ನಾಲ್ಕನೇ ದಿನಕ್ಕೆ ಕಾಲಿಟ್ಟ ದಲಿತ ಸಂಘರ್ಷ ಸಮಿತಿ ಅಹೋರಾತ್ರಿ ಧರಣಿ

Update: 2019-07-20 17:47 GMT

ಮೈಸೂರು,ಜು.20: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಐರಾವತ ಯೋಜನೆಯಲ್ಲಿ ನೀಡಲಾಗುವ ಪ್ರವಾಸಿ ಟ್ಯಾಕ್ಸಿಯಲ್ಲಿ ಬಾರೀ ಭ್ರಷ್ಟಾಚಾರ ನಡೆದಿದ್ದು, ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕಾರುಗಳನ್ನು ವಿತರಣೆ ಮಾಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನವಾದ ಶನಿವಾರವೂ ಮುಂದುವರೆದಿದೆ.

ನಗರದ ಟಿ.ಕೆ.ಲೇಔಟ್ ನಲ್ಲಿರುವ ಅಂಬೇಡ್ಕರ್ ಅಭಿವೃದ್ದಿ ನಿಗಮದ ಕಚೇರಿ ಮುಂಭಾಗ ಪೆಂಡಾಲ್ ಹಾಕಿ ಕಳೆದ ನಾಲ್ಕು ದಿನಗಳಿಂದಲೂ ಫಲಾನುಭವಿಗಳು ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ರಾಜ್ಯ ಸರಕಾರದ “ಐರಾವತ” ನಿರುದ್ಯೋಗ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉತ್ತಮ ಯೋಜನೆಯಾಗಿದ್ದು, ಇದರಲ್ಲಿ ಯಾವ ರಾಜಕಾರಣಿಗಳ ಹಸ್ತಕ್ಷೇಪವೂ ಇಲ್ಲದೆ ಫಲಾನುಭವಿಗಳ ಸೇವಾನುಭವ, ವಯಸ್ಸು, ಮತ್ತು ಅವರು ಪಡೆದಿರುವ ಅಂಕಗಳನ್ನು ಪರಿಗಣಿಸಿ ಪಾರದರ್ಶಕವಾಗಿ ಆಯ್ಕೆಮಾಡಲಾಗಿದೆ.

ಈ ಯೋಜನೆಯಲ್ಲಿ ಎಸ್ಸಿ, ಎಸ್ಟಿ ಸೇರಿದಂತೆ ಒಟ್ಟು 225 ಜನರನ್ನು ಅಯ್ಕೆಮಾಡಲಾಗಿದೆ. ಮೊದಲ ಹಂತದಲ್ಲಿ ಜು.5 ರಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು 90 ಜನರಿಗಷ್ಟೇ ಪ್ರವಾಸಿ ಕಾರುಗಳನ್ನು ವಿತರಣೆ ಮಾಡಿದ್ದಾರೆ. ಇನ್ನು ಉಳಿಕೆ ಜನರಿಗೆ ಪ್ರವಾಸಿ ಟ್ಯಾಕ್ಸಿ ನೀಡಲು ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದು, ಇಂತಹದೇ ಫೈನಾನ್ಸ್ ಕಂಪನಿಯ ಮೂಲಕ ನೀವು ಕಾರುಗಳನ್ನು ಖರೀದಿಸಬೇಕು, ಮತ್ತು ನಾವು ಹೇಳಿದ ಕಾರನ್ನೇ ತೆಗೆದುಕೊಳ್ಳಬೇಕು ಎಂಬ ಷರತ್ತನ್ನು ವಿಧಿಸುತ್ತಿದ್ದಾರೆ. ಒಟ್ಟಾರೆ ಈ ಯೋಜನೆಗೆ 7 ರಿಂದ 8 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಆಯ್ಕೆಯಾದ ಫಲಾನುಭವಿಗಳನ್ನು ಬಿಟ್ಟು ತಮಗೆ ಹಣ ನೀಡುವವರಿಗೆ ಕಾರುಗಳನ್ನು ನೀಡುವ ಹುನ್ನಾರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರಕಾರ ನಿಯಮಾನುಸಾರವಾಗಿ ಆಯ್ಕೆ ಮಾಡಿರುವ ಫಲಾನುಭವಿಗಳಿಗೆ ಮಾತ್ರ ಪ್ರವಾಸಿ ಕಾರುಗಳನ್ನು ವಿತರಣೆ ಮಾಡಬೇಕು. ಇಲ್ಲದಿದ್ದರೆ ಧರಣಿಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ, ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಕೆ.ವಿ.ದೇವೇಂದ್ರ, ಎಡೆದೊರೆ ಮಹದೇವಯ್ಯ, ಶಿವರಾಜು, ಮೂಡಹಳ್ಳಿ ಮಹದೇವ, ಶಿವಮೂರ್ತಿ, ಮುಡುಗಳ್ಳಿ ಮಹದೇವ, ಫಲಾನುಭವಿಗಳಾದ ಸಂತೋಷ್ ತಳೂರು, ದೇವರಾಜು ಬಿಳಿಕೆರೆ, ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News