ಮೂಡಿಗೆರೆ: ಮಿತಿಮೀರಿದ ಕಾಡಾನೆ ಹಾವಳಿ; ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

Update: 2019-07-20 12:03 GMT

ಮೂಡಿಗೆರೆ, ಜು.20: ತಾಲೂಕಿನ ಗುತ್ತಿಹಳ್ಳಿ ಮತ್ತು ಮೂಲರಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ನಾಲ್ಕು ಕಾಡಾನೆಗಳು ಕೆಲವು ದಿನಗಳಿಂದ ಗ್ರಾಮದ ಕಾಫಿ ತೋಟದಲ್ಲೇ ಬೀಡುಬಿಟ್ಟಿದ್ದು, ಗ್ರಾಮಸ್ಥರ ಮನೆಗಳ ಮೇಲೂ ದಾಳಿ ಮಾಡಿದ ಘಟನೆ ನಡೆದಿದೆ. ಆನೆಗಳು ಗ್ರಾಮದ ಕಾಫಿತೋಟಗಳಲ್ಲಿ ಬೀಡು ಬಿಟ್ಟು ರಾತ್ರಿ ವೇಳೆ ಮನೆಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಗ್ರಾಮಸ್ಥರು ಜೀವಭಯದೊಂದಿಗೆ ಬದುಕುತ್ತಿದ್ದಾರೆ. ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ರಕ್ಷಣೆ ನೀಡಿ ಕಾಡಾನೆಗಳನ್ನು ಕೂಡಲೇ ಇಲ್ಲಿಂದ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರಾದ ವಿನಯ್, ಶಿವಕುಮಾರ್, ಸದಾಶಿವ ವಿಜಯ್ ಮತ್ತಿತರರು ಆಗ್ರಹಿಸಿದ್ದಾರೆ.

ತಾಲೂಕಿನ ಸತ್ತಿಗನಹಳ್ಳಿ ಹಾಗೂ ಮೂಲರಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಗ್ರಾಮಸ್ಥರ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ನಾಲ್ಕು ಕಾಡಾನೆಗಳು ಸಣ್ಣ, ಅತೀ ಸಣ್ಣ ರೈತರು ಜೀವನೋಪಾಯಕ್ಕಾಗಿ ಮಡಿಕೊಂಡ ಕಾಫಿತೋಟ ಹಾಗೂ ಬೆಳೆಗಳನ್ನು ನಾಶ ಮಾಡುತ್ತಿವೆ. ಪ್ರತೀ ವರ್ಷ ಕಾಡಾನೆಗಳ ದಾಳಿಯಿಂದಾಗಿ ಗ್ರಾಮಸ್ಥರು ಪ್ರಾಣಭಯದಲ್ಲಿ ಬದುಕುವಂತಾಗಿದ್ದು, ಕಾಫಿ ಗಿಡಗಳನ್ನು ತುಳಿದು ನಾಶ ಮಾಡುತ್ತಿರುವುದರಿಂದ ಕಾಫಿ ಬೆಳೆಯೂ ಬೆಳೆಗಾರರ ಕೈಗೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಳೆದ ಕೆಲ ದಿನಗಳಿಂದ ಈ ಗ್ರಾಮಗಳ ಕಾಫಿ ತೋಟಗಳಿಗೆ ರಾತ್ರಿ ವೇಳೆ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಿವೆ. ಸಂಜೆ 6ಗಂಟೆಯ ನಂತರ ಗ್ರಾಮಸ್ಥರು ಜೀವಭಯದಿಂದ ಮನೆಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಕೃಷಿ ಕಾರ್ಯದಲ್ಲಿ ತೊಡಗಿದ್ದ ಇದೇ ಗ್ರಾಮದ ಯುವಕ ಸುನೀಲ್ ಎಂಬವರನ್ನು ಕಾಡಾನೆಗಳು ದಾಳಿ ಮಾಡಿ ಕೊಂದು ಹಾಕಿದೆ ಎಂದು ಹೇಳಿರುವ ಅವರು, ಈ ಹಿಂದೆ ಆನೆಯನ್ನು ತೆರವುಗೊಳಿಸಿ ಎಂದು ಅರಣ್ಯ ಇಲಾಖೆ ಮುಂದೆ ಗ್ರಾಮಸ್ಥರು ಧರಣಿಯನ್ನೂ ನಡೆಸಿದ್ದರು. ಆದರೆ ಈ ವೇಳೆ ಆನೆ ಸ್ಥಳಾಂತರಿಸಬೇಕಾದ ಅರಣ್ಯ ಇಲಾಖಾಧಿಕಾರಿಗಳು ಧರಣಿ ನಡೆಸಲು ಬಂದಿದ್ದ ರೈತರ ಮೇಲೆಯೇ ಕೇಸು ದಾಖಲಿಸಿದ್ದಾರೆ. ಕೇಸನ್ನು ಹಿಂಪಡೆಯುವುದಾಗಿ ಸುಳ್ಳು ಹೇಳಿ ಕಾಲಹರಣ ಮಾಡುತ್ತಿದ್ದು, ಈ ಮೂಲಕ ರೈತರು ಪ್ರತಿಭಟನೆ ನಡೆಸದಂತೆ ಒತ್ತಡ ಹೇರುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.

