ಐಸಿಸಿ ಹಾಲ್ ಆಫ್ ಫೇಮ್‌ಗೆ ತೆಂಡುಲ್ಕರ್, ಡೊನಾಲ್ಡ್ ಸೇರ್ಪಡೆ

Update: 2019-07-19 05:14 GMT

ಲಂಡನ್, ಜು.19: ಭಾರತೀಯ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್, ದಕ್ಷಿಣ ಆಫ್ರಿಕದ ಮಾಜಿ ವೇಗದ ಬೌಲರ್ ಅಲನ್ ಡೊನಾಲ್ಡ್ ಹಾಗೂ ಎರಡು ಬಾರಿ ವಿಶ್ವಕಪ್ ಜಯಿಸಿರುವ ಆಸ್ಟ್ರೇಲಿಯ ಕ್ರಿಕೆಟ್ ಆಟಗಾರ್ತಿ ಕಥ್ರಿನ್ ಫಿಟ್ಝ್‌ಪ್ಯಾಟ್ರಿಕ್ ಪ್ರತಿಷ್ಠಿತ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿದ್ದಾರೆ.

‘‘ಇದೊಂದು ನನ್ನ ಪಾಲಿಗೆ ದೊಡ್ಡ ಗೌರವ’’ಎಂದು ಲಂಡನ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 46ರ ಹರೆಯದ ತೆಂಡುಲ್ಕರ್ ಪ್ರತಿಕ್ರಿಯೆ ನೀಡಿದರು.

ಮಾಜಿ ಬಲಗೈ ದಾಂಡಿಗ ತೆಂಡುಲ್ಕರ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಎರಡರಲ್ಲೂ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಎರಡೂ ಮಾದರಿ ಕ್ರಿಕೆಟ್‌ನಲ್ಲಿ 34,357 ರನ್ ಗಳಿಸಿದ್ದು, 100 ಅಂತರ್‌ರಾಷ್ಟ್ರೀಯ ಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ.

52ರ ಹರೆಯದ ಡೊನಾಲ್ಡ್ ಕ್ರಿಕೆಟ್ ಕಂಡ ಅತ್ಯಂತ ಉತ್ತಮ ಬೌಲರ್ ಆಗಿದ್ದು, ಟೆಸ್ಟ್‌ನಲ್ಲಿ 330 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 272 ವಿಕೆಟ್‌ಗಳನ್ನು ಪಡೆದಿದ್ದಾರೆ. 2003ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.

ಮಹಿಳಾ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಆಗಿರುವ ಫಿಟ್ಝ್‌ಪ್ಯಾಟ್ರಿಕ್ ಏಕದಿನ ಕ್ರಿಕೆಟ್‌ನಲ್ಲಿ 180 ಹಾಗೂ ಟೆಸ್ಟ್‌ನಲ್ಲಿ 60 ವಿಕೆಟ್‌ಗಳನ್ನು ಉರುಳಿಸಿದ್ದರು. ಕೋಚ್ ಆಗಿ ಆಸ್ಟ್ರೇಲಿಯ ಮಹಿಳಾ ತಂಡ ಮೂರು ಬಾರಿ ವಿಶ್ವಕಪ್‌ನ್ನು ಜಯಿಸಲು ಮಾರ್ಗದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News