ಮೈತ್ರಿ ಸರಕಾರ ಪ್ರಜಾತಂತ್ರ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ: ಜಗದೀಶ್ ಶೆಟ್ಟರ್

Update: 2019-07-20 17:04 GMT

ಬೆಂಗಳೂರು, ಜು.20: ಮೈತ್ರಿ ಸರಕಾರದ ನಾಯಕರು ಪ್ರಜಾತಂತ್ರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ನಗರದ ಖಾಸಗಿ ರೆಸಾರ್ಟ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸಭಾಧ್ಯಕ್ಷರು ಸೋಮವಾರ ವಿಶ್ವಾಸಮತಯಾಚನೆಗೆ ಅವಕಾಶ ನೀಡಿದ್ದಾರೆ. ಇದು ಬಾಯಿ ಮಾತಿಗೆ ಸೀಮಿತವಾಗಬಾರದು. ರಾಜ್ಯಪಾಲರ ಆದೇಶಕ್ಕೂ ಕಿಮ್ಮತ್ತು ನೀಡದೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿರುವುದು ದುರಂತ ಎಂದು ಹೇಳಿದರು.

ಶುಕ್ರವಾರ ಕಲಾಪದಲ್ಲಿ ರಾಜೀನಾಮೆ ಕೊಟ್ಟು ಹೊರಗಡೆ ಇರುವ ನಾಯಕರ ಬಗೆಗೆ ಅತ್ಯಂತ ಕೀಳುಮಟ್ಟದ ಮಾತುಗಳನ್ನಾಡಿದ್ದಾರೆ. ಬಿಜೆಪಿ ಮೇಲೆ ಆರೋಪ ಮಾಡಿರುವ ಶಾಸಕ ಶ್ರೀನಿವಾಸಗೌಡ ಎಸಿಬಿ ಮುಂದೆ ಸುಳ್ಳು ಹೇಳಿ ಸಿಕ್ಕಿಹಾಕಿ ಕೊಂಡಿದ್ದರು. ಸಭ್ಯಸ್ಥರಾದ ಶಾಸಕ ಎಚ್.ವಿಶ್ವನಾಥ್ ಬಗ್ಗೆ ಸಮ್ಮಿಶ್ರ ಸರಕಾರದ ನಾಯಕರು ಬಹಳ ಕೀಳಾಗಿ ಮಾತನಾಡಿದ್ದಾರೆ. ಅವರು ಗೈರು ಹಾಜರಿ ವೇಳೆ ಇಷ್ಟು ಕೀಳಾಗಿ ಮಾತನಾಡಬಾರದಿತ್ತು. ಬೇಜವಾಬ್ದಾರಿಯಾಗಿ ಮಾತನಾಡಿದ ಸಾ.ರಾ. ಮಹೇಶ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸೋಮವಾರ ನಡೆಯಲಿರುವ ಸದನದಲ್ಲಿ ವಿಶ್ವಾಸಮತಯಾಚನೆಗೆ ಅವಕಾಶ ಸಿಗಲಿಲ್ಲ ಎಂದರೆ ನಾವು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುತ್ತೇವೆ. ಸೋಮವಾರಕ್ಕೆ ಏನು ಮಾತು ಕೊಟ್ಟಿದ್ದಾರೆಯೋ ಅದರಂತೆ ನಡೆದುಕೊಳ್ಳಲಿ. ಅದಕ್ಕನುಗುಣವಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ರಾಜ್ಯ ಸರಕಾರ ರಾಜ್ಯಪಾಲರ ಸೂಚನೆಯನ್ನು ಉಲ್ಲಂಘನೆ ಮಾಡಿದ್ದು, ಇದರಂಥ ಭಂಡ ಸರಕಾರವನ್ನು ನಾನು ನೋಡಿಲ್ಲ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News