ಸರಕಾರ ಪ್ರತಿಷ್ಠಾಪನೆಗೆ ರಾಜ್ಯಪಾಲರ ಕಚೇರಿ ದುರ್ಬಳಕೆ ಆರೋಪ: ಸಿಪಿಐ(ಎಂ) ಪ್ರತಿಭಟನೆ

Update: 2019-07-20 18:37 GMT

ಮಂಡ್ಯ, ಜು.20: ಜನಾದೇಶ ಇಲ್ಲದ ಬಿಜೆಪಿ ಸರಕಾರ ಪ್ರತಿಷ್ಠಾಪಿಸಲು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಸಿಪಿಐ(ಎಂ) ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಂಜಯ ವೃತ್ತದ ಬಳಿ ಇರುವ ಕೆ.ವಿ.ಶಂಕರಗೌಡರ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಅವರು, ಮೈತ್ರಿ ಸರಕಾರವನ್ನು ಆಪರೇಷನ್ ಕಮಲದ ಮೂಲಕ  ಬೀಳಿಸಿ ಅಧಿಕಾರ ಅಧಿಕಾರ ಹಿಡಿಯಲು ಹೊರಟಿದೆ ಎಂದು ಆರೋಪಿಸಿದರು. ಬಿಜೆಪಿಯ ತೀವ್ರ ಅಧಿಕಾರದಾಹಿ ಹಾಗೂ ಪ್ರಜಾತಂತ್ರ ವಿರೋಧಿ ಪ್ರಯತ್ನದ ಭಾಗವಾಗಿ ಕೇಂದ್ರ ಸರಕಾರದ ಅಧಿಕಾರ ಮತ್ತು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆಪಾದಿಸಿದರು.

ಸದನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸ ಮತವನ್ನು ಈಗಾಗಲೇ ಮಂಡಿಸಿರುವುದರಿಂದ ರಾಜ್ಯಪಾಲರ ಮೂಲಕ ನಿರ್ದಿಷ್ಟ ಗಡುವಿನೊಳಗೆ ಆ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕೆಂಬ ತಾಕೀತು ಮಾಡಿರುವುದು ರಾಜ್ಯದ ಜನತೆಗೆ ಎಸಗಿದ ಅಪಚಾರವೆಂದು ಅವರು ಟೀಕಿಸಿದರು.

ಸದನವು ಸಾಕಷ್ಟು ಮಹತ್ವದ ವಿಷಯಗಳನ್ನು ಗಂಭೀರವಾಗಿ ಚರ್ಚಿಸುತ್ತಿರುವಾಗ ಮತ್ತು ಮುಖ್ಯವಾಗಿ ಕ್ರಿಯಾ ಲೋಪದ ಪ್ರಶ್ನೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ವಿಪ್ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್ ರೂಲಿಂಗ್ ನೀಡಬೇಕಿರುವಾಗಲೇ ಮುಖ್ಯಮಂತ್ರಿಗಳಿಗೆ ಈ ರೀತಿ ಸೂಚನೆಯನ್ನು ರಾಜ್ಯಪಾಲರು ನೀಡಿರುವುದು ಸದನದ ಸದಸ್ಯರ ಚರ್ಚಿಸುವ ಹಕ್ಕಿನ ದಮನವಾಗಿದೆ ಎಂದು ಅವರು ಕಿಡಿಕಾರಿದರು.

ಬಿಜೆಪಿಯ ವಿರೋಧಿ ಮುಕ್ತ ಭಾರತ ನಿರ್ಮಿಸುವುದರ ಭಾಗವಾಗಿ ರಾಜ್ಯಪಾಲ ಹುದ್ದೆಯ ದುರ್ಬಳಕೆ ಮಾಡಿಕೊಂಡು ದೇಶಾದ್ಯಂತ ವಿರೋಧಿ ಪಕ್ಷಗಲ ರಾಜ್ಯ ಸರಕಾರಗಳನ್ನು ಕಿತ್ತುಹಾಕುವ ಬಿಜೆಪಿಯ ದುರುದ್ದೇಶಕ್ಕೆ ಎಲ್ಲಾ ಪ್ರಜಾಪ್ರಭುತ್ವವಾದಿ ಶಕ್ತಿಗಳು ಪ್ರಬಲ ವಿರೋಧವನ್ನು ವ್ಯಕ್ತಪಡಿಸಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು.

ರಾಜ್ಯ ಭೀಕರ ಬರಗಾಲ ಎದುರಿಸುತ್ತಿದ್ದು ರೈತರ ಆತ್ಮಹತ್ಯೆಗಳು ಬೆಳೆಯುತ್ತಿರುವಾಗ ಬೆಲೆ ಏರಿಕೆಗಳ ಮತ್ತಷ್ಟು ದಾಳಿಗಳು ಸಂಕಷ್ಟದಲ್ಲಿರುವ ಜನರ ಮೇಲೆ ಮುಂದುವರಿದಿರುವಾಗ, ಜನಪ್ರತಿನಧಿಗಳಾದ ರಾಜ್ಯದ ಶಾಸಕರು ಮತ್ತು ವಿಪಕ್ಷ ಬಿಜೆಪಿ, ವಿಧಾನಸಭಾ ಅಧಿವೇಶನದಲ್ಲಿ ರಚನಾತ್ಮಕ ಚರ್ಚೆಯಲ್ಲಿ ತೊಡಗಿ ಜನತೆಗೆ ಸರಿಯಾದ ಪರಿಹಾರ ಹುಡುಕಬೇಕು. ಆದರೆ, ಕೇವಲ ಅಧಿಕಾರದಾಹಿ ಮನೋಭಾವದಿಂದ ಮೈತ್ರಿ ಸರಕಾರವನ್ನು ಅಸ್ತಿರಗೊಳಿಸುವ ಬೆಳವಣಿಗೆ ತೀವ್ರ ನಾಚಿಕೆಗೇಡಿನದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂ ವಲಯ ಕಾರ್ಯದರ್ಶಿ ಸಿ.ಕುಮಾರಿ, ಜಿಲ್ಲಾ ಕಾರ್ಯದರ್ಶಿ ಎಂ.ಪುಟ್ಟಮಾದು, ದೇವಿ, ಟಿ.ಯಶವಂತ, ಟಿ.ಎಲ್.ಕೃಷ್ಣೇಗೌಡ, ಆರ್.ಕೃಷ್ಣ, ಕೆ.ಬಸವರಾಜು, ಹನುಮೇಶ್, ಲಿಂಗರಾಜಮೂರ್ತಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News