ಪ್ರಿಯಾಂಕ ಗಾಂಧಿ ಬಂಧನ ಖಂಡಿಸಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಧರಣಿ

Update: 2019-07-20 18:15 GMT

ಚಿಕ್ಕಮಗಳೂರು, ಜು.20: ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಘೋರವಾಲ ಎಂಬಲ್ಲಿ ಇತ್ತೀಚೆಗೆ ಭೂಮಾಲಕರು 10 ಆದಿವಾಸಿ ರೈತರನ್ನು ಗುಂಡಿಕ್ಕಿ ಕೊಂದಿದ್ದು, ಘಟನೆಯಲ್ಲಿ 28 ಜನರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದ್ದು, ಹತ್ಯೆ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಹಾಗೂ ಸಂತ್ರಸ್ಥ ಕುಟುಂಬದವರಿಗೆ ಮಾನವೀಯತೆ ತೋರಲು ಹಾಗೂ ಧೈರ್ಯ ತುಂಬುವ ಹಿನ್ನೆಲೆಯಲ್ಲಿ ಸಂತಸ್ಥರ ಭೇಟಿ ಮಾಡಲು ಹೋಗುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಉತ್ತರ ಪ್ರದೇಶ ಸರಕಾರ ಬಂಧಿಸುವ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ತೋರಿದೆಯೆಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಶನಿವಾರ ನಗರದಲ್ಲಿ ಧರಣಿ ನಡೆಸಿದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಎಲ್.ವಿಜಯ್‍ಕುಮಾರ್, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಾಂತೇಗೌಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಗರದ ತಾಲೂಕು ಕಚೇರಿಯಿಂದ ಹನುಂತಪ್ಪ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಸಮಾವೇಶಗೊಂಡರು. ಈ ವೇಳೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಖಂಡಿಸಿ ಉತ್ತರ ಪ್ರದೇಶ ಸರಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಹಾಗೂ ಬಿಜೆಪಿ ಪಕ್ಷಕ್ಕೆ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಡಾ.ಡಿ.ಎಲ್.ವಿಜಯಕುಮಾರ್, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ರಾಷ್ಟ್ರೀಯ ಪಕ್ಷವೊಂದರ ನಾಯಕರು, ಮಾನವರು ತಲೆತಗ್ಗಿಸುವಂತೆ ನಡೆದಿರುವ ಘಟನೆಯ ಸ್ಥಳಕ್ಕೆ ಹೋಗಲು ಬಿಡುವುದಿಲ್ಲವೆಂದರೆ ಎಂಥಹ ವಿಪರ್ಯಾಸ. ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರ ಅವರು, ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಅವರು ಶುಕ್ರವಾರ ಪೋಲಿಸರ ತಡೆ ವಿರುದ್ಧ ಧರಣಿ ನಡೆಸಿದ್ದಾರೆ. ಅಲ್ಲಿಂದಲೇ ದುರ್ಮರಣ ಹೊಂದಿರುವ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ದೌರ್ಜನ್ಯ ನಡೆಸಿದವರ ನೆರವಿಗೆ ನಿಂತಿರುವ ಉತ್ತರ ಪ್ರದೇಶದ ಬಿಜೆಪಿ ಸರಕಾರದ ಧೋರಣೆ ವಿರುದ್ಧ ಹೋರಾಟ ನಡೆಸಿ, ಸಂತ್ರಸ್ಥ ಕುಟುಂಬದವರಿಗೆ ನ್ಯಾಯ ದೊರಕಿಸಲು ಮುಂದಾಗಿದ್ದಾರೆ. ಪ್ರಿಯಾಂಕರವರ ದಿಟ್ಟತನದ ಹೋರಾಟವನ್ನು ಬೆಂಬಲಿಸಿ ಕೊಲೆಗಡುಕರಿಗೆ ಯೋಗಿ ಆದಿತ್ಯಾನಾಥ ಸರಕಾರ ಬೆಂಬಲ ನೀಡುತ್ತಿರುವುದನ್ನು ವಿರೋಧಿಸಿ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಸರಕಾರ ಅಮಾಯಕರನ್ನು ಹತ್ಯೆ ಮಾಡಿದ ಕೊಲೆಗಡುಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಈ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದರು. 

ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಉತ್ತರ ಪ್ರದೇಶದಲ್ಲಿ ರೈತರ ಕೊಲೆ ಖಂಡನೀಯ. ಕೊಲೆಗಡುಕರು ಯಾರೆಂಬುದು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಳ್ಳುತ್ತಿದ್ದರೂ ಅವರನ್ನು ಬಂಧಿಸದ ಯೋಗಿ ಆದಿತ್ಯಾನಂದರ ಸರಕಾರ ಕೊಲೆಗಡುಕ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿ ಪಕ್ಷ ಮೋಸಗಾರರ ಪಕ್ಷ, ದೇಶದ್ರೋಹಿಗಳ ಪಕ್ಷ, ಬಡವರು, ಕಾರ್ಮಿಕರು, ದಲಿತರು, ಆದಿವಾಸಿಗಳನ್ನು ವಿರೋಧಿಸುವ ಪಕ್ಷ ಬಿಜೆಪಿಯಾಗಿದೆ. ಬಿಜೆಪಿಯವರು ರಾಜ್ಯದ ಸಮ್ಮಿಶ್ರ ಸರಕಾರಕ್ಕೆ ತೊಂದರೆ ನೀಡುತ್ತಿದೆ. ಪದೇಪದೇ ಕುದುರೆ ವ್ಯಾಪಾರ ನಡೆಸುತ್ತ ಅಧಿಕಾರದ ಹಗಲು ಕನಸು ಕಾಣುತ್ತಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿದ್ದಾರೆಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಸ್.ಶಾಂತೇಗೌಡ ಮಾತನಾಡಿ, ಮಾನವಂತರು, ಬಡಬಗ್ಗರು, ಬದುಕಲಾಗದ ಸ್ಥಿತಿ ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಾನೂನನ್ನು ಬಡಜನರನ್ನು ಕಗ್ಗೊಲೆ ಮಾಡಿಸಲು ಉಪಯೋಗಿಸಿಕೊಳ್ಳುತ್ತಿರುವುದು ಖಂಡನೀಯ ಎಂದರು. 

ಈ ಸಂದರ್ಭದಲ್ಲಿ ಪ್ರತಿಭಟನಾಕರರನ್ನುದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರಸಭೆ ಮಾಜಿ ಸದಸ್ಯರಾದ ಎಚ್.ಎಸ್.ಪುಟ್ಟಸ್ವಾಮಿ ಹಾಗೂ ಸುರೇಖಾ ಸಂಪತ್, ಶಿವಾನಂದಸ್ವಾಮಿ ಮಾತನಾಡಿದರು. ಧರಣಿಯಲ್ಲಿ ಜಿಲ್ಲಾ ಕಾಂಗ್ರೆಸ್‍ನ ಇತರ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News