ಮಹಿಳೆಗೆ ಬೈಕ್ ಢಿಕ್ಕಿ: ದಲಿತ ಯುವಕನನ್ನು ಥಳಿಸಿ ಕೊಂದ ದುಷ್ಕರ್ಮಿಗಳು

Update: 2019-07-20 15:14 GMT

ಜೈಪುರ, ಜು. 21: ಮಹಿಳೆಗೆ ಆಕಸ್ಮಿಕವಾಗಿ ಬೈಕ್ ಢಿಕ್ಕಿಯಾದ ಕಾರಣ 28ರ ಹರೆಯದ ದಲಿತ ವ್ಯಕ್ತಿಯೋರ್ವನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ರಾಜಸ್ತಾನದ ಅಲ್ವಾರ್ ನಗರದಲ್ಲಿ ನಡೆದಿದೆ.

ಥಳಿತಕ್ಕೊಳಗಾಗಿ ಮೃತಪಟ್ಟ ವ್ಯಕ್ತಿಯನ್ನು ಹರೀಶ್ ಜಾಟವ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ‘‘ಜುಲೈ 16ರಂದು ಹರೀಶ್ ಭೀವಂಡಿಯಿಂದ ಹಿಂದೆ ಬರುತ್ತಿರುವಾಗ ಫಾಲ್ಸಾ ಗ್ರಾಮದಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್ ಆಕಸ್ಮಿಕವಾಗಿ ಢಿಕ್ಕಿಯಾಯಿತು. ಕೂಡಲೇ ಸುತ್ತುವರಿದ ಗುಂಪು ಅವರಿಗೆ ಕ್ರೂರವಾಗಿ ಥಳಿಸಿತು ಹಾಗೂ ಅವರನ್ನು ರಕ್ತದ ಮಡುವಿನಲ್ಲಿ ಬಿಟ್ಟು ತೆರಳಿತು’’ ಎಂದು ಅವರು ತಿಳಿಸಿದ್ದಾರೆ.

 ಥಳಿತದಿಂದ ಪ್ರಜ್ಞೆ ಕಳೆದುಕೊಂಡ ಹರೀಶ್ ಅವರಿಗೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಅನಂತರ ಹೊಸದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಗುರುವಾರ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ವಾರ್ ಪೊಲೀಸ್ ಅಧೀಕ್ಷಕ ಪರೀಸ್ ದೇಶ್‌ಮುಖ್, ಇದು ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣ ಅಲ್ಲ ಎಂದು ಹೇಳಿದ್ದಾರೆ. ಮರು ದಿನ ಪ್ರಕರಣದ ಕುರಿತು ಬೈಕ್ ಢಿಕ್ಕಿಯಾದ ಮಹಿಳೆ ಹಾಗೂ ಹರೀಶ್ ತಂದೆ ರತ್ತಿರಂ ಪ್ರತ್ಯೇಕ ದೂರು ದಾಖಲಿಸಿದ್ದಾರೆ.

   ಉಮರ್ ಶೇರ್ ಹಾಗೂ ಅವರ ಸಹವರ್ತಿಗಳು ತನ್ನ ಪುತ್ರನಿಗೆ ಹಲ್ಲೆ ನಡೆಸಿದ್ದಾರೆ ಎಂದು ಜಾಟವ್ ಅವರ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಹಿಳೆಯ ಪತಿ ಜಮಾಲುದ್ದೀನ್ ಅವರು, ಜಾಟವ್ ಕುಡಿದಿದ್ದ ಎಂದು ಆರೋಪಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News