3 ಕೃತಕ ಹಾಲು ಉತ್ಪಾದನಾ ಘಟಕಗಳಿಗೆ ದಾಳಿ: 57 ಮಂದಿಯ ಬಂಧನ

Update: 2019-07-20 17:34 GMT

 ಭೋಪಾಲ್, ಜು. 20: ಮಧ್ಯಪ್ರದೇಶದ ಗ್ವಾಲಿಯರ್-ಛಂಬಲ್ ಪ್ರದೇಶದಲ್ಲಿ ಅತಿ ವಿಷಕಾರಿಯಾದ ಕೃತಕ ಹಾಲು ಉತ್ಪಾದಿಸುವ ಮೂರು ಘಟಕಗಳ ಮೇಲೆ ಶುಕ್ರವಾರ ದಾಳಿ ನಡೆಸಲಾಗಿದ್ದು, 57 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್‌ನ ವಿಶೇಷ ಕಾರ್ಯ ಪಡೆ ತಿಳಿಸಿದೆ.

ಈ ಕೃತಕ ಹಾಲನ್ನು ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ, ದಿಲ್ಲಿ, ಹರ್ಯಾಣ ಹಾಗೂ ಮಹಾರಾಷ್ಟ್ರದಲ್ಲಿರುವ ಬ್ರಾಂಡೆಡ್ ಹಾಲಿನ ಘಟಕಗಳಿಗೆ ಪೂರೈಸಲಾಗುತ್ತಿತ್ತು. ಮೊರೇನಾ ಜಿಲ್ಲೆಯ ಅಂಬಾ, ಗ್ವಾಲಿಯರ್-ಛಂಬಲ್ ವಲಯದ ಭಿಂದ್ ಜಿಲ್ಲೆಯ ಲಹರ್‌ನಲ್ಲಿದ್ದ ಈ ಮೂರು ಕೃತಕ ಹಾಲು ಉತ್ಪಾದನಾ ಘಟಕಗಳನ್ನು ಧ್ವಂಸಗೊಳಿಸಲಾಗಿದೆ.

ಸುಮಾರು 10 ಸಾವಿರ ಲೀಟರ್ ಕೃತಕ ಹಾಲು, 500 ಕಿ.ಗ್ರಾಂ.ಗೂ ಅಧಿಕ ಕೃತಕ ಮಾವಾ ಅಥವಾ ಖೋಯಾ ಹಾಗೂ 200 ಕಿ.ಗ್ರಾಂ.ಗೂ ಅಧಿಕ ಕೃತಕ ಪನೀರ್ ಅನ್ನು ತಂಡ ವಶಪಡಿಸಿಕೊಂಡಿದೆ ಎಂದು ವಿಶೇಷ ಕಾರ್ಯ ಪಡೆಯ ಪೊಲೀಸ್ ಅಧೀಕ್ಷಕ ರಾಜೇಶ್ ಭಾಡೋರಿಯಾ ತಿಳಿಸಿದ್ದಾರೆ.

  ಕೃತಕ ಹಾಲು ಹಾಗೂ ಇತರ ಉತ್ಪನ್ನಗಳಿದ್ದ ಒಟ್ಟು 20 ಟ್ಯಾಂಕರ್‌ಗಳು ಹಾಗೂ 11 ಪಿಕ್‌ಅಪ್ ವ್ಯಾನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಈ ಮೂರು ಘಟಕಗಳಿಂದ ದೊಡ್ಡ ಪ್ರಮಾಣದ ದ್ರವರೂಪದ ಡಿಟರ್ಜೆಂಟ್, ರಿಫೈನ್‌ಡ್ ಆಯಿಲ್, ಗ್ಲುಕೋಸ್ ಪೌಡರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೇಗೆ ಉತ್ಪಾದಿಸಲಾಗುತ್ತದೆ

ಪ್ರತಿ ಒಂದು ಲೀಟರ್ ಕೃತಕ ಹಾಲನ್ನು ಮೂರು ಘಟಕಗಳ ಮೂಲಕ ಉತ್ಪಾದಿಸಲಾಗುತ್ತದೆ. ಅದರಲ್ಲಿ ಒಂದು ಘಟಕ, ಅಂದರೆ ಶೇ. 30ರಷ್ಟು ಸಂಸ್ಕರಿತ ಎಣ್ಣೆ, ದ್ರವರೂಪದ ಡಿಟರ್ಜೆಂಟ್, ಬಿಳಿ ಪೈಂಟ್ ಹಾಗೂ ಗ್ಲುಕೋಸ್ ಪೌಡರ್ ಅನ್ನು ಕಲಬೆರಕೆ ಮಾಡಲಾಗುತ್ತದೆ. ಇದೇ ಫಾರ್ಮುಲಾವನ್ನು ಕೃತಕ ಕಾಟೆಜ್ ಗಿಣ್ಣು ಉತ್ಪಾದಿಸಲು ಬಳಸಲಾಗುತ್ತದೆ.

ಪ್ರತಿ ಲೀಟರ್ ಕೃತಕ ಹಾಲಿನ ಉತ್ಪಾದನೆಗೆ 5 ರೂ. ವೆಚ್ಚ ಬೀಳುತ್ತದೆ. ಇದನ್ನು ಪ್ರಮುಖ ಮಾರುಕಟ್ಟೆಗಳಿಗೆ 45-50 ರೂಪಾಯಿ ಬೆಲೆಗೆ ಪೂರೈಸಲಾಗುತ್ತದೆ. ಕಾಟೆಜ್ ಗಿಣ್ಣು ಅನ್ನು ಕಿ.ಗ್ರಾಂ.ಗೆ 100-150 ರೂಪಾಯಿಗೆ ಪೂರೈಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News