ಭಾರತದಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಿಗಾ ಇಡಿ ಎಂದು ಕೆನಡಾ, ಬ್ರಿಟನ್ ಸರಕಾರಗಳಿಗೆ ಪತ್ರ ಬರೆದ ಕಾರವಾನ್ ಸಂಪಾದಕ

Update: 2019-07-19 06:07 GMT
ವಿನೋದ್ ಕೆ ಜೋಸ್

ಹೊಸದಿಲ್ಲಿ : ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಹೆಚ್ಚುತ್ತಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ  'ನಿಗಾ' ವಹಿಸಬೇಕೆಂದು ಕೋರಿ ದಿ ಕಾರವಾನ್ ಕಾರ್ಯನಿರ್ವಾಹಕ ಸಂಪಾದಕ ವಿನೋದ್ ಕೆ ಜೋಸ್ ಅವರು  ಬ್ರಿಟನ್ ಹಾಗೂ ಕೆನಡಾ ಸರಕಾರಗಳಿಗೆ ಪತ್ರ ಬರೆದಿದ್ದಾರೆ.

ಲಂಡನ್ ನಲ್ಲಿ ಇತ್ತೀಚೆಗೆ ನಡೆದ ಮಾಧ್ಯಮ ಸ್ವಾತಂತ್ರ್ಯ ಕುರಿತಾದ ಜಾಗತಿಕ ಸಮ್ಮೇಳನದ ಅಂಗವಾಗಿ 'ಧರ್ಮ ಮತ್ತು ಮಾಧ್ಯಮ' ವಿಚಾರದ ಮೇಲಿನ ಚರ್ಚಾ ಕಾರ್ಯಕ್ರಮದಲ್ಲಿ ಜೋಸ್ ಅವರು ಭಾರತದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆ ಹಾಗೂ ಕ್ಷೀಣಿಸುತ್ತಿರುವ ಮಾಧ್ಯಮ ಸ್ವಾತಂತ್ರ್ಯ ಕುರಿತಂತೆ ಮಾತನಾಡಿದ ನಂತರ ಅವರ ಹಾಗೂ ಪ್ರಸಾರ ಭಾರತಿ ಅಧ್ಯಕ್ಷ ಎ ಸೂರ್ಯ ಪ್ರಕಾಶ್ ಅವರ ನಡುವಿನ ವ್ಯಾಗ್ಯುದ್ಧದ ಹಿನ್ನೆಲೆಯಲ್ಲಿ ಈ ಪತ್ರಗಳನ್ನು ಜೋಸ್ ಅವರು ಬರೆದಿದ್ದಾರೆ.

ಲಂಡನ್ ಕಾರ್ಯಕ್ರಮದ ನಂತರ ನಿಮಗೆ ಆಶ್ರಯ ಬೇಕೇ ಎಂದು ವಿಶ್ವ ಸಂಸ್ಥೆಯ ಅಧಿಕಾರಿಯೊಬ್ಬರು ಕೇಳಿದ್ದರೆಂದು ಹಾಗೂ ತಾನು ನಿರಾಕರಿಸಿದ್ದಾಗಿಯೂ ಜೋಸ್ ಅವರು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್ ಹಾಗೂ ಕೆನಡಾ ವಿದೇಶಾಂಗ ಸಚಿವ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರಿಗೆ ಬರೆದ ಪತ್ರಗಳಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರಗಳನ್ನು ದಿ ಕಾರವಾನ್ ಪ್ರಕಟಿಸಿದೆ.

ಜೋಸ್ ಅವರನ್ನು ಲಂಡನ್ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಆಹ್ವಾನಿಸಿದ್ದರೆ, ಪ್ರಸಾರ ಭಾರತಿ ಅಧ್ಯಕ್ಷರ ಸಹಿತ ರಾಜ್ಯಸಭಾ ಸದಸ್ಯ ಸ್ವಪನ್ ದಾಸ್ ಗುಪ್ತಾ ಹಾಗೂ ರಾಜಕೀಲ ವಿಶ್ಲೇಷಕ ಕಂಚನ್ ಗುಪ್ತಾ ಅವರು ಭಾರತ ಸರಕಾರವನ್ನು ಪ್ರತಿನಿಧಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಳುಹಿಸಿದ್ದ ''ನಾನ್-ಅಫೀಶಿಯಲ್ ನಿಯೋಗದ' ಭಾಗವಾಗಿದ್ದರು.

