ಮಂಡ್ಯ: ಪ್ರಿಯಾಂಕ ಗಾಂಧಿ ಬಂಧನ ಖಂಡಿಸಿ ಪ್ರತಿಭಟನೆ

Update: 2019-07-20 18:40 GMT

ಮಂಡ್ಯ, ಜು.20: ಜಮೀನು ವಿವಾದಕ್ಕೆ ಸಂಬಂಧಿಸಿದ ಗುಂಡಿನ ದಾಳಿಯಲ್ಲಿ ಪ್ರಾಣ ತೆತ್ತವರ ಕುಟುಂಬದವರ ಭೇಟಿಗೆ ಹೊರಟಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕಾವೇರಿ ಉದ್ಯಾನವನದ ಬಳಿ ಜಿಲ್ಲಾ ಕಾಂಗ್ರೆಸ್, ಮಹಿಳಾ ಘಟಕ, ರೈತ ಘಟಕ, ಯುವ ಘಟಕ ಹಾಗೂ ವಿದ್ಯಾರ್ಥಿ ಘಟಕದ ವತಿಯಿಂದ ಧರಣಿ ನಡೆಸಿದ ಅವರು, ಪ್ರಧಾನಿ ನರೇಂದ್ರಮೋದಿ, ಉತ್ತರಪ್ರದೇಶ ಸಿಎಂ ಆದಿತ್ಯನಾಥ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಮೀನು ವಿವಾದದ ಗಲಾಟೆಯಲ್ಲಿ ಹತ್ತು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಅಮಾಯಕರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳುವುದು ಪ್ರಿಯಾಂಕ ಅವರ ಉದ್ದೇಶವಾಗಿತ್ತು. ಆದರೆ, ಇದಕ್ಕೆ ಅಡ್ಡಿಪಡಿಸುವುದು ಎಷ್ಟು ಸರಿ ಎಂದು ಅವರು ಕಿಡಿಕಾರಿದರು.

ಬಿಜೆಪಿ ಸರಕಾರವ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ವಿಪಕ್ಷಗಳ ನಾಯಕರ ವಿರುದ್ಧ ಸಲ್ಲದ ಆರೋಪ ಮಾಡುತ್ತಾ ಸಂವಿಧಾನ ವಿರೋಧಿ ನಡೆ ಅನುಸರಿಸಲಾಗುತ್ತಿದೆ. ಈ ವಿಚಾರದಲ್ಲಿ ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಸಿದ್ದರಾಮೇಗೌಡ, ಡಿ.ಸುದರ್ಶನ್, ಚಿಕ್ಕಮಂಚಯ್ಯ, ಕೊತ್ತತ್ತಿ ಸಿದ್ದಪ್ಪ, ಸಿ.ಎಂ.ದ್ಯಾವಪ್ಪ, ಹಂಚಳ್ಳಿ ಲೋಕೇಶ್, ಸಾತನೂರು ಕೃಷ್ಣ, ಎಂ.ಗುರುಪ್ರಸಾದ್, ರುದ್ರಪ್ಪ, ಮಂಜುನಾಥ್, ವಿಜಯಲಕ್ಷ್ಮೀ, ಮಹೇಶ್, ಚಂದುಪುರ ಪಾಪಣ್ಣ, ಅಜ್ಜಹಳ್ಳಿ ರಾಮಕೃಷ್ಣ, ದ್ಯಾವಯ್ಯ, ಗುರು, ಎಚ್.ಅಶೋಕ್ ಸೇರಿದಂತೆ ಇತರರು ಭಾಗವಹಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News