ಕೇಂದ್ರವು ತಮಿಳುನಾಡಿನಲ್ಲಿ ಹಿಂದಿ ಭಾಷೆಯನ್ನು ಹೇರುವುದಿಲ್ಲ: ನಿರ್ಮಲಾ ಸೀತಾರಾಮನ್

Update: 2019-07-20 13:39 GMT

ಚೆನ್ನೈ,ಜು.20: ಕೇಂದ್ರ ಸರಕಾರವು ತಮಿಳುನಾಡಿನಲ್ಲಿ ಹಿಂದಿ ಭಾಷೆಯನ್ನು ಹೇರಲು ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ ಮತ್ತು ತಮಿಳನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಇಲ್ಲಿ ತಿಳಿಸಿದರು.

ಅವರು ಇತ್ತೀಚಿನ ಅಂಚೆ ಇಲಾಖೆ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ನಡೆಸಿದ್ದನ್ನು ವಿರೋಧಿಸಿ ರಾಜ್ಯದ ರಾಜಕೀಯ ಪಕ್ಷಗಳು ಪ್ರತಿಭಟನೆಯನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಇದು ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ಒಂದು ರೂಪವಾಗಿದೆ ಎಂದು ಈ ಪಕ್ಷಗಳು ಆರೋಪಿಸಿವೆ.

ತಿಳಿದೋ ತಿಳಿಯದೆಯೋ ಇಂತಹ ಘಟನೆ ನಡೆದಿದ್ದರೆ ಯಾರೇ ಆದರೂ ಸರಕಾರವನ್ನು ಪ್ರಶ್ನಿಸಬಹುದು,ಆದರೆ ಅದು ಹಿಂದಿ ಹೇರಿಕೆ ಎಂಬ ದಿಢೀರ್ ನಿರ್ಧಾರಕ್ಕೆ ಬರಬಾರದು ಎಂದು ಸೀತಾರಾಮನ್ ಹೇಳಿದರು.

ಕೇಂದ್ರದ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಯೋಜನೆಯ ಅಂಗವಾಗಿ ಉತ್ತರದ ರಾಜ್ಯಗಳಲ್ಲಿ ತಮಿಳು ಭಾಷೆಯನ್ನು ಜನಪ್ರಿಯಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು.

*ಶೂನ್ಯ ಬಜೆಟ್ ಕೃಷಿ

ಮುಂಗಡಪತ್ರದಲ್ಲಿಯ ಶೂನ್ಯ ಬಜೆಟ್ ಕೃಷಿ ಪ್ರಸ್ತಾಪದ ವಿರುದ್ಧ ಕೆಲವು ವರ್ಗಗಳ ಅಭಿಪ್ರಾಯಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್,ಕೆಲವು ರಾಜ್ಯಗಳಲ್ಲಿ ಈಗಾಗಲೇ ಆ ಬಗ್ಗೆ ಪ್ರಯತ್ನಗಳು ನಡೆದಿವೆ. ಇದೊಂದು ಮುಕ್ತ ದೇಶವಾಗಿದ್ದು, ಯಾರೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಬಹುದು. ಆದರೆ ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಸಿಕ್ಕಿಂ ಮತ್ತು ಕರ್ನಾಟಕಗಳಲ್ಲಿ ತಳಮಟ್ಟದಲ್ಲಿ ಶೂನ್ಯ ಬಜೆಟ್ ಕೃಷಿಯನ್ನು ಕೈಗೊಳ್ಳಲಾಗಿದೆ ಮತ್ತು ಅದು ರೈತರಿಗೆ ಲಾಭದಾಯಕವಾಗಿದೆ. ಈ ಪ್ರಸ್ತಾಪ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಸರಕಾರದ ಚಿಂತನೆಯ ಭಾಗವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News