ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರ ಮಹತ್ವದ್ದು: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

Update: 2019-07-19 12:32 GMT

ಚಿಕ್ಕಮಗಳೂರು, ಜು.19: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗದ ಪಾತ್ರ ಅತೀ ಮುಖ್ಯವಾದದ್ದು, ಪ್ರಸಕ್ತ ಪ್ರತಿಕಾರಂಗ ಬಂಡವಾಳಶಾಹಿಗಳ ಕೈಗೊಂಬೆಯಾಗುತ್ತಿದ್ದು, ಪ್ರತಿಕಾರಂಗದ ವಿಶ್ವಾರ್ಹತೆ ಕಡಿಮೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅಭಿಪ್ರಾಯಿಸಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಆಯೋಜಿಸಿದ್ದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಹಾಗೂ ಪತ್ರಕರ್ತರಿಗೆ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಂಪ್ರದಾಯಿಕ ಮುದ್ರಣ ಮಾದ್ಯಮ ಹಿಂದಿನಿಂದಲೂ ಇದೆ. ಅದಾದ ನಂತರ ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಹುಟ್ಟಿಕೊಂಡರೂ ಸಹ ಮುದ್ರಣ ಮಾಧ್ಯಮ ಸರಳ ಭಾಷೆ ಹಾಗೂ ನಿಖರತೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.

ದೃಶ್ಯ ಮಾದ್ಯಮಗಳಲ್ಲಿ ಭಾಷೆಯ ಹಿಡಿತವಿಲ್ಲದೆ ಒಂದು ವಿಷಯವನ್ನು ಅತೀರೆಕವಾಗಿ ಬಿಂಬಿಸಲಾಗುತ್ತಿದೆ.  ಅದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಸುದ್ದಿಗಳು ಸತ್ಯವೋ ಅಸತ್ಯವೋ ಎಂಬ ಸಂಶಯ ಜನರಲ್ಲಿ ಕಾಡುತ್ತದೆ ಎಂದ ಅವರು, ಮುದ್ರಣ ಮಾದ್ಯಮ ಇನಷ್ಟು ಗಟ್ಟಿಗೊಳ್ಳಬೇಕು ಹಾಗೂ ಸತ್ಯಕ್ಕೆ ಹತ್ತಿರವಾಗಬೇಕು. ಒಂದು ಫೇಕ್ ಸುದ್ದಿ ಸಮಾಜದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಆದ್ದರಿಂದ ಒಂದು ವಿಷಯವನ್ನು ಸುದ್ದಿ ಮಾಡಬೇಕಾದರೆ ಅತ್ಯಂತ ಎಚ್ಚರ ವಹಿಸಬೇಕು ಹಾಗೂ ಸತ್ಯಸತ್ಯಾತೆಯನ್ನು ಪರಿಶೀಲಿಸಿ ಬರೆಯಬೇಕು ಎಂದು ಕಿವಿಮಾತು ಹೇಳಿದರು.

ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಮಾತನಾಡಿ, ದೇಶದಲ್ಲಿ ಅನೇಕ ಜಾತಿ, ಮತಗಳಿವೆ. ಧರ್ಮಕ್ಕೆ ಅನುಸಾರವಾದ ಧರ್ಮಗ್ರಂಥಗಳಿವೆ. ಆದರೆ ಇಡೀ ಭಾರತೀಯರಿಗೆ ಸಂವಿಧಾನವೇ ಪವಿತ್ರ ಗ್ರಂಥ. ಸಂವಿಧಾನದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮೂರು ಆಧಾರಸ್ತಂಭಗಳ ಜೊತೆಗೆ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ಕಾರ್ಯ ನಿರ್ವಹಿಸುತ್ತಿರುವುದು  ಪತ್ರಿಕಾರಂಗದ ಮಹತ್ವವನ್ನು ತಿಳಿಸುತ್ತದೆ ಎಂದರು.

