ಮೈಸೂರು: ಪ್ರಿಯಾಂಕ ಗಾಂಧಿ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

Update: 2019-07-20 17:43 GMT

ಮೈಸೂರು,ಜು.20: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಆದಿವಾಸಿ ಕುಟುಂಬದ ಮೇಲೆ ನಡೆದ ಗುಂಡಿನ ದಾಳಿಗೆ ನಲುಗಿದ ಸಂತ್ರಸ್ಥರನ್ನು ಭೇಟಿ ಮಾಡಲು ಬಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ರವರನ್ನು ಬಂಧಿಸಿರುವುದು ಖಂಡಿಸಿ ಮತ್ತು ಇದೊಂದು ಪ್ರಜಾಪ್ರಭುತ್ವದ ಮೇಲಿನ ಹಲ್ಲೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಗ್ರಾಮಾಂತರ ಕಾಂಗ್ರೆಸ್ ಹಾಗೂ ಜಿಲ್ಲಾ ಘಟಕವು ನಗರದ ಗಾಂಧಿ ಚೌದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿತು.

ಈ ವೇಳೆ ಮಾತನಾಡಿದ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಯೋಗಿ ಆದಿತ್ಯನಾಥ್ ನೀಚ ಬುದ್ದಿಯಿಂದ ಪ್ರಿಯಾಂಕರನ್ನು ಬಂಧಿಸಿದ್ದು, ಅವರ ಮೇಲೆ ದ್ವೇಷ ರಾಜಕಾರಣ ತೋರಿರುವುದು ಅಸಂವಿಧಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಉತ್ತರಪ್ರದೇಶದ ಮಿರ್ಜಾಪುರ ಬಳಿಯ ಸೊನಭದ್ರಾದದಲ್ಲಿ ಭೂವಿವಾದ ಹಿನ್ನೆಲೆಯಲ್ಲಿ ಆದಿವಾಸಿ ಕುಟುಂಬದವರ ಮೇಲೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿತ್ತು. ಈ ಗುಂಡಿನ ದಾಳಿಯಲ್ಲಿ 10 ಮಂದಿ ಸಾವನ್ನಪ್ಪಿದಲ್ಲದೇ, 19 ಜನ ತೀವ್ರ ಗಾಯಗೊಂಡಿದ್ದರು. ಈ ಘಟನೆ ಬಳಿಕ ಪೊಲೀಸರು ಈ ಪ್ರದೇಶದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದರು. ಇದೀಗ ಸಂತ್ರಸ್ತರನ್ನು ಭೇಟಿ ಮಾಡಲು ಪ್ರಿಯಾಂಕ ಗಾಂಧಿ ತೆರಳಿದ್ದು, ಪೊಲೀಸರು ತಡೆಯೊಡ್ಡಿದ್ದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಎಂ.ಕೆ ಸೋಮಶೇಖರ್, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಸುನಂದಾ ಕುಮಾರ್, ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್, ನಂಜನಗೂಡು ನಗರಸಭಾ ಸದಸ್ಯ ಎಸ್.ಪಿ.ಮಹೇಶ್, ನಗರ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಡೈರಿವೆಂಕಟೇಶ್, ಲೋಕೇಶ್ ಕುಮಾರ್, ಡಾ.ಭರತ್ ಕುಮಾರ್ ಯೋಗನಂದ್, ಸುಂದರ್ ಕುಮಾರ್, ಪ್ರಕಾಶ್, ಮೋಸಿನ್ ,ಪ್ರಕಾಶ್ ಕುಮಾರ್, ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News