ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರದಿಂದ ರಸ್ತೆ ಒತ್ತುವರಿ: ಆರೋಪ

Update: 2019-07-20 18:12 GMT

ಚಿಕ್ಕಮಗಳೂರು, ಜು.20: ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರದವರು ಒತ್ತುವರಿ ಮಾಡಿರುವ ತಮ್ಮ ಜಮೀನಿಗೆ ತೆರಳುವ ರಸ್ತೆಯನ್ನು ತೆರವುಗೊಳಿಸುವಂತೆ ತಾಲೂಕಿನ ಕದ್ರಿಮಿದ್ರಿ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಮೂಡಿಗೆರೆ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಶನಿವಾರ ಭೇಟಿ ಮಾಡಿದ ಗ್ರಾಮಸ್ಥರು ಈ ಸಂಬಂಧ ಮನವಿ ಸಲ್ಲಿಸಿ, ಕದ್ರಿಮಿದ್ರಿಯ ಸರ್ವೆ ನಂ.273ರಲ್ಲಿ 40 ಅಡಿಯ ರಸ್ತೆಯಿದ್ದು, ತಲತಲಾಂತರದಿಂದ ನಾವು ನಮ್ಮ ಜಮೀನಿಗೆ ಮತ್ತು ಆ ಭಾಗದಲ್ಲಿರುವ ಗ್ರಾಮ ದೇವತೆ ದೊಡ್ಡಮ್ಮನವರ ದೇವಾಲಯಕ್ಕೆ ಆ ರಸ್ತೆಯ ಮೂಲಕ ತೆರಳುತ್ತಿದ್ದೇವೆ. ಅದೇ ಸರ್ವೆ ನಂಬರಿನಲ್ಲಿ ನಿರ್ಮಾಣವಾಗುತ್ತಿರುವ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರದವರು ಇದೀಗ ಆ ರಸ್ತೆಯನ್ನು ಒತ್ತುವರಿ ಮಾಡಿ ಬೇಲಿ ನಿರ್ಮಿಸಲು ಮುಂದಾಗಿದ್ದಾರೆ. ಅವರು ಬೇಲಿ ನಿರ್ಮಿಸಿದಲ್ಲಿ ತಮಗೆ ದೇವಾಲಯಕ್ಕೆ ಮತ್ತು ತಮ್ಮ ಜಮೀನುಗಳಿಗೆ ಓಡಾಡಲು ರಸ್ತೆಯಿಲ್ಲದಂತಾಗುತ್ತದೆ ಎಂದು ಅಳಲು ತೋಡಿಕೊಂಡರು.

ಗ್ರಾಮಸ್ಥರ ನೂರಾರು ಎಕರೆ ಜಮೀನಿಗೆ ತೆರಳಲು ಅದೊಂದೇ ರಸ್ತೆಯಿದ್ದು, ಅದನ್ನು ಬಿಟ್ಟರೆ ಯಾವುದೇ ಪರ್ಯಾಯ ರಸ್ತೆಯಿಲ್ಲ ಎಂದು ಜಿಲ್ಲಾಧಿಕಾರಿಗೆ ಗ್ರಾಮ ನಕಾಶೆಯನ್ನು ತೋರಿಸಿ ವಿವರಿಸಿದ ಗ್ರಾಮಸ್ಥರು, ರಸ್ತೆ ಒತ್ತುವರಿಯನ್ನು ತೆರವುಗೊಳಿಸದಿದ್ದಲ್ಲಿ ನಾವು ಓಡಾಡಲು ಸಾಧ್ಯವಾಗದೇ ಜಮೀನುಗಳು ಹಾಳು ಬೀಳುತ್ತವೆ ಎಂದು ಮನವಿ ಮಾಡಿ, ರಸ್ತೆ ಒತ್ತುವರಿಯನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿದರು. 

ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಚಿಕ್ಕಮಗಳೂರು ತಾಲೂಕು ಕಚೇರಿಯ ತಹಶೀಲ್ದಾರ್ ಅವರು ವರ್ಗಾವಣೆಗೊಂಡಿದ್ದಾರೆ. ಸೋಮವಾರ ಅಧಿಕಾರ ಸ್ವೀಕರಿಸುವ ನೂತನ ತಹಶೀಲ್ದಾರ್ ಅವರಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ಸೂಚಿಸುತ್ತೇನೆಂದ ಅವರು, ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು. ಅಲ್ಲದೇ ಇದೇ ವೇಳೆ ಕಾಮಗಾರಿ ಸ್ಥಳದಲ್ಲಿದ್ದ ಇಂಜಿನಿಯರ್ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರು ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿ ಮುಂದಿನ ಸೂಚನೆ ನೀಡುವವರೆಗೂ ಬೇಲಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಆದೇಶಿಸಿದರು.

ಈ ವೇಳೆ ಮೂಗ್ತಿಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಜಗನ್ನಾಥ್, ಗ್ರಾಮಸ್ಥರಾದ ಪ್ರಕಾಶ್, ಪುರುಷೋತ್ತಮ್, ಲೋಕೇಶ್, ಕೃಷ್ಣೇಗೌಡ, ರಘು, ಪರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News