ಇಸ್ರೋಗೆ ವಂಚನೆ: ದೇವಾಸ್ ಮಲ್ಟಿ ಮೀಡಿಯಾ ಕಂಪೆನಿಯ 3.10 ಕೋಟಿ ಜಪ್ತಿ

Update: 2019-07-20 14:51 GMT

ಬೆಂಗಳೂರು, ಜು.20: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಗೆ ವಂಚಿಸಿದ ಪ್ರಕರಣ ಸಂಬಂಧ ದೇವಾಸ್ ಮಲ್ಟಿ ಮೀಡಿಯಾ ಕಂಪೆನಿಯ ಬ್ಯಾಂಕ್ ಖಾತೆಯನ್ನು ಪತ್ತೆಹಚ್ಚಿರುವ ಈ.ಡಿ, ಮಲ್ಲೇಶ್ವರಂ ಐಸಿಐಸಿಐ ಬ್ಯಾಂಕಿನಲ್ಲಿ ಚಾಲ್ತಿ ಖಾತೆಯಲ್ಲಿದ್ದ 3.10 ಕೋಟಿ ರೂ. ಜಪ್ತಿ ಮಾಡಿದೆ ಎಂದು ವರದಿಯಾಗಿದೆ.

ಪ್ರಕರಣ ಹಿನ್ನಲೆ?: ಇಸ್ರೋದ ಕೆಲ ಮಾಜಿ ಉದ್ಯೋಗಿಗಳು, 2004ರಲ್ಲಿ ಬೆಂಗಳೂರಿನಲ್ಲಿ ದೇವಾಸ್ ಮಲ್ಟಿ ಮೀಡಿಯಾ ಕಂಪೆನಿ ಸ್ಥಾಪಿಸಿದ್ದರು. ದೇಶದಲ್ಲಿ ಮಲ್ಟಿ ಮೀಡಿಯಾ ಸೇವೆ ಒದಗಿಸಲು ಇಸ್ರೋ ಜೊತೆಗೆ ದೇವಾಸ್ ಕಂಪೆನಿ ಒಪ್ಪಂದ ಮಾಡಿಕೊಂಡಿತ್ತು. ನಂತರ 2005ರಲ್ಲಿ ಇಸ್ರೋ ಮಾರುಕಟ್ಟೆ ವಿಭಾಗದ ಆ್ಯಂಟ್ರಿಕ್ಸ್ ಕಾರ್ಪೊರೇಷನ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇಸ್ರೋದೊಂದಿಗಿನ ಒಪ್ಪಂದವನ್ನ ಬಳಸಿಕೊಂಡು ಬೇರೆ ಬೇರೆ ಹೂಡಿಕೆ ಮಾಡಿಸಿಕೊಂಡಿತ್ತು. ವಿವಿಧ ದೇಶಗಳಿಂದ 579.17 ಕೋಟಿ ರೂ. ಹೂಡಿಕೆಯನ್ನೂ ಸಂಗ್ರಹಿಸಿತ್ತು. ಬಳಿಕ 76.19 ಕೋಟಿ ರೂ. ಹೂಡಿಕೆ ಮಾಡಿ ಅಮೆರಿಕಾದಲ್ಲಿ ಸಹವರ್ತಿ ಕಂಪೆನಿ ತೆರೆದಿತ್ತು. ಆದರೆ, ಬೆಂಗಳೂರಿನಲ್ಲಿ ಕೇವಲ 25 ಕಂಪೆನಿಗಳಿಗೆ ಮಾತ್ರ ಇಂಟರ್‌ನೆಟ್ ಸೇವೆ ಒದಗಿಸಿತ್ತು. ಈ ಸಂಬಂಧ ದೆಹಲಿ ಸಿಬಿಐ ಭ್ರಷ್ಟಾಚಾರ ನಿಗ್ರಹ ಘಟಕ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿತ್ತು ಎನ್ನಲಾಗಿದೆ.

ಬಳಿಕ ದೇವಾಸ್ ಕಂಪೆನಿಯ ನಿರ್ದೇಶಕರ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಈ.ಡಿ ಕೂಡ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿತ್ತು. ದೇವಾಸ್ ಕಂಪೆನಿಯ ಕಚೇರಿ ಮೇಲೆ 2017ರ ಜ.23ರಂದು ದಾಳಿ ನಡೆಸಿದ್ದ ಈ.ಡಿ ಅಧಿಕಾರಿಗಳು, ಸಂಸ್ಥೆಯ ಮುಖ್ಯಸ್ಥರ ವಿಚಾರಣೆ ನಡೆಸಿ 79.76 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದರು. ಕಳೆದ ಫೆಬ್ರವರಿಯಲ್ಲಿ ಈ.ಡಿ ದೇವಾಸ್ ಕಂಪೆನಿಗೆ 1,585 ಕೋಟಿ ದಂಡ ವಿಧಿಸಿತ್ತು ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News