ಮಂತ್ರಿಯಿಲ್ಲದೆಯೇ ಮುಂದುವರಿದ ರಾಜಕೀಯ ಚದುರಂಗದಾಟ

Update: 2019-07-19 18:36 GMT

ಮಂತ್ರಿ ಸಹಿತ ಪ್ರಮುಖ ಕಾಯಿಗಳನ್ನು ಕಳೆದುಕೊಂಡು ಸೋಲು ಖಚಿತವೆನ್ನುವುದು ಮನಗಂಡಿದ್ದರೂ, ರಾಜ್ಯ ಮೈತ್ರಿ ಸರಕಾರ ಚದುರಂಗದಾಟವನ್ನು ಮುಂದುವರಿಸಿದೆ. ಬಿಜೆಪಿ ಸುಪ್ರೀಂಕೋರ್ಟನ್ನು ಬಳಸಿಕೊಂಡು ಕೊಟ್ಟ ಚೆಕ್‌ಗೆ, ಮೈತ್ರಿ ಸರಕಾರ ಸ್ಪೀಕರ್ ಮೂಲಕ ಉತ್ತರಿಸಿದೆ. ಇದೀಗ ರಾಜ್ಯಪಾಲರು ಕೊಟ್ಟ ಚೆಕ್‌ಗೂ ಬೆದರದೆ ‘ಸಮಯ’ವನ್ನೇ ತನ್ನ ಕಾಯಿಯನ್ನಾಗಿಸಿಕೊಂಡು ವಿರೋಧಿಗಳಿಗೆ ಗರಿಷ್ಠ ಇರಿಸುಮುರಿಸನ್ನು ಉಂಟು ಮಾಡುತ್ತಿದೆ. ವಿಶ್ವಾಸ ಮತವನ್ನು ಎಷ್ಟು ದಿನ ಸಾಧ್ಯವೋ ಅಷ್ಟು ದಿನಕ್ಕೆ ಮುಂದೆ ಹಾಕುವುದು ಮೈತ್ರಿ ಸರಕಾರದ ತಂತ್ರವಾಗಿದ್ದರೆ, ವಿವಿಧ ಒತ್ತಡಗಳನ್ನು ಬಳಸಿಕೊಂಡು ಆದಷ್ಟು ಬೇಗ ವಿಶ್ವಾಸಮತ ನಡೆಯುವಂತೆ ಮಾಡಿ ಸರಕಾರವನ್ನು ಉರುಳಿಸಿ ಮಾನ ಉಳಿಸಿಕೊಳ್ಳುವುದು ಬಿಜೆಪಿಯ ತಂತ್ರವಾಗಿದೆ. ಯಾವುದೇ ವೌಲ್ಯಗಳಿಗೆ ಬದ್ಧರಿಲ್ಲದ, ಹಣದ ಮೂಲಕ ಕೊಂಡುಕೊಂಡಿರುವ ಶಾಸಕರು ಇನ್ನೊಂದಿಷ್ಟು ಹೆಚ್ಚು ಹಣದ ಆಮಿಷವನ್ನು ಇನ್ನಾರಾದರೂ ಒಡ್ಡಿದರೆ ಅದಕ್ಕೆ ಬಲಿಯಾಗುವ ಸಾಧ್ಯತೆಗಳಿರುವುದರಿಂದಲೇ ಬಿಜೆಪಿ ಆದಷ್ಟು ಬೇಗ ವಿಶ್ವಾಸ ಮತ ನಡೆಯಲಿ ಎಂದು ಆತುರ ಪಡುತ್ತಿದೆ.

