಲ್ಲಿ ಶುಕ್ರವಾರ ಬಂಧಿಸಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಖಾನ್‌ನನ್ನು ವಿಚಾರಣೆಗೆ ಒಳಪಡಿಸಿದೆ.

ದುಬೈಗೆ ಪರಾರಿಯಾಗಿದ್ದ ಐಎಂಎ ಜುವೆಲ್ಸ್ ಮಾಲಕ ದಿಲ್ಲಿಗೆ ಆಗಮಿಸಿದ ಸಂದರ್ಭ ಬಂಧಿಸಲಾಗಿದೆ. ಭಾರತಕ್ಕೆ ಮರಳಿ ಬರುವಂತೆ ಖಾನ್‌ನ ಮನವೊಲಿಸಲಾಗಿತ್ತು ಎಂದು ಐಎಂಎ ಕುರಿತು ತನಿಖೆ ನಡೆಸುತ್ತಿರುವ ತನಿಖಾ ತಂಡ ಹೇಳಿದೆ.

ಖಾನ್ ವಿರುದ್ಧ ಸಿಟ್ ಹಾಗೂ ಜಾರಿ ನಿರ್ದೇಶನಾಲಯ ಲುಕೌಟ್ ನೋಟಿಸ್ ಹೊರಡಿಸಿತ್ತು.

 ಖಾನ್‌ನಿಂದ 1.5 ಕೋಟಿ ರೂಪಾಯಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಜುಲೈ 8ರಂದು ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತ ಬಿ.ಎಂ. ವಿಜಯ್ ಶಂಕರ್‌ನನ್ನು ಸಿಟ್ ಬಂಧಿಸಿತ್ತು. ಕಂಪೆನಿಯ ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಬಿ.ಎಂ. ವಿಜಯ್ ಶಂಕರ್ ಕಂಪೆನಿಗೆ ಪೂರಕವಾಗಿ ವರದಿ ಸಲ್ಲಿಸಲು ಖಾನ್‌ನಿಂದ ಲಂಚ ಪಡೆದಿದ್ದರು.

ಕರ್ನಾಟಕದಲ್ಲಿ ಪೋಂಝಿ ಯೋಜನೆ ನಡೆಸಿ 30,000ಕ್ಕೂ ಅಧಿಕ ಜನರಿಗೆ 5,000 ಕೋಟಿ ರೂಪಾಯಿ ವಂಚಿಸಿರುವುದಾಗಿ ಖಾನ್ ವಿರುದ್ಧ ಆರೋಪಿಸಲಾಗಿದೆ. ಖಾನ್ ಕಂಪೆನಿಯಲ್ಲಿ ತಾವು ಹಣ ಹೂಡಿರುವುದಾಗಿ ಬೆಂಗಳೂರು, ಹೈದರಾಬಾದ್, ಹೊಸದಿಲ್ಲಿ ಹಾಗೂ ತಮಿಳುನಾಡಿನ ಜನರು ಹೇಳಿದ್ದಾರೆ. ಬೆಂಗಳೂರು ಮೂಲದ ಈ ಕಂಪೆನಿ ಹಲವು ವರ್ಷಗಳಿಂದ ಹೂಡಿಕೆ ಸಂಗ್ರಹಿಸುತ್ತಿತ್ತು. ಹೂಡಿಕೆದಾರರಿಗೆ ಪ್ರತಿ ತಿಂಗಳು ಶೇ. 3 ಹಣ ಹಿಂದಿರುಗಿಸುವ ಭರವಸೆ ನೀಡಿತ್ತು. ಆದರೆ, ಜೂನ್ 12ರಂದು ಈ ಕಂಪೆನಿಯ ಕಚೇರಿಯ ಎದುರು ಸಾವಿರಾರು ಜನರು ಸೇರಿ, ಕಂಪೆನಿ ತಮ್ಮ ಹೂಡಿಕೆಗೆ ಕಳೆದ ಎರಡು ತಿಂಗಳಿಂದ ರಿಟರ್ನ್ಸ್ ನೀಡಿಲ್ಲ ಎಂದು ಆರೋಪಿಸಿದ ಬಳಿಕ ಈ ವಂಚನೆ ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News