ತೀವ್ರತೆ ಕಳೆದುಕೊಂಡ ಮಳೆ: ಕೊಡಗಿನಲ್ಲಿ ರೆಡ್ ಬದಲಿಗೆ 'ಆರೆಂಜ್ ಅಲರ್ಟ್' ಘೋಷಣೆ

Update: 2019-07-20 14:16 GMT

ಮಡಿಕೇರಿ, ಜು.20: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಚುರುಕು ಗೊಂಡಿದ್ದು, ದಟ್ಟವಾಗಿ ಕವಿದ ಮಂಜಿನೊಂದಿಗೆ ಹದವಾಗಿ ಮಳೆಯಾಗುತ್ತಿದೆ. ಮತ್ತೊಂದೆಡೆ ಶುಕ್ರವಾರವಷ್ಟೇ ರೆಡ್ ಅಲರ್ಟ್ ಘೋಷಿಸಿದ್ದ ಹವಾಮಾನ ಇಲಾಖೆ ಮಳೆಯ ಪ್ರಮಾಣ ತಗ್ಗಬಹುದೆಂದು ಇಂದು ಆರೆಂಜ್ ಅಲರ್ಟ್ ಘೋಷಿಸಿ 115 ರಿಂದ 204 ಮಿ.ಮೀ ನಷ್ಟು ಮಳೆಯಾಗಬಹುದೆಂದು ತಿಳಿಸಿದೆ. ಜಿಲ್ಲೆಯ ಜನತೆ ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಹವಾಮಾನ ಇಲಾಖೆಯ ನಿರೀಕ್ಷೆಯಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಭಾರೀ ಮಳೆಯಾಗಿಲ್ಲ. ಹೀಗಿದ್ದೂ ದಿನಪೂರ್ತಿ ಹದವಾಗಿ ಸುರಿಯುತ್ತಿದ್ದ ಮಳೆ ಸಂಜೆಯ ವೇಳೆಗೆ ಒಂದಷ್ಟು ಚುರುಕಾಗಿತ್ತು. ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿ ಮತ್ತು ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ ಒಂದು ದಿನದ ಅವಧಿಯಲ್ಲಿ ಸರಾಸರಿ 2 ರಿಂದ 3 ಇಂಚಿನಷ್ಟು ಮಳೆಯಾಗಿದೆ. ನದಿ ಪಾತ್ರದ ನಾಪೋಕ್ಲು, ಮೂರ್ನಾಡು, ಸಿದ್ದಾಪುರ ವಿಭಾಗಗಳಲ್ಲು ಸಾಧಾರಣ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.

ರಸ್ತೆಗೆ ಬಿದ್ದ ಮರ
ವಿರಾಜಪೇಟೆ ತಾಲೂಕಿನ ತಿತಿಮತಿ ಬಳಿ ರಸ್ತೆಗೆ ಮರ ಬಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸುಮಾರು ಮುಕ್ಕಾಲು ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. 

ಗುಡ್ಡ ಕುಸಿತ
ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ನಗರದ ರಾಜಾಸೀಟು ರಸ್ತೆಯ, ಎಸ್‍ಪಿ ವಸತಿ ಗೃಹದ ಸಮೀಪ ಅಲ್ಪ ಪ್ರಮಾಣದ ಬರೆ ಕುಸಿದಿದೆ. ಗುಡ್ಡದ ಮೇಲೆ ಮತ್ತು ಕೆಳಗೆ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ನಿವಾಸಿಗಳಿಗೆ ಆತಂಕ ಮೂಡಿದೆ.

ಮೈ ಕೊರೆಯುವ ಚಳಿ
ಕಳೆದ ಕೆಲ ದಿನಗಳಿಂದ ದಿನಪೂರ್ತಿ ಸುರಿಯುತ್ತಿರುವ ಹದವಾದ ಮಳೆಯಿಂದಾಗಿ ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಮೈ ಕೊರೆಯುವ ಚಳಿಯ ವಾತಾವರಣ ನಿರ್ಮಾಣವಾಗಿದೆ. ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಮಡಿಕೇರಿಯಲ್ಲಿ 1 ಇಂಚು ಮಳೆ ದಾಖಲಾಗಿದೆ.
ಜಿಲ್ಲೆಯ ಸೋಮವಾರಪೇಟೆ, ವೀರಾಜಪೇಟೆ ತಾಲೂಕು ವ್ಯಾಪಿಯಲ್ಲು ಉತ್ತಮ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. 

ಪ್ರವಾಸಿಗರು ಹೆಚ್ಚು
ಚುಮುಚುಮು ಚಳಿ, ಮಂಜಿನ ಹನಿ, ಸಾಧಾರಣ ಮಳೆಯ ಸೊಬಗು ಕೊಡಗಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದು, ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೆಸರುವಾಸಿ ಪ್ರವಾಸಿತಾಣಗಳಾದ ರಾಜಾಸೀಟು ಉದ್ಯಾನವನ, ಅಬ್ಬಿಜಲಪಾತ, ಮಲ್ಲಳ್ಳಿ ಜಲಪಾತ ಸೇರಿದಂತೆ ಪ್ರಮುಖ ಜಲಪಾತಗಳನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. 

ಜಿಲ್ಲೆಯ ಮಳೆ ವಿವರ
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 24.47 ಮಿ.ಮೀ. ಜನವರಿಯಿಂದ ಇಲ್ಲಿಯವರೆಗೆ 758.80 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2309.04 ಮಿ.ಮೀ ಮಳೆಯಾಗಿತ್ತು.                              

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News