ಪ್ರಿಯಾಂಕ ಗಾಂಧಿ ಬಂಧನ ಖಂಡಿಸಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಪ್ರತಿಭಟನೆ

Update: 2019-07-20 18:23 GMT

ಶಿವಮೊಗ್ಗ, ಜು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರ ಬಂಧನ ಮಾಡಿರುವ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಶನಿವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು. ಮಹಾವೀರ ಸರ್ಕಲ್‍ನಲ್ಲಿ ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿತು. 

ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಭೂ ವಿವಾದದ ಹಿನ್ನೆಲೆಯಲ್ಲಿ 10 ಬಡ ರೈತರನ್ನು ಹತ್ಯೆಗೈಯಲಾಗಿತ್ತು. ಬುಡಕಟ್ಟು ಜನಾಂಗದ ಮೇಲೆ ನಡೆದಿರುವ ದೌರ್ಜನ್ಯದ ಕುರಿತಂತೆ ಮಾಹಿತಿ ಸಂಗ್ರಹಿಸಲು ಹಾಗೂ ನೊಂದವರ ಪರ ನ್ಯಾಯ ಕೇಳಲು ಹೋಗಿದ್ದ ಪ್ರಿಯಾಂಕ ಗಾಂಧಿರವರನ್ನು ಅಲ್ಲಿನ ಪೊಲೀಸರು ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದ ಬಂಧಿಸಿದ್ದಾರೆ. ಇದು ಅತ್ಯಂತ ಖಂಡನೀಯ. ಅಧಿಕಾರ ದುರ್ಬಳಕೆಗೆ ನಿದರ್ಶನವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಬಡವರ ಪರ ನ್ಯಾಯ ಕೇಳಲು ಹೋದರೆ ಬಂಧಿಸುವ ಕೆಲಸ ನಡೆಯುತ್ತಿರುವುದು ನಿಜಕ್ಕೂ ಖಂಡನಾರ್ಹ. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರವರು ಜನ ವಿರೋಧಿ ಆಳ್ವಿಕೆ ನಡೆಸುತ್ತಿದ್ದಾರೆ. ಇದಕ್ಕೆ ಪ್ರಿಯಾಂಕ ಗಾಂಧಿ ಬಂಧನವೇ ತಾಜಾ ನಿದರ್ಶನಎಂದು ಪ್ರತಿಭಟನಾಕಾರರು ದೂರಿದ್ದಾರೆ. 

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ ಕಾಶಿ, ರಾಮೇಗೌಡ, ಎಲ್.ಸತ್ಯನಾರಾಯಣರಾವ್, ರಮೇಶ್ ಹೆಗ್ಡೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News