ಸಮ್ಮೇಳನದಲ್ಲಿ ಜೋಸ್ ಅವರು ಮಾತನಾಡಿದ ನಂತರದ ಪ್ರಶ್ನೋತ್ತರ ಅಧಿವೇಶನದಲ್ಲಿ ಪ್ರಸಾರ ಭಾರತಿ ಅಧ್ಯಕ್ಷ ಸೂರ್ಯ ಪ್ರಕಾಶ್ ತಾವು ಜೋಸ್ ಅವರ ಮಾತುಗಳಿಗೆ ಆಕ್ಷೇಪ ಸೂಚಿಸುವುದಾಗಿ ಹಾಗೂ ಭಾರತ ವಿಶ್ವದ ಅತ್ಯಂತ ದೊಡ್ಡ ಹಾಗೂ ಸ್ಪಂದನಾಶೀಲ ಪ್ರಜಾಪ್ರಭುತ್ವ ವಾಗಿದೆ ಎಂದಿದ್ದರು.

ಆದರೆ ಆ ಕಾರ್ಯಕ್ರಮದ ನಂತರ ಭಾರತದ ರಾಷ್ಟ್ರೀಯ ಮಾಧ್ಯಮದಲ್ಲಿ ತಮ್ಮ ವಿರುದ್ಧ ಅವಹೇಳನಾತ್ಮಕ ಹಾಗೂ ತಿರುಚಲ್ಪಟ್ಟ ವರದಿಗಳು ಪ್ರಕಟವಾಗುತ್ತಿವೆ ಹಾಗೂ ಇವುಗಳು ಪ್ರಕಾಶ್ ಅವರಿಗೆ 'ಪಿಆರ್ ಪ್ಲಗ್' ಆಗಿಬಿಟ್ಟಿವೆ'' ಎಂದು ತಮ್ಮ ಪತ್ರದಲ್ಲಿ ಜೋಸ್ ವಿವರಿಸಿದ್ದಾರೆ.

''ಸೂರ್ಯಪ್ರಕಾಶ್ ಅವರು ಮುಖ್ಯಸ್ಥರಾಗಿರುವ ಸರಕಾರಿ ಒಡೆತನದ ಮಾಧ್ಯಮ ನಂತರ ನಾನು ಲಂಡನ್ ನಲ್ಲಿ ಹೇಳಿದ್ದನ್ನು ಖಂಡಿಸಿ ಎರಡು ಕಂತುಗಳ ಕಾರ್ಯಕ್ರಮವನ್ನೂ ಪ್ರಸ್ತುತಪಡಿಸಿದೆ,'' ಎಂದು ಪತ್ರದಲ್ಲಿ ದೂರಿರುವ ಜೋಸ್  ''ಭಾರತವನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸಿದ್ದಾಗಿ ಹಾಗೂ ಲಂಡನ್ ನಲ್ಲಿ ಒದಗಿಸಲಾದಂತಹ ವೇದಿಕೆಗಳನ್ನು ತಮ್ಮದೇ ರಾಜಕೀಯ ಅಜೆಂಡಾ ಮುಂದಿಡಲು ಕೆಲವರು ಬಳಸುತ್ತಿದ್ದಾರೆ ಎಂದು ದೂರಿದ ಪ್ರಕಾಶ್  ನನ್ನ ಭಾಷಣದಲ್ಲಿ ಕೆಲ ತಪ್ಪುಗಳಿದ್ದವು ಎಂದು  ಹೇಳಿದ್ದರೂ ಯಾವುದೇ ತಪ್ಪನ್ನು ಬೊಟ್ಟು ಮಾಡಿ ತೋರಿಸಿಲ್ಲ'' ಎಂದು ಜೋಸ್ ಬರೆದಿದ್ದಾರೆ.

''ಅಸಮ್ಮತಿ ಸೂಚಕರನ್ನು ವೈರಿಗಳೆಂಬ ಹಣೆ ಪಟ್ಟಿ ಕಟ್ಟಲು ಭಾರತದ ಆಡಳಿತ ಪಕ್ಷದ ಮಾತೃ ಸಂಸ್ಥೆ ಶ್ರಮಿಸಿ ಈ ಮೂಲಕ ಕಿರುಕುಳ ಹಾಗೂ  ಸಂಭಾವ್ಯ ಹಿಂಸೆಯನ್ನೂ ಸಮರ್ಥಿಸುವ ಯತ್ನ ನಡೆಯುತ್ತಿದೆ,'' ಎಂದೂ ಜೋಸ್ ಆರೋಪಿಸಿದ್ದಾರೆ. ಆದರೆ ಜೋಸ್ ಅವರ ಆರೋಪಗಳನ್ನು ಸೂರ್ಯ ಪ್ರಕಾಶ್ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News