ಶಾಸಕರು ಬಂದರೆ ಅವರ ಮೇಲೆ ಸಿನಿಮಾ ತೆಗೆಯಬಹುದು: ಡಿ.ಕೆ.ಶಿವಕುಮಾರ್

Update: 2019-07-20 16:19 GMT

ಬೆಂಗಳೂರು, ಜು.20: ಮುಂಬೈಯಲ್ಲಿರುವ ಶಾಸಕರೆಲ್ಲ ಬಂದ ಮೇಲೆ ನೀವು(ಮಾಧ್ಯಮದವರು) ಒಳ್ಳೆಯ ಸಿನಿಮಾ ತೆಗೆಯಬಹುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಶನಿವಾರ ಸದಾಶಿವನಗರಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ರಾಜಕಾರಣ ಅವರದ್ದು, ನಮ್ಮ ರಾಜಕಾರಣ ನಮ್ಮದು. ಮುಂಬೈಯಲ್ಲಿರುವ ನಮ್ಮ ಶಾಸಕರು ಗನ್ ಪಾಯಿಂಟ್‌ನಲ್ಲಿದ್ದಾರೆ. ಯಾರನ್ನೂ ಮಾತನಾಡಲು ಬಿಡುತ್ತಿಲ್ಲ ಎಂದರು.

ಶಾಸಕರ ಮೊಬೈಲ್‌ಗಳನ್ನು ಕಸಿದುಕೊಂಡು ಇಟ್ಟುಕೊಳ್ಳಲಾಗಿದೆ. ಅರ್ಧದಷ್ಟು ಶಾಸಕರನ್ನು ಲೋನವಾಲಾ ಹಾಗೂ ಇನ್ನು ಅರ್ಧದಷ್ಟು ಶಾಸಕರನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಪೊಲೀಸ್ ರಕ್ಷಣೆ ಇಟ್ಟುಕೊಂಡು, ಮೂರ್ನಾಲ್ಕು ವ್ಯಾನ್‌ಗಳನ್ನು ಇಟ್ಟುಕೊಂಡು ಕೂತಿದ್ದಾರೆ. ಏನು ಮಾಡುವುದು ನಮ್ಮ ಸಂಸ್ಕೃತಿ ಈ ಮಟ್ಟಕ್ಕೆ ಹೋಗಿದೆ. ಅವರೆಲ್ಲ ಬಂದ ಮೇಲೆ ನೀವು ಒಳ್ಳೆಯ ಸಿನಿಮಾ ತೆಗೆಯಬಹುದು ಎಂದು ಅವರು ಹೇಳಿದರು. ಮುಂಬೈಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿರುವ ಶಾಸಕ ಶ್ರೀಮಂತ ಪಾಟೀಲ್‌ರನ್ನು ನೋಡಲು ನಮ್ಮ ಪಕ್ಷದ ನಾಯಕರಿಗೆ ಅವಕಾಶ ಕಲ್ಪಿಸುತ್ತಿಲ್ಲ. ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ವಿಶ್ವಾಸಮತ ಯಾಚನೆಗಾಗಿ ನಾವು ಸದನದಲ್ಲಿ ಕಾಲಹರಣ ಮಾಡುತ್ತಿಲ್ಲ. ಮಾಜಿ ಪ್ರಧಾನಿ ವಾಜಪೇಯಿಯವರು ಸಂಸತ್ತಿನಲ್ಲಿ ತಮ್ಮ ಸರಕಾರವನ್ನು ಉಳಿಸಿಕೊಳ್ಳಲು 10 ದಿನ ಸದಸ್ಯರ ಮನವೊಲಿಸಲಿಲ್ಲವೇ? ಎಂದು ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News