ಜಿಡಿಪಿ ದರ ಅಧಿಕ ಅಂದಾಜು ಹೇಳಿಕೆ: ಸಮರ್ಥಿಸಿಕೊಂಡ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್

Update: 2019-07-19 17:52 GMT

ಹೊಸದಿಲ್ಲಿ, ಜು.19: 2011- 17ರ ಅವಧಿಯಲ್ಲಿ ಭಾರತದ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ ದರ)ಯನ್ನು ಶೇ.2.5ರಷ್ಟು ಅಧಿಕ ಅಂದಾಜು ಮಾಡಲಾಗಿತ್ತು ಎಂಬ ತನ್ನ ಹೇಳಿಕೆಯನ್ನು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಸಮರ್ಥಿಸಿಕೊಂಡಿದ್ದಾರೆ.

ಉದ್ದಿಮೆಗಳಿಗೆ ನೀಡುವ ಸಾಲದ ಅಭಿವೃದ್ಧಿ ದರ ಶೇ.16ರಿಂದ ಮೈನಸ್ ಶೇ.1ಕ್ಕೆ ಕುಸಿದಿರುವುದು ನೈಜ ಹೂಡಿಕೆ ಅಭಿವೃದ್ಧಿ ದರದ ಕುರಿತು (ಶೇ.13ರಿಂದ ಶೇ.3ಕ್ಕೆ ಕುಸಿದಿದೆ)ಸರಕಾರ ನೀಡಿದ ಅಂಕಿಅಂಶದಲ್ಲಿ ದೃಢಪಟ್ಟಿದೆ. ನೈಜ ರಫ್ತು ಶೇ.15ರಿಂದ ಶೇ.3ಕ್ಕೆ ಕುಸಿದಿದ್ದರೆ, ಆಮದು ಶೇ.17ರಿಂದ ಮೈನಸ್ ಶೇ.1ರ ಪ್ರಮಾಣಕ್ಕೆ ಇಳಿದಿದೆ ಎಂದು ಸುಬ್ರಮಣಿಯನ್ ‘ವ್ಯಾಲಿಡೇಟಿಂಗ್ ಇಂಡಿಯಾಸ್ ಜಿಡಿಪಿ ಗ್ರೋತ್ ಎಸ್ಟಿಮೇಟ್’ ಎಂಬ ಲೇಖನದಲ್ಲಿ ತಿಳಿಸಿದ್ದಾರೆ.

