ಕುದುರೆ ವ್ಯಾಪಾರ ಮಾಡುತ್ತಿರುವುದು ಬಿಜೆಪಿ, ನಾನಲ್ಲ: ದಿನೇಶ್ ಗುಂಡೂರಾವ್

Update: 2019-07-20 12:33 GMT

ಬೆಂಗಳೂರು, ಜು.20: ರಾಜ್ಯಪಾಲರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಕುದುರೆ ವ್ಯಾಪಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕುದುರೆಗಳು ಅವರ ಬಳಿ ಹೋಗಿದ್ದವು, ರಾಜ್ಯಪಾಲರು ಈ ಸಂಬಂಧ ಬಿಜೆಪಿಗೆ ಪತ್ರ ಬರೆಯಬೇಕಿತ್ತು. ಏಕೆಂದರೆ ಈ ಕುದುರೆ ವ್ಯಾಪಾರ ಮಾಡುತ್ತಿರುವುದು ಬಿಜೆಪಿಯವರೇ ಹೊರತು ನಾವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದ ತಾಜ್ ವಿವಾಂತ ಹೊಟೇಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಗಡುವು ನೀಡಿರುವುದು ಹಾಗೂ ರಾಜೀನಾಮೆ ನೀಡಿರುವ ಶಾಸಕರಿಗೆ ವಿಪ್ ಜಾರಿ ಮಾಡುವ ಸಂಬಂಧ ಉಂಟಾಗಿರುವ ಗೊಂದಲ ಕುರಿತು ಸ್ಪಷ್ಟಣೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ ಎಂದರು.

ಜೆಡಿಎಸ್ ಹಾಗೂ ನಾವು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯು ಮುಂದಕ್ಕೆ ಹೋದರೆ ನಾವು ಸೋಮವಾರವೇ ಸದನದಲ್ಲಿ ವಿಶ್ವಾಸಮತ ಯಾಚನೆಯ ಗೊತ್ತುವಳಿಯನ್ನು ಮತಕ್ಕೆ ಹಾಕುವಂತೆ ಸ್ಪೀಕರ್‌ಗೆ ಮನವಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮತದಾನವನ್ನು ಮುಂದೂಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದ ಜನತೆ ನಮ್ಮನ್ನು ಗಂಭೀರವಾಗಿ ನೋಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ನಾವು ವಿಶ್ವಾಸಮತ ಯಾಚಿಸಲು ವಿಳಂಬ ಮಾಡುತ್ತಿಲ್ಲ. ಸಂಸದೀಯ ನಡವಳಿಕೆ ಗಳಲ್ಲಿ ಇರುವ ಕೆಲವು ಗೊಂದಲಗಳನ್ನು ಬಗೆಹರಿಸಿಕೊಳ್ಳುವ ಹಕ್ಕು ನಮಗಿದೆ. ಸೋಮವಾರ ಎಲ್ಲದಕ್ಕೂ ಉತ್ತರ ದೊರೆಯಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಮುಂಬೈನಲ್ಲಿ ದಾಖಲಾಗಿರುವ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ ವಿಭಾಗವೇ ಇಲ್ಲ. ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ರಾಜ್ಯಪಾಲರ ಮೂಲಕ ಬಿಜೆಪಿಯನ್ನು ರಕ್ಷಣೆ ಮಾಡುವ ಕೆಲಸವಾಗುತ್ತಿದೆ. ರಾಜಭವನವನ್ನು ಸ್ವಾರ್ಥಕ್ಕಾಗಿ ಬಿಜೆಪಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ದಿನೇಶ್ ಗುಂಡೂರಾವ್ ಕಿಡಿಗಾರಿದರು.

ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಬಿಜೆಪಿ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ. ರಾಜ್ಯಪಾಲರು ವಿಶ್ವಾಸಮತ ಯಾಚನೆಯ ನಿರ್ಣಯಕ್ಕೆ ಸಂಬಂಧಿಸಿದಂತೆ ಶರವೇಗದಲ್ಲಿ ಕೆಲಸ ಮಾಡುತ್ತಿರುವ ಹಿಂದಿನ ಮರ್ಮವೇನು? ಎಂದು ಅವರು ಪ್ರಶ್ನಿಸಿದರು.

