ನೋಂದಣಿ ಕಚೇರಿಯಲ್ಲಿ ಸಿಬಿಐ, ಪೊಲೀಸ್ ನಿಯೋಜಿಸಿ: ಸುಪ್ರೀಂ ಕೋರ್ಟ್

Update: 2019-07-20 14:36 GMT

ಹೊಸದಿಲ್ಲಿ, ಜು.20: ಸರ್ವೋಚ್ಚ ನ್ಯಾಯಾಲಯದ ನೋಂದಣಿ ಕಚೇರಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸುವಂತೆ ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಕೇಂದ್ರ ತನಿಖಾ ಮಂಡಳಿ (ಸಿಬಿಐ)ಗೆ ಸೂಚಿಸಿದ್ದಾರೆ.

ಅಧಿಕಾರಿಗಳ ನಿಯೋಜನೆಯನ್ನು ಧೃಢಪಡಿಸಿದ ಸಿಬಿಐ ನಿರ್ದೇಶಕ ರಿಶಿ ಕುಮಾರ್ ಶುಕ್ಲ, ಕೇಂದ್ರ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಯಾವ ದರ್ಜೆಯ ಎಷ್ಟು ಅಧಿಕಾರಿಗಳನ್ನು ಶ್ರೇಷ್ಟ ನ್ಯಾಯಾಲಯದಲ್ಲಿ ನಿಯೋಜಿಸಲಾಗುವುದು ಎನ್ನುವ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಓರ್ವ ಅಧಿಕಾರಿಯ ಪ್ರಕಾರ, ಮುಖ್ಯ ನ್ಯಾಯಾಧೀಶರು, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಹಿರಿಯ ವರಿಷ್ಠಾಧಿಕಾರಿ ಹಾಗೂ ನಿರೀಕ್ಷಕ ದರ್ಜೆಯ ಅಧಿಕಾರಿಗಳನ್ನು ನೇಮಿಸುವಂತೆ ತಿಳಿಸಿದ್ದಾರೆ. ಇವರಿಗೆ ನೋಂದಣಿ ಕಚೇರಿಯ ಚಟುವಟಿಕೆಗಳ ಮೇಲೆ ನಿಗಾಯಿಡಲು ಆಮೂಲಕ ಪ್ರಕರಣಗಳ ಪಟ್ಟಿ ಮಾಡುವಿಕೆಯಲ್ಲಿ ಯಾವುದೇ ಆದ್ಯತೆಗಳನ್ನು ಅನುಸರಿಸುತ್ತಿಲ್ಲ ಮತ್ತು ಉದ್ಯೋಗಿಗಳ ವಕೀಲರಿಗೆ ಯಾವುದೇ ಮಾಹಿತಿ ಸೋರಿಕೆ ಮಾಡುತ್ತಿಲ್ಲ ಎನ್ನುವುದನ್ನು ದೃಢಪಡಿಸಿಕೊಳ್ಳುವ ಮತ್ತು ನೋಂದಣಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳ ಹಿನ್ನೆಲೆಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ನೀಡಲಾಗುವುದು.

ಸರ್ವೋಚ್ಚ ನ್ಯಾಯಾಲಯದಲ್ಲಿ ಸಿಬಿಐ ಅಧಿಕಾರಿಗಳನ್ನು ನಿಯೋಜಿಸುವುದು ಇದೇ ಮೊದಲ ಬಾರಿಯಾಗಿದೆ. ದೇಶಾದ್ಯಂತ ನಡೆಯುವ ಯಾವುದೇ ರೀತಿಯ ಭ್ರಷ್ಟಾಚಾರದ ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಈಗಾಗಲೇ ನೀಡಲಾಗಿದೆ.

ಆದರೆ, ನ್ಯಾಯಾಂಗದ ಉನ್ನತ ಮಟ್ಟಕ್ಕೆ ಸಂಬಂಧಪಟ್ಟ ವಿಷಯಗಳನ್ನು ಸರ್ವೋಚ್ಚ ನ್ಯಾಯಾಲಯದ ಅನುಮತಿಯಿಲ್ಲದೆ ತನಿಖೆ ನಡೆಸುವ ಅಧಿಕಾರ ಅದಕ್ಕೆ ಇಲ್ಲ. ಭಾರತದ ಮುಖ್ಯ ನ್ಯಾಯಾಧೀಶರೇ ಸಿಬಿಐ ಬಳಿ ತನ್ನ ಅಧಿಕಾರಿಗಳನ್ನು ಶ್ರೇಷ್ಟ ನ್ಯಾಯಾಲಯದಲ್ಲಿ ನಿಯೋಜಿಸಲು ಹೇಳಿರುವುದರಿಂದ ಅಲ್ಲಿ ಯಾವುದೇ ಅಕ್ರಮಗಳು ನಡೆದ ಸಂದರ್ಭದಲ್ಲಿ ಸಿಬಿಐ ತಾನಾಗಿಯೇ ದೂರು ದಾಖಲಿಸಲು ಸಾಧ್ಯವಾಗುವುದೇ ಎನ್ನುವುದು ಸದ್ಯ ಎಲ್ಲರಿಗೂ ಇರುವ ಕುತೂಹಲವಾಗಿದೆ ಎನ್ನುತ್ತಾರೆ ಓರ್ವ ಅಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News