 2011ರಿಂದ 2016ರ ಅವಧಿಯಲ್ಲಿ ಭಾರತದ ಅರ್ಥವ್ಯವಸ್ಥೆಯು ಸರಣಿ ಋಣಾತ್ಮಕ ಆಘಾತಗಳಿಗೆ ಒಳಗಾಗಿದ್ದು, ಇದರಲ್ಲಿ ಮೂರು ಆಘಾತಗಳು ಈ ಐದು ವರ್ಷದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿದೆ. ಈ ಆಘಾತಗಳಲ್ಲಿ ರಫ್ತು ಕುಸಿತ, ಅವಳಿ ಬ್ಯಾಲೆನ್ಸ್‌ಶೀಟ್ ಸಮಸ್ಯೆ, ಯುಪಿಎ-2 ಸರಕಾರದ ಅವಧಿಯಲ್ಲಿ ದೀರ್ಘ ಸ್ಥಿರತೆ ನಷ್ಟವಾಗಿರುವುದು, 2014-15ರ ಬರಗಾಲ ಹಾಗೂ ನೋಟುಗಳ ಚಲಾವಣೆ ರದ್ಧತಿ ಪ್ರಮುಖವಾದುದು ಎಂದವರು ಹೇಳಿದ್ದಾರೆ. ಇಂತಹ ಭಾರೀ ಆಘಾತಗಳ ಹೊರತಾಗಿಯೂ ಆರ್ಥಿಕ ಬೆಳವಣಿಗೆಗೆ ಅಲ್ಪಪ್ರಮಾಣದಲ್ಲಿ ಹಿನ್ನಡೆಯಾಗಿದೆ ಎಂದು 2015ರಲ್ಲಿ ಅಂಗೀಕರಿಸಿದ ಹೊಸ ಜಿಡಿಪಿ ನೀತಿಯಲ್ಲಿ ತಿಳಿಸಲಾಗಿದೆ. . ಆದರೆ ಈ ಭಾರೀ ಆಘಾತಗಳ ಬಳಿಕವೂ ಜಿಡಿಪಿ ಅಭಿವೃದ್ಧಿಯ ಮೇಲೆ ಕೇವಲ ಅಲ್ಪಪ್ರಮಾಣದ ಪರಿಣಾಮವಾಗಲು ಸಾಧ್ಯವೇ ಎಂದು ಪ್ರಶ್ನಿಸಿರುವ ಅವರು, 2011ರಿಂದ 2016ರ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದರ ಸರಕಾರ ತಿಳಿಸಿರುವಂತೆ ಸುಮಾರು ಶೇ.7ರ ಪ್ರಮಾಣದಲ್ಲಲ್ಲ, ಬದಲು ಶೇ.4.5ರಷ್ಟಿರಬೇಕು ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಸರಕಾರ ಜಿಎಸ್‌ಟಿ, ನೂತನ ದಿವಾಳಿತನ ಕಾಯ್ದೆ ಮುಂತಾದ ಸುಧಾರಣೆಗಳನ್ನು ತಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇವು ಮಧ್ಯಮ ಅವಧಿಯಲ್ಲಿ ಅಭಿವೃದ್ಧಿಯ ಲಾಭಕ್ಕೆ ಕಾರಣವಾಗುತ್ತದೆ ಎಂದವರು ಹೇಳಿದ್ದಾರೆ.

ಸರಕಾರ ಮುಂದಿಟ್ಟಿರುವ ಬಳಕೆ ಅಧಿಕಗೊಳ್ಳುವ ವಾದವನ್ನು ನಿರಾಕರಿಸಿರುವ ಅವರು, ನಿರಂತರ ಅಭಿವೃದ್ಧಿಗೆ ಕಾರಣವಾಗುವ ಬಳಕೆ ಪ್ರಕ್ರಿಯೆ ಭಾರತದಲ್ಲಿ ಹಠಾತ್ ಆರಂಭವಾಗಿದ್ದರೆ ಅದು ರಿಸರ್ವ್ ಬ್ಯಾಂಕ್ ನಡೆಸಿದ ಗ್ರಾಹಕ ವಿಶ್ವಾಸದ ಸಮೀಕ್ಷೆಯಲ್ಲಿ ವ್ಯಕ್ತವಾಗಬೇಕಿತ್ತು ಎಂದಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಕಳಪೆಯಾಗಿರುವ ಹಿನ್ನೆಲೆಯಲ್ಲಿ , ಭಾರತವು 1980ಕ್ಕೂ ಹಿಂದಿನ ಸಮಯದಲ್ಲಿ ಸಾಧಿಸಿದ್ದ ಅಭಿವೃದ್ಧಿ ದರವನ್ನು ಪುನರಾವರ್ತಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅವರು, 1980ರ ಅವಧಿಯಲ್ಲಿ ಜನಸಂಖ್ಯೆಯ ಬೆಳವಣಿಗೆ ದರ ಶೇ.2 ಆಗಿದ್ದರೆ ಜಿಡಿಪಿ ಬೆಳವಣಿಗೆ ದರ ಸುಮಾರು ಶೇ.3.5ರಷ್ಟಿತ್ತು. ಇದರಿಂದ ತಲಾ ಆದಾಯದ ಬೆಳವಣಿಗೆ ದರ ಸುಮಾರು ಶೇ.1.5ರಷ್ಟಿತ್ತು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News