ತಮಿಳುನಾಡಿಗೆ ನೀರು ಬಿಡುವುದು ಸರಿಯಲ್ಲ: ಕುರುಬೂರು ಶಾಂತಕುಮಾರ್

Update: 2019-07-20 16:17 GMT

ಬೆಂಗಳೂರು, ಜು.20: ಕಬಿನಿ ಜಲಾಶಯದ ಎತ್ತರ 84 ಅಡಿ, ಅದರಲ್ಲಿ ಹಾಲಿ ನೀರು ಸಂಗ್ರಹ ಇರುವುದು 69 ಅಡಿ, ಅದೇ ರೀತಿ ಕೆಆರ್‌ಎಸ್‌ನ ನೀರಿನ ಸಂಗ್ರಹ ಮಟ್ಟ 124ಅಡಿ, ಹಾಲಿ ನೀರು ಸಂಗ್ರಹ ವಿರುವುದು 90 ಅಡಿ ಮಾತ್ರ. ಮಳೆಗಾಲ ಸ್ವಲ್ಪಮಟ್ಟಿಗೆ ಪ್ರಾರಂಭವಾಗಿದ್ದು ಜಲಾಶಯಕ್ಕೆ ಸಾಧಾರಣ ಮಟ್ಟದ ಒಳಹರಿವು ಇದ್ದರೂ, ತಮಿಳುನಾಡಿಗೆ ನೀರು ಬಿಡುವುದು ಸರಿಯಲ್ಲ ಎಂದು ಕಬಿನಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಕಬಿನಿ ಜಲಾಶಯ ವ್ಯಾಪ್ತಿಯ ಕೇರಳದ ವೈನಾಡು ಭಾಗದಲ್ಲಿ ಈಗ ಸ್ವಲ್ಪಮಟ್ಟಿಗೆ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯಕ್ಕೆ 4700 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಕೇವಲ 69 ಅಡಿ ಮಾತ್ರ ತುಂಬಿರುವಾಗ ಒಳಹರಿವಿನ ನೀರಿನ ಪ್ರಮಾಣದಲ್ಲಿ ತಮಿಳುನಾಡಿಗೆ ನದಿ ಮೂಲಕ 3 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿರುವುದು. ಅಚ್ಚುಕಟ್ಟು ರೈತರಿಗೆ ದ್ರೋಹವೆಸಗಿದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಸರಕಾರ ತಮಿಳುನಾಡಿಗೆ ನೀರು ಬಿಡುವ ನೀರ್ ಗಂಟಿ ಕೆಲಸವನ್ನು ಮಾಡುತ್ತಿದೆ. ಅಚ್ಚುಕಟ್ಟು ರೈತರನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸುವ ಔಚಿತ್ಯವಾದರೂ ಏನು, ಬರಗಾಲದಿಂದ ರೈತರು ತತ್ತರಿಸಿದ್ದಾರೆ, ಜನ-ಜಾನುವಾರುಗಳಿಗೆ ಕುಡಿಯುವ ನೀರು ಸಿಗದಂತಾಗಿದೆ. ಈ ಭಾಗದ ರೈತರಿಗೆ ನಾಲೆಗಳ ಮೂಲಕ ತಕ್ಷಣವೇ ನೀರು ಹರಿಸಬೇಕು. ಜಲಾಶಯಗಳ ಭರ್ತಿಗೆ ಮೊದಲು ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕುರುಬೂರು ಶಾಂತಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News