ಕೊನೆಯ ಕ್ಷಣದಲ್ಲಿ ಸುಪ್ರೀಂಕೋರ್ಟ್ ಸ್ಪೀಕರ್ ಅಧಿಕಾರದಲ್ಲಿ ಹಸ್ತಕ್ಷೇಪ ನಡೆಸುವುದಕ್ಕೆ ಹಿಂದೇಟು ಹಾಕಿತು. ಒಂದು ವೇಳೆ ಅದು ಹಸ್ತಕ್ಷೇಪ ನಡೆಸಿದ್ದೇ ಆದರೆ, ದೇಶಾದ್ಯಂತ ಸಂಚಲನವನ್ನು ಸೃಷಿಯಾಗುತ್ತಿತ್ತು. ಬೇರೆ ರಾಜ್ಯಗಳ ಸ್ಪೀಕರ್‌ಗಳಿಗೂ ಈ ಆದೇಶ ಅನ್ವಯವಾಗುವ ಸಾಧ್ಯತೆಗಳಿರುವುದರಿಂದ ಶಾಸಕರ ರಾಜೀನಾಮೆ ಸ್ವೀಕಾರದ ಕುರಿತಂತೆ ನಿರ್ಧಾರ ತಳೆಯಲು ಸ್ಪೀಕರ್‌ಗೆ ಸರ್ವ ಅಧಿಕಾರ ನೀಡಿತು. ಇದೇ ಸಂದರ್ಭದಲ್ಲಿ, ಶಾಸಕರು ಸದನದಲ್ಲಿ ಭಾಗವಹಿಸಲು ಯಾವುದೇ ಒತ್ತಡ ಹಾಕಬಾರದು ಎಂದು ಸರಕಾರಕ್ಕೂ ನಿರ್ದೇಶನ ನೀಡಿತು. ಎರಡನೆಯ ಸೂಚನೆ, ಸರಕಾರ ಉರುಳಿಸುವ ಬಿಜೆಪಿಯ ತಂತ್ರಕ್ಕೆ ಪೂರಕವಾಗಿತ್ತು. ಆದರೆ ಮೈತ್ರಿ ಸರಕಾರ ಸುಪ್ರೀಂಕೋರ್ಟ್ ಆದೇಶವನ್ನೇ ಬಳಸಿಕೊಂಡು, ತಿರುಮಂತ್ರ ಹಾಕಿತು. ‘ಪಕ್ಷಗಳಿಗೆ ವಿಪ್ ನೀಡುವ ಅಧಿಕಾರವಿದೆ. ಆದರೆ ಸುಪ್ರೀಂಕೋರ್ಟ್ ಒತ್ತಡ ಹಾಕಬಾರದು ಎನ್ನುತ್ತಿದೆ. ಇದೀಗ ಪಕ್ಷಗಳು ವಿಪ್ ನೀಡುವುದು ಆದೇಶದ ಉಲ್ಲಂಘನೆಯಾಗುತ್ತದೆಯೇ?’ ಎನ್ನುವುದನ್ನು ಸುಪ್ರೀಂಕೋರ್ಟ್ ಸ್ಪಷ್ಟಪಡಿಸುವವರೆಗೆ ವಿಶ್ವಾಸಮತವನ್ನು ಮುಂದೆ ಹಾಕಲು ನಿರ್ಧರಿಸಿತು.

ಇದೇ ಸಂದರ್ಭದಲ್ಲಿ ರಾಜ್ಯಪಾಲರ ಮೂಲಕವೂ ವಿಶ್ವಾಸಮತ ತುರ್ತಾಗಿ ನಡೆಸಲು ಬಿಜೆಪಿ ಒತ್ತಡ ಹಾಕಿತು. ಸ್ಪೀಕರ್ ಆ ಒತ್ತಡವನ್ನು ಸಂಪೂರ್ಣ ನಿರ್ಲಕ್ಷಿಸಿ, ತನ್ನ ಅಧಿಕಾರವನ್ನು ಎತ್ತಿ ಹಿಡಿದರು. ರಾಜ್ಯಪಾಲರ ಮೂಲಕ ಸರಕಾರವನ್ನು ಅಲುಗಾಡಿಸಲು ಯತ್ನಿಸಿದ ಕೇಂದ್ರ ಸರಕಾರಕ್ಕೆ ಇದರಿಂದ ಮುಖಭಂಗವುಂಟಾಗಿದೆ. ಮೈತ್ರಿ ಸರಕಾರ ಕಟ್ಟಕಡೆಯ ಅವಕಾಶವಾಗಿ ಎರಡು ಬಗೆಯ ತಂತ್ರವನ್ನು ಬಳಸುತ್ತಿರುವಂತಿದೆ. ಒಂದು, ವಿಶ್ವಾಸಮತವನ್ನು ಮುಂದೆ ಹಾಕುತ್ತಾ, ಅತೃಪ್ತ ಶಾಸಕರನ್ನು ಓಲೈಸಿ ಸರಕಾರದ ಜೊತೆಗೆ ಸೇರಿಕೊಳ್ಳಲು ಅಂತಿಮ ಪ್ರಯತ್ನವನ್ನು ನಡೆಸುವುದು. ಜೊತೆಗೆ ಬಿಜೆಪಿಯೊಳಗೆ ಗೊಂದಲಗಳನ್ನು