ಪ್ರಜಾಪ್ರಭುತ್ವದ ವಿರುದ್ಧ ನಡೆಯುತ್ತಿರುವ ಈ ಬೆಳವಣಿಗೆಗಳ ವಿರುದ್ಧ ಕಾಂಗ್ರೆಸ್ ಪಕ್ಷವು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಬಿಜೆಪಿಯವರು ನಮ್ಮ ಶಾಸಕರನ್ನು ಮುಂಬೈ ಹಾಗೂ ಗೋವಾದಲ್ಲಿ ಒತ್ತೆಯಾಳು ರೀತಿಯಲ್ಲಿ ಇರಿಸಿಕೊಂಡಿದ್ದಾರೆ. ಅಲ್ಲದೆ, ಹೆದರಿಸಿ, ಬೆದರಿಸಿ ಆಮಿಷ ಒಡ್ಡುತ್ತಿದ್ದಾರೆ. ಇನ್ನು ಕೆಲವು ಶಾಸಕರಿಂದ ರಾಜೀನಾಮೆ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

'ನಮ್ಮ ಪಕ್ಷದ ಯಾವ ಶಾಸಕರೂ ಬಿಜೆಪಿ ಕಡೆ ಹೋಗುವುದಿಲ್ಲ. ಆದರೂ ಪದೇ ಪದೇ ನಮ್ಮ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ಬಿಜೆಪಿಯವರು ಮಾಡುತ್ತಿದ್ದಾರೆ. ನಮ್ಮ ಶಾಸಕರು ಯಾವುದೇ ಕಾರಣಕ್ಕೂ ಹೆದರಬಾರದು. ಕ್ಷೇತ್ರದ ಜನತೆ ಅವರ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ. ವಾಪಸ್ ಬಂದು ಸರಕಾರವನ್ನು ಉಳಿಸಲು ಕೈ ಜೋಡಿಸಬೇಕು ಎಂದು ಅವರು ಹೇಳಿದರು. ಸಚಿವ ರಹೀಮ್ ಖಾನ್ ಅವರಿಗೂ ಬಿಜೆಪಿ ನಾಯಕರು ಆಮಿಷ ಒಡ್ಡುತ್ತಿದ್ದಾರೆ. ರಾಜ್ಯಪಾಲರು ಇದರ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ' ಎಂದು ಈಶ್ವರ್ ಖಂಡ್ರೆ ಪ್ರಶ್ನಿಸಿದರು.

ಸರಕಾರಕ್ಕೆ ವಿಶ್ವಾಸವಿರುವ ಕಾರಣಕ್ಕೆ ಮುಖ್ಯಮಂತ್ರಿ ಸದನದಲ್ಲಿ ವಿಶ್ವಾಸಮತ ಯಾಚಿಸಿದ್ದಾರೆ. ಸೋಮವಾರ ಈ ಪ್ರಕ್ರಿಯೆ ನಡೆಯಲಿದೆ. ಆದರೆ, ಬಿಜೆಪಿಯವರು ಯಾಕೆ ಇಷ್ಟೊಂದು ಸಂತೋಷ ಪಡುತ್ತಿದ್ದಾರೋ ಗೊತ್ತಿಲ್ಲ. ಜನಪ್ರತಿನಿಧಿಗಳಾದ ನಾವು ಅಧಿಕಾರದಲ್ಲಿ ಇದ್ದರೂ ಕೆಲಸ ಮಾಡಬೇಕು, ಅಧಿಕಾರದಲ್ಲಿ ಇಲ್ಲದಿದ್ದರೂ ಕೆಲಸ ಮಾಡಬೇಕು.

-ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ

ಒಂದು ಪಕ್ಷದ ಚಿನ್ನೆಯಿಂದ ಗೆದ್ದ ಮೇಲೆ ನಾವು ಆ ಪಕ್ಷದ ಜೊತೆ ಇರಬೇಕು. 15 ಶಾಸಕರು ರಾಜೀನಾಮೆ ನೀಡಿದ್ದಾರೆ. ಅವರ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಗೆ ಹಣ ವ್ಯಯಿಸುವುದು ಯಾರು? ಇದು ಸಾರ್ವಜನಿಕರ ಹಣ, ಒಂದು ಚುನಾವಣೆ ಎಂದರೆ ಎಷ್ಟು ಖರ್ಚಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಸಾಕಷ್ಟು ಹೋರಾಟಗಳನ್ನು ಮಾಡಿ ಟಿಕೆಟ್ ಪಡೆದುಕೊಂಡಿರುತ್ತೇವೆ. ಕೊನೆಯವರೆಗೆ ಜನರ ಸೇವೆ ಮಾಡಲು ಮುಂದಾಗಬೇಕು.

-ರಾಜೇಗೌಡ, ಶೃಂಗೇರಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News