ಈ ಅಂಗವಿಕಲ ಯುವಕನ ಸಾಧನೆ ಎಲ್ಲರಿಗೂ ಮಾದರಿ...

Update: 2019-07-20 04:17 GMT

ಜೈಪುರ, ಜು.20: ಸಾಜನ್ ರಾಯ್ ಎಂಬ ಅಂಗವಿಕಲ ಯುವಕ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಉತ್ತೀರ್ಣನಾಗಿ ಬಿಹಾರದ ಬೆಟ್ಟಿಯ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆದಿದ್ದಾನೆ. ತನ್ನ ಕನಸು ನನಸುಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಈತ ಮೈಲುಗಟ್ಟಲೆ ದೂರವನ್ನು ಊರುಗೋಲಿನ ಸಹಾಯದಿಂದಲೇ ನಡೆದುಕೊಂಡು ಹೋಗಿದ್ದಾನೆ.

ಬಿಹಾರದ ಮಧುಬಾನಿ ಮೂಲದ ರಾಯ್, ವೈದ್ಯನಾಗುವ ಕನಸು ಹೊತ್ತು ಒಂದು ವರ್ಷ ಹಿಂದೆ ಕೋಚಿಂಗ್‌ಗಾಗಿ ಕೋಟಾಗೆ ಬಂದಿದ್ದ. ಅಂಗವಿಕಲರು ಆರೋಗ್ಯಕರ ಮತ್ತು ಉತ್ತಮ ಜೀವನ ನಡೆಸಲು ಅನುಕೂಲ ಮಾಡಿಕೊಡುವ ಸಲುವಾಗಿ ವೈದ್ಯಕೀಯ ವೃತ್ತಿಯನ್ನು ಈತ ಆಯ್ಕೆ ಮಾಡಿಕೊಂಡಿದ್ದ.

"ತಂದೆ ಲಾಲ್‌ ಬಹದ್ದೂರ್ ರಾಯ್ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದಾರೆ. ತಾಯಿ ಗೃಹಿಣಿ. ಕುಟುಂಬದ ಸಂಪೂರ್ಣ ಉಳಿತಾಯ ಹಣ ನನ್ನ ಚಿಕಿತ್ಸೆಗೆ ಖರ್ಚಾಯಿತು. ಚಿಕಿತ್ಸೆ ಕಾರಣದಿಂದ ನಾನು ಈಗ ಊರುಗೋಲಿನ ನೆರವಿನೊಂದಿಗೆ ನಡೆದಾಡಬಲ್ಲೆ; ಆದರೆ ಕುಟುಂಬದ ಹಣಕಾಸು ಸ್ಥಿತಿ ದಯನೀಯ" ಎಂದು ಯುವಕ ಹೇಳುತ್ತಾನೆ.

ಹತ್ತನೇ ತರಗತಿ ಬಳಿಕ ಹಣದ ಅಡಚಣೆಯಿಂದಾಗಿ ಸರ್ಕಾರಿ ಪಿಯು ಕಾಲೇಜಿಗೆ ಸೇರಿದ ಬಾಲಕ 12ನೇ ತರಗತಿಯಲ್ಲಿ ಶೇಕಡ 63 ಅಂಕವನ್ನು ಪಡೆದ. "ಬಳಿಕ ಇದ್ದ ಸ್ವಲ್ಪ ಜಮೀನು ಒತ್ತೆ ಇಟ್ಟು ನನ್ನನ್ನು ಕೋಟಾದಲ್ಲಿ ನೀಟ್ ಕೋಚಿಂಗ್‌ಗೆ ಸೇರಿಸಿದರು" ಎಂದು ಯಶೋಗಾಥೆ ವಿವರಿಸುತ್ತಾನೆ.

"ಅಂಗವೈಕಲ್ಯ ಶಾಪವಲ್ಲ; ಅದನ್ನು ಸವಾಲಾಗಿ ತೆಗೆದುಕೊಂಡು ಬದ್ಧತೆ ಹಾಗೂ ವಿಶ್ವಾಸದಿಂದ ಏನನ್ನೂ ಸಾಧಿಸಬಹುದು" ಎನ್ನುವುದು ಈತನ ನಿಲುವು. ಊರುಗೋಲು ನೆರವಿನಿಂದ ಪ್ರತಿದಿನ ನಡೆದುಕೊಂಡು ಹೋಗುತ್ತಿದ್ದ ಈತನ ಅದಮ್ಯ ಬಯಕೆಯನ್ನು ಕಂಡ ಖಾಸಗಿ ಸಂಸ್ಥೆಯೊಂದು ಬಳಿಕ ಈತನ ಓಡಾಟಕ್ಕೆ ವಾಹನ ವ್ಯವಸ್ಥೆ ಮಾಡಿಕೊಟ್ಟಿತ್ತು. ಸಂಸ್ಥೆ ಕೂಡಾ ಈತನ ಕುಟುಂಬದ ಹಣಕಾಸು ಸ್ಥಿತಿಯ ಹಿನ್ನೆಲೆಯಲ್ಲಿ ಉಚಿತವಾಗಿ ಮಾರ್ಗದರ್ಶನ ನೀಡಿತು.
"ನಾನು ಅಂಗವಿಕಲತೆಯಿಂದ ದೈಹಿಕವಾಗಿ ದುರ್ಬಲ; ಆದರೆ ಮಾನಸಿಕವಾಗಿ ಸದೃಢ" ಎಂದು ಆತ್ಮವಿಶ್ವಾಸದಿಂದ ಹೇಳುವ ಯುವಕ ವೈದ್ಯನಾದ ಬಳಿಕ ಅಂಗವಿಕಲರ ಸೇವೆಗೆ ಜೀವನ ಮುಡಿಪಾಗಿಡಲು ಪಣ ತೊಟ್ಟಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News