ಪತ್ರಿಕಾರಂಗ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಒಂದಾದ ವಾಕ್ ಸ್ವಾತಂತ್ರ್ಯ್ರದ 19(ಎ) ವಿಧಿಯಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಂತ ಏನುಬೇಕಾದರೂ ಬರೆಯಲು ಸಾಧ್ಯವಿಲ್ಲ, ಇದು ನಿರ್ಬಂಧಗಳನ್ನು ಒಳಗೊಂಡಿದೆ ಎಂದ ಅವರು, ಪತ್ರಿಕಾರಂಗ ಎಂದ ಕೂಡಲೇ ನೆನಪಿಗೆ ಬರುವವರು ಮಹಾತ್ಮ ಗಾಂಧೀಜಿ ಅವರು, ಆಫ್ರೀಕಾ ದೇಶದಲ್ಲಿ ಅವರು ಹುಟ್ಟುಹಾಕಿದ ಇಂಡಿಯನ್ ಓಪಿನಿಯನ್ ಪತ್ರಿಕೆ ಇಡೀ ಆಫ್ರೀಕಾ ದೇಶಕ್ಕೆ ಮಾದರಿಯಾಯಿತು. ಅದೇ ರೀತಿ ಭಾರತದಲ್ಲಿ ಹುಟ್ಟುಹಾಕಿದ ಯಂಗ್ ಇಂಡಿಯಾ ಮತ್ತು  ಹರಿಜನ ಪತ್ರಿಕೆ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಪತ್ರಿಕಾರಂಗ ಇರುವುದು ಹಣಗಳಿಸಲು ಅಲ್ಲ, ಜನರ ಸೇವೆಗೆ ಎಂದು ಮಹಾತ್ಮಗಾಂಧೀಜಿಯವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಪತ್ರಿಕಾರಂಗ ಇಲ್ಲದಿದ್ದರೆ ನಾವು ಕಾಡಿನಲ್ಲಿ ಇದ್ದಂತೆ. ನಮ್ಮಲ್ಲಿ ಜಾಗೃತಿ ಮೂಡಿಸುವ ಕೆಲಸ ಪತ್ರಿಕಾರಂಗ ಮಾಡುತ್ತಿದೆ. ಪೆನ್ನು ಖಡ್ಗಕ್ಕಿಂತ ಹರಿತ, ಅಂತಹ ಪೆನ್ನಿನಿಂದ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಪತ್ರಕರ್ತರು ಹಾಗೂ ಕಾನೂನಿನಿಂದ ಸದೃಢ ಸಮಾಜಕಟ್ಟಲು ಸಾಧ್ಯ. ಕಾನೂನಿನ ಅರಿವು ಮತ್ತು ಕಾನೂನು ಕಾಪಾಡುವ ಕೆಲಸ ಮಾಧ್ಯಮ ಕ್ಷೇತ್ರ ಮಾಡುತ್ತಿದೆ. ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಬಿ.ತಿಪ್ಪೇರುದ್ರಪ್ಪ ಮಾತನಾಡಿದರು. ಭಾರತದಲ್ಲಿ ಪತ್ರಿಕಾ ಸ್ವಾತಂತ್ಯ್ರದ ಕುರಿತು ಸಹಾಯಕ  ಸರಕಾರಿ ಅಭಿಯೋಜಕ ರಾಘವೇಂದ್ರ ರಾಯ್ಕರ್ ಉಪನ್ಯಾಸ ನೀಡಿದರು. ಚಿಕ್ಕಮಗಳೂರು ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ  ಟಿಎನ್‍ಎ ಮೊದಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕನ್ನಡಪ್ರಭ ಪತ್ರಿಕೆ ವರದಿಗಾರ ಅನಂತನಾಡಿಗ್ ತರೀಕೆರೆ,  ಸರಕಾರಿ ಮಲ್ಲೇಗೌಡ ಆಸ್ಪತ್ರೆ ಮರಣೋತ್ತರ ಪರೀಕ್ಷಾ ಸಹಾಯಕ ಜೆ. ಚನ್ನಕೇಶವ ಸ್ಪಟಿಕ್ ಹೇರ್ ಸ್ಟೈಲ್‍ನ ಮಾಲಕ ಸಿ.ಎನ್. ವರದರಾಜ್ ಅವರನ್ನು ಸನ್ಮಾನಿಸಲಾಯಿತು.

ಪತ್ರಿಕಾ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೇ ಹಾಗೂ ಪ್ರಬಂಧ ಸ್ಫರ್ಧೇಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್‍ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ಯುವ ಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳ ಹುಲ್ಲಳ್ಳಿ, ಸಂಘದ ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ್, ಖಜಾಂಚಿ ಎಂ.ಬಿ.ಅಶೋಕ್‍ಕುಮಾರ್, ಕಾರ್ಯದರ್ಶಿ ಗಿರೀಶ್ ಬೀರೂರು, ಎನ್.ಆರ್.ಪುರ ತಾಲೂಕು ಅಧ್ಯಕ್ಷ ನಾಗರಾಜ್‍ಗೌಡ, ಸದಸ್ಯರಾದ ಅನೀಲ್, ಕಿಶೋರ್, ಪ್ರಕಾಶ್ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News