ಗ್ರಾಮಸ್ಥರಿಗೆ ಕಾಡು ಪ್ರಾಣಿಗಳಿಂದ ರಕ್ಷಣೆ ನೀಡುವಲ್ಲಿ ಇಲಾಖೆ ವಿಫಲವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕಾಡಾನೆಗಳು ಗ್ರಾಮದಲ್ಲೇ ಬೀಡುಬಿಟ್ಟು ಮನೆಗಳಿಗೆ ನುಗ್ಗುತ್ತಿದ್ದು, ಗ್ರಾಮಸ್ಥರು ಜೀವಭಯದಿಂದ ಮನೆಗಳಿಂದ ಹೊರ ಬರಲಾಗದೇ ದಿಗ್ಬಂಧನಕ್ಕೊಳಗಾಗಿದ್ದಾರೆ. ಅರಣ್ಯ ಇಲಾಖೆ ಕೂಡಲೇ ಕಾಡಾನೆಗಳ ಹಾವಳಿ ತಡೆಗೆ ಕ್ರಮಕೈಗೊಂಡು ಗ್ರಾಮಸ್ಥರಿಗೆ ಈ ಸಮಸ್ಯೆಯಿಂದ ಮುಕ್ತಿ ನೀಡಬೇಕೆಂದು ಶಾಸಕ ಕುಮಾರಸ್ವಾಮಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಗುತ್ತಿಹಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ರಾಮೇಗೌಡ, ಚಂದ್ರೇಗೌಡ ಮತ್ತು ಮಂಜುನಾಥಗೌಡರ ಮನೆಯ ಛಾವಣಿಯನ್ನು ಹಾನಿ ಮಾಡಿವೆ. ಅಲ್ಲದೇ ಮನೆಯ ಪಕ್ಕದ ನಾಯಿ ಗೂಡು, ನೀರಿನ ತೊಟ್ಟಿ ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ನಾಶಪಡಿಸಿವೆ. ರಾತ್ರಿ ಸಮಯದಲ್ಲಿ ದೀಪ ಆರಿಸಿದ ಕೂಡಲೇ ಕಾಡಾನೆಗಳು ಮನೆಗಳ ಮೇಲೆ ದಾಳಿ ಇಡುತ್ತಿದ್ದು, ಗುರುವಾರ ರಾತ್ರಿ ಸತ್ತಿಹಳ್ಳಿ ಗ್ರಾಮದ ಚಂದ್ರೇಗೌಡ ಎಂಬವರ ಆರ್‍ಸಿಸಿ ಮನೆಗೂ ಆನೆಗಳು ಹಾನಿ ಮಾಡಿದ್ದವು. ಕಾಡಾನೆಗಳ ನಿರಂತರ ದಾಳಿಯಿಂದಾಗಿ ಗ್ರಾಮಸ್ಥರು ಜೀವ ಭಯದಿಂದ ಊರನ್ನೇ ತೊರೆಯಬೇಕಾದ ಪರಿಸ್ಥಿತಿ ಬಂದಿದೆ. ಕಾಫಿ, ಅಡಿಕೆ, ಕಾಳುಮೆಣಸು, ಭತ್ತದ ಗದ್ದೆಗಳನ್ನು ಈಗಾಗಲೇ ಸಂಪೂರ್ಣ ನಾಶಪಡಿಸಿವೆ. ಅತೀವೃಷ್ಟಿ ಮತ್ತು ಕಾಡುಪ್ರಾಣಿಗಳಿಂದ ಸಂಪೂರ್ಣ ಬೆಳೆ ಕಳೆದುಕೊಂಡಿರುವ ನಮ್ಮ ಬದುಕು ಬೀದಿಗೆ ಬರುವಂತಾಗಿದೆ. ಅರಣ್ಯಾಧಿಕಾರಿಗಳು ದೂರು ನೀಡಿದರೂ ಕ್ರಮವಹಿಸುತ್ತಿಲ್ಲ. ಸರಕಾರ ಸೂಕ್ತ ಪರಿಹಾರ ಮತ್ತು ಕಾಡಾನೆಗಳನ್ನು ಸ್ಥಳಾಂತರಿಸಿ ಮುಕ್ತಿ ನೀಡಬೇಕು.
- ಗಿರೀಶ್, ಹಳ್ಳಿಬೈಲು ಗ್ರಾಮ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News