ಮೂಡಿಗೆರೆ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ತಂತಿ; ಬದಲಾಯಿಸಲು ಗ್ರಾಮಸ್ಥರ ಆಗ್ರಹ

Update: 2019-07-20 18:05 GMT

ಮೂಡಿಗೆರೆ, ಜು.20: ತಾಲೂಕಿನ ಬೆಟ್ಟಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಳಿಕೆ, ದೊಡ್ಡಳ್ಳಿ, ಗುತ್ತಿ, ಮೂಡಿಗೆರೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಳಿಗೆ ಅಳವಡಿಸಿರುವ ವಿದ್ಯುತ್ ತಂತಿಗಳು ರಸ್ತೆಯಲ್ಲಿ ನಡೆದಾಡುವವರ ಕೈಗೆಟಕುವಂತೆ ಜೋತು ಬಿದ್ದಿದ್ದು, ಮೆಸ್ಕಾಂ ಇಲಾಖೆ ಕೂಡಲೇ ಈ ವಿದ್ಯುತ್ ತಂತಿಗಳನ್ನು ಬದಲಾಯಿಸುವಂತೆ ತಾಲೂಕು ಛಲವಾದಿ ಮಹಾಸಭಾದ ಕಾರ್ಯದರ್ಶಿ ಬೆಟ್ಟಗೆರೆ ಮಂಜುನಾಥ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಮೂಡಿಗೆರೆಯಿಂದ ಬೆಟ್ಟಗೆರೆ ಸಂಪರ್ಕಿಸುವ ಹಳಿಕೆ, ದೊಡ್ಡಳ್ಳಿ ಗುತ್ತಿ ಗ್ರಾಮದಲ್ಲಿ ಮೆಸ್ಕಾಂ ಇಲಾಖೆ ವಿದ್ಯುತ್ ಮಾರ್ಗವನ್ನು ಅಳವಡಿಸಿದೆ. ರಸ್ತೆ ಬದಿಯಲ್ಲಿರುವ ಈ ವಿದ್ಯುತ್ ಕಂಬಗಳ ನಡುವೆ ಹಾಕಲಾಗಿರುವ ವಿದ್ಯುತ್ ತಂತಿಗಳು ಕಳೆದ ಕೆಲ ತಿಂಗಳಿನಿಂದ ಜೋತುಬಿದ್ದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ರಸ್ತೆಯಲ್ಲಿ ಸಂಚರಿಸುವ ಗ್ರಾಮಸ್ಥರು, ಶಾಲಾ ಮಕ್ಕಳ ಕೈಗೆಟುಕುವಂತೆ ವಿದ್ಯುತ್ ತಂತಿಗಳು ಜೋತುಬಿದ್ದಿರುವುದರಿಂದ ಹಾಗೂ ವಿದ್ಯುತ್ ತಂತಿಗಳು ತುಂಡಾಗಿ ಬೀಳುವ ಆತಂಕದಿಂದಾಗಿ ಸಾರ್ವಜನಿಕರು, ಶಾಲಾ ಮಕ್ಕಳು ಪ್ರತಿನಿತ್ಯ ಈ ರಸ್ತೆಯಲ್ಲಿ ಪ್ರಾಣಭೀತಿಯಿಂದ ಸಂಚರಿಸುವಂತಾಗಿದೆ ಎಂದು ಮಂಜುನಾಥ್ ದೂರಿದ್ದಾರೆ.

ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಈ ರಸ್ತೆಯಲ್ಲಿ ಸಂಚರಿಸುವ ಶಾಲಾ ಮಕ್ಕಳು ಮುಟ್ಟಿದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದ್ದು, ಈ ಕಾರಣಕ್ಕೆ ಶಾಲಾ ಮಕ್ಕಳ ಪೋಷಕರೂ ಆತಂಕಕ್ಕೊಳಗಾಗಿದ್ದಾರೆ. ಅಲ್ಲದೇ ಈ ರಸ್ತೆಯ ಅಕ್ಕಪಕ್ಕ ಕಾಫಿ ತೋಟಗಳಿದ್ದು, ಕಾಫಿ ತೋಟಗಳಲ್ಲಿನ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ತಂತಿಗಳು ತುಂಡಾಗಿ ರಸ್ತೆ ಮೇಲೆ ಬೀಳುವ ಸಂಭವವೂ ಇದೆ. ಇಲ್ಲಿ ಅಳವಡಿಸಿರುವ ವಿದ್ಯುತ್ ಕಂಬವೂ ಶಿಥಿಲಗೊಂಡಿದ್ದು, ಭಾರೀ ಮಳೆಯಾದಲ್ಲಿ ಉರುಳಿ ಬೀಳಲಿದೆ. ಆದ್ದರಿಂದ ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಹಾಗೂ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಿ ಗ್ರಾಮಸ್ಥರ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಗ್ರಾಮಸ್ಥರೊಂದಿಗೆ ಮೆಸ್ಕಾಂ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News