ಗ್ರಾಹಕರ ಸಂವಾದಕ್ಕೆ ಸಾರ್ವಜನಿಕರ ಗೈರು: ಹನೂರು ಚೆಸ್ಕಾಂ ವಿರುದ್ಧ ಆಕ್ರೋಶ

Update: 2019-07-20 12:09 GMT

ಹನೂರು, ಜು.20: ಚೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಕುಂದು ಕೊರತೆಗಳನ್ನು ಆಲಿಸಲು ಹಮ್ಮಿಕೊಂಡಿದ್ದ ಗ್ರಾಹಕರ ಸಂವಾದ ಕಾರ್ಯಕ್ರಮದಲ್ಲಿ ಕೇವಲ ಬೆರಳೆಣಿಕೆಷ್ಟು ಸಾರ್ವಜನಿಕರು ಮಾತ್ರ ಆಗಮಿಸಿ ದೂರುಗಳನ್ನು ನೀಡಿದರು.

ಹನೂರು ಪಟ್ಟಣದ ಚೆಸ್ಕಾಂ ಕಚೇರಿ ಸಭಾಂಗಣದಲ್ಲಿ ಹನೂರು ಉಪವಿಭಾಗ ವ್ಯಾಪ್ತಿಯ ಗ್ರಾಹಕರ ಸಂವಾದ ಸಭೆಯನ್ನುಆಯೋಜಿಸಲಾಗಿತ್ತು. ಗ್ರಾಹಕರಿಗೆ ತೃಪ್ತಿಕರವಾದ ಸೇವೆಯನ್ನು ಒದಗಿಸಲು ಮತ್ತು ದೂರುಗಳನ್ನು ತುರ್ತಾಗಿ ಬಗೆಹರಿಸುವುದಕ್ಕಾಗಿ ಗ್ರಾಹಕರ ಸಂವಾದ ಕಾರ್ಯಕ್ರಮವನ್ನು ಪ್ರತಿ ತಿಂಗಳ ಮೂರನೇ ಶನಿವಾರದಂದು ಉಪವಿಭಾಗಗಳಲ್ಲಿ ನಡೆಸಬೇಕು ಎಂಬು ನಿಯಮವಿದೆ. ಈ ಸಭೆಯಲ್ಲಿ  ಚೆಸ್ಕಾಂನ ಗ್ರಾಹಕರು ಅಧಿಕಾರಿಗಳ ಬಳಿ ತಮ್ಮ ಕುಂದು ಕೊರತೆಗಳನ್ನು ಪ್ರಸ್ತಾಪಿಸಬಹುದು. ದೂರುಗಳನ್ನು ದಾಖಲಿಸುವುದರಿಂದ ತುರ್ತಾಗಿ ಉಪವಿಭಾಗಮಟ್ಟದಲ್ಲಿಯೇ ದೂರುಗಳನ್ನು ನಿವಾರಣೆ ಮಾಡಬಹುದು ಹಾಗೂ ಗ್ರಾಹಕರಿಗೆ ಸಮಾಧಾನವಾಗದಿದ್ದರೆ ಗ್ರಾಹಕರ ಕುಂದುಕೂರತೆ ನಿವಾರಣೆ ವೇದಿಕೆಗೂ ಸಹ ಮನವಿ ಸಲ್ಲಿಸಲು ಸಹ ಇಲ್ಲಿ ಅವಕಾಶವಿದೆ.  

ಅಲ್ಲದೆ ಗ್ರಾಹಕರ ಸಂವಾದ ಕಾರ್ಯಕ್ರಮವನ್ನು ಆಯೋಜಿಸುವುದರಿಂದ ಸಾರ್ವಜನಿಕರು ಅಧಿಕಾರಿಗಳ ಬಳಿ ಪರಸ್ಪರ ಚರ್ಚಿಸಿ ಚೆಸ್ಕಾಂ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಬಹುಬೇಗ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ  ಗ್ರಾಹಕರ ಸಂವಾದ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವೇ ಇಲ್ಲದಂತಾಗಿದೆ ಮತ್ತು ಈ ಸಭೆಯ ಆಯೋಜನೆ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ನೀಡಿದ್ದರೆ ಸಾಕಷ್ಟು ಮಂದಿ ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದರು ಎಂದು ಸಾರ್ವಜನಿಕರು ತಮ್ಮ ಆಳಲು ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News