ಸೃಷ್ಟಿಸುವುದು. ಎರಡನೆಯ ತಂತ್ರ, ಹುತಾತ್ಮರಾಗುವುದು. ಅಂದರೆ, ರಾಜ್ಯಪಾಲರ ಸೂಚನೆಯ ಬಳಿಕವೂ ವಿಶ್ವಾಸಮತವನ್ನು ಮುಂದೆ ಹಾಕುತ್ತಾ ಕೇಂದ್ರದ ಮೂಲಕವೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ನೋಡಿಕೊಳ್ಳುವುದು. ಈ ಮೂಲಕ, ಕೇಂದ್ರ ಸರಕಾರವೇ ಸರಕಾರವನ್ನು ಉರುಳಿಸಿತು ಎಂದು ಆರೋಪಿಸುವ ಅವಕಾಶ ಮೈತ್ರಿ ಸರಕಾರದ ನೇತಾರರಿಗಿರುತ್ತದೆ. ವಿಶ್ವಾಸಮತಕ್ಕೆ ಮುನ್ನ ವಿವಿಧ ನಾಯಕರು ಸದ್ಯದ ಸ್ಥಿತಿಗೆ ಕಾರಣರಾದವರನ್ನು ಟೀಕಿಸುವುದಕ್ಕೂ ಸರಕಾರಕ್ಕೆ ಈಗ ಅವಕಾಶ ದೊರಕಿದಂತಾಗಿದೆ. ಈಗಾಗಲೇ ಹಲವರು ತಮಗೆ ಬಿಜೆಪಿಯ ಮುಖಂಡರು ಒಡ್ಡಿರುವ ಆಮಿಷಗಳನ್ನು ಬಹಿರಂಗ ಪಡಿಸಿದ್ದಾರೆ. ಅತೃಪ್ತ ಶಾಸಕರ ಹಿಂದೆ ತಾನಿದ್ದೇನೆ ಎನ್ನುವುದನ್ನು ‘ವಿಶ್ವಾಸ ಮತ’ಕ್ಕೆ ಆತುರ ಪಡುತ್ತಿರುವ ಬಿಜೆಪಿ ಪರೋಕ್ಷವಾಗಿ ಒಪ್ಪಿಕೊಂಡಿದೆ.

ಭಿನ್ನಮತ ಸಹಜವಾಗಿ ಹೊರಹೊಮ್ಮಿದ್ದೇ ಆಗಿದ್ದರೆ, ಬಿಜೆಪಿ ರಾಜ್ಯಪಾಲರ ಮೂಲಕ ಒತ್ತಡ ಹೇರುವ ಅಗತ್ಯವಿದ್ದಿರಲಿಲ್ಲ. ಇದೀಗ ಸಿಕ್ಕಿರುವ ಸಮಯದಲ್ಲಿ ಅತೃಪ್ತ ಶಾಸಕರು ಮತ್ತು ಅವರ ಬೆನ್ನಿಗೆ ನಿಂತ ಬಿಜೆಪಿಯ ಬಣ್ಣವನ್ನು ಬಯಲುಮಾಡುವಲ್ಲಿ ಮೈತ್ರಿ ಸರಕಾರದ ನಾಯಕರು ಭಾಗಶಃ ಯಶಸ್ವಿಯಾಗಿದ್ದಾರೆ. ಸರಕಾರದ ಮೇಲೆ ವಿಶ್ವಾಸ ವಿಲ್ಲ ಎನ್ನುವ ಶಾಸಕರು, ಅಧಿವೇಶನದಲ್ಲಿ ಭಾಗವಹಿಸಿ ತಮ್ಮ ಅವಿಶ್ವಾಸಕ್ಕೆ ಕಾರಣವಾದ ಅಂಶಗಳನ್ನು ಜನರ ಮುಂದೆ ಇಡಬೇಕಾಗಿತ್ತು. ರಾಜ್ಯ ಸರಕಾರದ ವೈಫಲ್ಯಗಳನ್ನು ಮುಂದಿಟ್ಟು ತಮ್ಮನ್ನು ಸಮರ್ಥಿಸಿಕೊಳ್ಳುವುದು ಅತ್ಯಗತ್ಯವಾಗಿತ್ತು. ಚುನಾವಣೆ ನಡೆದು ಎರಡೇ ವರ್ಷಗಳಲ್ಲಿ ಒಂದು ಸರಕಾರವನ್ನು ಉರುಳಿಸುವುದಕ್ಕೆ ಕಾರಣವಾದ ಅಂಶಗಳನ್ನು ತಿಳಿದುಕೊಳ್ಳುವ ಅಧಿಕಾರ ಮತದಾರರಿಗೂ ಇದೆ. ತಮ್ಮ ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಸರಕಾರವನ್ನು ಉರುಳಿಸುತ್ತಾರೆ, ರಾಜ್ಯದ ಮೇಲೆ ಇನ್ನೊಂದು