ಬಿಜೆಪಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಯಸುತ್ತಿಲ್ಲ: ಪ್ರಹ್ಲಾದ್ ಜೋಶಿ

Update: 2019-07-20 14:18 GMT

ಹುಬ್ಬಳ್ಳಿ, ಜು.20: ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಬಯಸುತ್ತಿಲ್ಲ. ಇದೆಲ್ಲವು ಮೈತ್ರಿ ಸರಕಾರದ ನಾಯಕರ ಸುಳ್ಳು ಆರೋಪಗಳೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ನಗರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸುವ ಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿ ಸರಕಾರ ಪ್ರತಿ ಹಂತದಲ್ಲೂ ಸಂವಿಧಾನವನ್ನು ಉಲ್ಲಂಘಿಸುತ್ತಿದೆ. ಆದರೆ, ನಾವು ಸಂವಿಧಾನ ರಕ್ಷಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಸರಿ-ತಪ್ಪುಗಳನ್ನು ಜನತೆ ನೋಡುತ್ತಿದ್ದಾರೆಂದು ತಿಳಿಸಿದರು.

ವಿಶ್ವಾಸಮತಯಾಚನೆ ಮಾಡುತ್ತೇನೆಂದು ಕುಮಾರಸ್ವಾಮಿಯವರೇ ತೀರ್ಮಾನ ಮಾಡಿದ್ದರು. ಆದರೆ ಅವರು ಇಲ್ಲಿಯವರೆಗೂ ವಿಶ್ವಾಸಮತಯಾಚನೆ ಮಾಡಿಲ್ಲ, ಸಂವಿಧಾನ ಮತ್ತು ಸಂವಿಧಾನ ಸಂಸ್ಥೆಗಳಿಗೆ ಯಾವುದೇ ಬೆಲೆ ಕೊಡದ ರೀತಿ ವರ್ತಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಬಿಜೆಪಿಯವರು ಮೈತ್ರಿ ಶಾಸಕರಿಗೆ ದುಡ್ಡು ಕೊಟ್ಟಿದ್ದರೆ, ಆಗಲೇ ದೂರು ಕೊಡಬೇಕಿತ್ತು. ಆದರೆ, ಆ ರೀತಿ ಮಾಡದೆ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದ್ದು ಖಂಡನೀಯ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News