ಚುನಾವಣೆಯನ್ನು ಹೇರುತ್ತಾರೆ ಎಂದಾದರೆ ಅದು ಅಕ್ಷಮ್ಯ. ಆದರೆ ಅತೃಪ್ತ ಶಾಸಕರು ತಮ್ಮ ನಿರ್ಧಾರಗಳ ಹಿಂದಿರುವ ಸಕಾರಣಗಳನ್ನು ಮುಂದಿಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇದೀಗ ವಿಶ್ವಾಸ ಮತ ಪ್ರಕ್ರಿಯೆ ಇನ್ನಷ್ಟು ಮುಂದೆ ಹೋಗಿದೆ. ಬಹುಶಃ ರಾಷ್ಟ್ರಪತಿ ಮಧ್ಯಪ್ರವೇಶಿಸುವವರೆಗೂ ಇದು ಹೀಗೇ ಮುಂದುವರಿಯುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಒಂದು ವೇಳೆ, ಸರಕಾರ ಉರುಳಿದ ಬೆನ್ನಿಗೇ ಅತೃಪ್ತರನ್ನು ಬಳಸಿಕೊಂಡು ಬಿಜೆಪಿ ಅಧಿಕಾರ ಹಿಡಿಯಲು ಮುಂದಾದರೆ ಅದನ್ನು ಜನರು ಒಪ್ಪಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ. ಯಾಕೆಂದರೆ, ಕೆಲವೇ ತಿಂಗಳಲ್ಲಿ ಬಿಜೆಪಿಯೊಳಗೆ ಅತೃಪ್ತರು ಹುಟ್ಟಿಕೊಳ್ಳಲಿದ್ದಾರೆ ಮತ್ತು ಅವರೇ ಬಿಜೆಪಿ ಸರಕಾರವನ್ನು ಮುಳುಗಿಸಲಿದ್ದಾರೆ.

ಈ ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಒದಗಿದ ಸ್ಥಿತಿಯನ್ನು ಜನರು ಇನ್ನೂ ಮರೆತಿಲ್ಲ. ಒಂದು ವೇಳೆ ಸರಕಾರ ರಚಿಸಲು ಹೋಗಿ ಬಿಜೆಪಿ ಎಡವಿದರೆ, ಅದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ಗೆಲಾಭ ಮಾಡಿಕೊಡಲಿದೆ. ಇರುವ ಸರಕಾರವನ್ನು ಬೀಳಿಸುವುದಷ್ಟೇ ಕೇಂದ್ರದ ನಾಯಕರ ಮುಖ್ಯ ಗುರಿ ಎನ್ನುವ ವಾದವೂ ಇದೆ. ಒಂದು ವೇಳೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದರೆ ಕೇಂದ್ರದಿಂದಲೇ ರಾಜ್ಯವನ್ನು ಬಿಜೆಪಿ ಆಳುತ್ತದೆ. ಸರಕಾರ ರಚಿಸಲು ಹೋಗಿ ಅನಗತ್ಯ ಮುಖಭಂಗವನ್ನು ಎಳೆದುಕೊಳ್ಳುವುದು ಬೇಡ ಎಂದು ಕೇಂದ್ರ ಬಿಜೆಪಿ ನಾಯಕರು ನಿರ್ಧರಿಸಿದರೆ, ಪ್ರಮಾಣವಚನ ಸ್ವೀಕರಿಸಲು ಹೊಸಬಟ್ಟೆಯೊಂದಿಗೆ ಸಿದ್ಧರಾಗಿ ನಿಂತಿರುವ ಯಡಿಯೂರಪ್ಪರ ಪಾಲಿಗೆ ಅದು ಸಹಿಸಲಾಗದ ಆಘಾತವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News