ಪ್ರಾದೇಶಿಕ ಭಾಷೆಗಳಲ್ಲಿ ನ್ಯಾಯ

Update: 2019-07-20 18:40 GMT

ಸರ್ವೋಚ್ಚ ನ್ಯಾಯಾಲಯದ ಜಾಲತಾಣ ಬುಧವಾರದಿಂದ ತನ್ನ ತೀರ್ಪುಗಳನ್ನು ಅಸ್ಸಾಮಿ, ಹಿಂದಿ, ಕನ್ನಡ, ಮರಾಠಿ, ಒಡಿಯ ಮತ್ತು ತೆಲುಗು ಭಾಷೆಗೆ ತರ್ಜುಮೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಇನ್ನಷ್ಟು ಭಾಷೆಗಳನ್ನು ಶೀಘ್ರದಲ್ಲೇ ಸೇರಿಸಲಾಗುವುದು. ಈವರೆಗೆ ಈ ದಾಖಲೆಗಳನ್ನು ಕೇವಲ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲಾಗುತ್ತಿತ್ತು.

ಕೆಲವಾರಗಳ ಹಿಂದೆ 30ರ ಹರೆಯದ ಚಾಂದಿನಿಯ ಪತಿ ಕ್ರಿಮಿನಲ್ ಪ್ರಕರಣದಲ್ಲಿ ಬಂಧನಕ್ಕೊಳಗಾದಾಗ ಆತನನ್ನು ಬಿಡಿಸಲು ಯಾರನ್ನು ಸಂಪರ್ಕಿಸಬೇಕು ಎಂದು ಆಕೆಗೆ ತೋಚಲಿಲ್ಲ. ಆಕೆಗೆ ಯಾವ ವಕೀಲನ ಪರಿಚಯವೂ ಇರಲಿಲ್ಲ. ಹತಾಶೆಗೊಳಗಾದ ಆಕೆ, ಜುಲೈಯಲ್ಲಿ ಹೊಸದಿಲ್ಲಿಯ ಪಟಿಯಾಲ ಭವನದಲ್ಲಿ ತನ್ನ ಗಂಡನನ್ನು ಹಾಜರುಪಡಿಸುವ ವೇಳೆ ನ್ಯಾಯಾಲಯದ ಹೊರಗೆ ಭೇಟಿಯಾದ ವಕೀಲರಲ್ಲಿ ಅತ್ಯಂತ ದುಬಾರಿ ವಕೀಲರ ಸೇವೆಯನ್ನು ಸ್ವೀಕರಿಸುವಂತಾಯಿತು. ಚಾಂದಿನಿಗೆ ಇಂಗ್ಲಿಷ್ ಓದಲು ಅಥವಾ ಬರೆಯಲು ಬರುವುದಿಲ್ಲ. ಹಾಗಾಗಿ ಆಕೆಯ ಪತಿಯನ್ನು ಬಿಡಿಸಲು ಅಗತ್ಯವಿದೆಯೆಂದು ಹೇಳಿ ವಕೀಲ ತೋರಿಸಿದ ಇಂಗ್ಲಿಷ್‌ನಲ್ಲಿ ಬರೆದಿದ್ದ ದಾಖಲೆಗಳನ್ನು ನೋಡಿಯೇ ಆಕೆ ಆತನ ಮಾತನ್ನು ನಂಬಿದಳು. ಚಾಂದಿನಿ ಪತಿ ಯಶಪಾಲ್ ಉತ್ತರ ದಿಲ್ಲಿಯಲ್ಲಿ ಸೆಕೆಂಡ್ ಹ್ಯಾಂಡ್ ಇಲೆಕ್ಟ್ರಾನಿಕ್ ವಸ್ತುಗಳ ಖರೀದಿ ಮತ್ತು ಮಾರಾಟ ವ್ಯವಹಾರ ನಡೆಸುತ್ತಿದ್ದ. ಚಾಂದಿನಿಯೇ ಹೇಳುವಂತೆ, ಆಕೆಗೆ ತನ್ನ ಪತಿ ಜೈಲಿಗೆ ಹೋಗುವಂತಹ ಯಾವ ಕೆಲಸ ಮಾಡುತ್ತಿದ್ದರು ಎನ್ನುವುದೇ ತಿಳಿದಿಲ್ಲ. ಸರ್ವೋಚ್ಚ ನ್ಯಾಯಾಲಯದ ಜಾಲತಾಣ ಬುಧವಾರದಿಂದ ತನ್ನ ತೀರ್ಪುಗಳನ್ನು ಅಸ್ಸಾಮಿ, ಹಿಂದಿ, ಕನ್ನಡ, ಮರಾಠಿ, ಒಡಿಯ ಮತ್ತು ತೆಲುಗು ಭಾಷೆಗೆ ತರ್ಜುಮೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಇನ್ನಷ್ಟು ಭಾಷೆಗಳನ್ನು ಶೀಘ್ರದಲ್ಲೇ ಸೇರಿಸಲಾಗುವುದು. ಈವರೆಗೆ ಈ ದಾಖಲೆಗಳನ್ನು ಕೇವಲ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲಾಗುತ್ತಿತ್ತು. ಚಾಂದಿನಿಯಂತಹ ಲಕ್ಷಾಂತರ ಜನರಿಗೆ ಇಂಗ್ಲಿಷ್ ತಿಳಿದಿಲ್ಲವಾದ್ದರಿಂದ ದೇಶಾದ್ಯಂತದ ನ್ಯಾಯಾಲಯಗಳಲ್ಲಿ ಭಾರತೀಯ ಭಾಷೆಗಳನ್ನು ಬಳಸಬೇಕು ಎಂಬ ಬೇಡಿಕೆ ಬಹಳ ಹಿಂದಿನಿಂದಲೂ ಇತ್ತು. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುವಾದ ಯೋಜನೆ ಸ್ವಾಗತಾರ್ಹ ಕ್ರಮವಾದರೂ ಇದರಿಂದ ಸಾಮಾನ್ಯ ಜನರಿಗೆ ನ್ಯಾಯ ವ್ಯವಸ್ಥೆ ಹತ್ತಿರವಾಗುತ್ತದೆ ಎಂಬ ಮಾತನ್ನು ಕಾನೂನು ತಜ್ಞರು ಪುರಸ್ಕರಿಸುವುದಿಲ್ಲ. ಸದ್ಯ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಬಿಹಾರ ರಾಜ್ಯಗಳು ತಮ್ಮ ಉಚ್ಚ ನ್ಯಾಯಾಲಯಗಳ ಪ್ರಕ್ರಿಯೆಗಳಿಗೆ ಹಿಂದಿಯನ್ನು ಬಳಸುತ್ತಿವೆ. ಆದರೆ, ತಜ್ಞರ ಪ್ರಕಾರ, ನ್ಯಾಯಾಲಯಗಳಲ್ಲಿ ಯಾವುದೇ ಸುಧಾರಣೆ ನಿಜವಾಗಿಯೂ ಪರಿಣಾಮ ಬೀರಬೇಕಾದರೆ ಅದು ತಳಮಟ್ಟದಿಂದ ಆರಂಭವಾಗಬೇಕು. ಸ್ಥಳೀಯ ಭಾಷೆಗಳ ಉಪಯೋಗ ಮಾಡಬೇಕಿರುವ ಅತೀಹೆಚ್ಚು ಅಗತ್ಯವಿರುವುದು ಉಚ್ಚ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಎನ್ನುವುದು ತಜ್ಞರ ವಾದ. ಸರ್ವೋಚ್ಚ ನ್ಯಾಯಾಲಯದ ತರ್ಜುಮೆ ಯೋಜನೆ ಎಷ್ಟು ಪರಿಣಾಮಕಾರಿಯಾಗಿರಬಹುದು ಎನ್ನುವುದರ ಮೇಲೂ ತಜ್ಞರು ಅನುಮಾನ ವ್ಯಕ್ತಪಡಿಸುತ್ತಾರೆ. ಉದಾಹಣೆಗೆ, ನ್ಯಾಯಭಾಷೆಗೆ ಸಂಬಂಧಿಸಿದ ಅನೇಕ ಪದಗಳು ಲ್ಯಾಟಿನ್ ಭಾಷೆಯಿಂದ ಪಡೆಯಲಾಗಿದ್ದು ಭಾರತೀಯ ಭಾಷೆಗಳಲ್ಲಿ ಅದಕ್ಕೆ ಸಮಾನಾಂತರ ಪದಗಳು ಸಿಗದೆ ಇರಬಹುದು. ಯೋಜನೆಯನ್ನು ಮುಂದುವರಿಸುವುದಕ್ಕೂ ಮೊದಲು ಸರ್ವೋಚ್ಚ ನ್ಯಾಯಾಲಯ ಅನುವಾದಕ್ಕೆ ಮಾನದಂಡಗಳ ಪಟ್ಟಿಯನ್ನು ಒದಗಿಸಲಿದೆಯೇ? ಈ ಯೋಜನೆಯನ್ನು ಜಾರಿಗೆ ತರಲು ಅನುವಾದಗೊಳಿಸುವ ಸಾಫ್ಟ್ ವೇರನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದರೂ ಈ ಸಾಫ್ಟ್‌ವೇರ್ ಎಷ್ಟು ವಿಶ್ವಸನೀಯ ಎನ್ನುವುದು ಇನ್ನೂ ಅಸ್ಪಷ್ಟವಾಗಿದೆ. ಸರ್ವೋಚ್ಚ ನ್ಯಾಯಾಲಯದ ನಿರ್ಧಾರ ಒಂದು ಗುಣಾತ್ಮಕ ಹೆಜ್ಜೆ ಎನ್ನುವುದನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ. ಆದರೆ ಈ ಅನುವಾದವು ಮನವಿದಾರರಿಗಿಂತ ವಕೀಲರಿಗೇ ಹೆಚ್ಚು ಉಪಯೋಗವಾಗಲಿದೆ ಎನ್ನುವುದು ಸ್ಪಷ್ಟ. ಯಾಕೆಂದರೆ, ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ಪ್ರಕಟಿಸಿತು ಎಂದರೆ ಆ ಪ್ರಕರಣ ಅಂತಿಮ ಹಂತ ತಲುಪಿತೆಂದು ಅರ್ಥ. ಹಾಗಾಗಿ ಮನವಿದಾರರ ಬಳಿ ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ಬಹಳ ಕಡಿಮೆಯಿರುತ್ತದೆ. ಆದರೆ, ಇದೇ ವೇಳೆ ಸ್ಥಳೀಯ ಮತ್ತು ಉಚ್ಚ ನ್ಯಾಯಾಲಯಗಳು ಸ್ಥಳೀಯ ಭಾಷೆಗಳಲ್ಲಿ ಕಾರ್ಯಾಚರಿಸಿದರೆ ಮನವಿದಾರರಿಗೆ ತಮ್ಮ ಪ್ರಕರಣವನ್ನು ತಿಳಿಯಲು ನೆರವಾಗುತ್ತದೆ ಮತ್ತು ಅದರಲ್ಲಿ ಹಸ್ತಕ್ಷೇಪ ನಡೆಸಲೂ ಸಾಕಷ್ಟು ಅವಕಾಶ ಲಭಿಸುತ್ತದೆ. ಇದಕ್ಕೆ ಉದಾಹರಣೆಯೆಂದರೆ, ಛತ್ತೀಸ್‌ಗಡದ ಬಸ್ತಾರ್ ಜಿಲ್ಲೆಯಿಂದ ಹೊರಗೆ ಕಾರ್ಯಾಚರಿಸುವ ಜಗದಲ್ಪುರ್ ಕಾನೂನು ನೆರವು ಸಮೂಹದ ಸ್ಥಾಪಕಿ ವಕೀಲೆ ಇಶಾ ಕಂಡೇಲ್ವಾಲ್, ತಮ್ಮ ಸ್ಥಳೀಯ ಭಾಷೆಯಾದ ಛತ್ತೀಸ್‌ಗಡಿ ಅಥವಾ ಗೊಂಡಿಯ ಬದಲಾಗಿ ಹಿಂದಿ ಭಾಷೆಯಲ್ಲಿ ಕಾರ್ಯಾಚರಿಸುತ್ತಿರುವ ಕಾನೂನು ವ್ಯವಸ್ಥೆಯಿಂದಾಗಿ ರಾಜ್ಯದ ಜನರು ಯಾವ ರೀತಿ ಸಮಸ್ಯೆಗೊಳಗಾಗಿದ್ದಾರೆ ಎನ್ನುವುದನ್ನು ವಿವರಿಸುತ್ತಾರೆ. ಬಸ್ತಾರ್‌ನಲ್ಲಿ ಮಾವೋವಾದಿಗಳ ಹಾವಳಿ ಹೆಚ್ಚಾಗಿದ್ದು ಪದೇಪದೇ ಆದಿವಾಸಿಗಳು ಪೊಲೀಸರು ಮತ್ತು ಬಂಡುಕೋರ ಗುಂಪಿನ ಮಧ್ಯೆ ನಡೆಯುವ ಗುಂಡಿನ ಚಕಮಕಿಯ ಮಧ್ಯೆ ಸಿಲುಕುತ್ತಾರೆ. ಜನರಿಗೆ ತಮ್ಮ ವಿರುದ್ಧ ಯಾವ ಆರೋಪ ಹೊರಿಸಲಾಗಿದೆ ಎನ್ನುವುದೂ ತಿಳಿದಿರುವುದಿಲ್ಲ ಎನ್ನುತ್ತಾರೆ ಕಂಡೇಲ್ವಾಲ್. ಆರೋಪಿಗಳು ಹೆಚ್ಚಾಗಿ ವಕೀಲರ ಸಹಾನುಭೂತಿಯನ್ನೇ ನೆಚ್ಚಿಕೊಂಡಿರುತ್ತಾರೆ ಮತ್ತು ಅವರಿಗೆ ಪ್ರಕರಣದ ಬಗ್ಗೆ ಹೆಚ್ಚೇನೂ ತಿಳಿದಿರುವುದಿಲ್ಲ. ವಿಶೇಷವಾಗಿ, ಮಾವೋವಾದಿ ಪ್ರಕರಣಗಳಲ್ಲಿ ಮುಗ್ಧ ಆದಿವಾಸಿಗಳನ್ನು ಸಿಲುಕಿಸಲು ಪೊಲೀಸರ ಜೊತೆ ವಕೀಲರು ಕೈಜೋಡಿಸುವ ಅಪಾಯ ಹೆಚ್ಚಿರುವ ಕಡೆಗಳಲ್ಲಿ ಇದು ಮತ್ತಷ್ಟು ಸಮಸ್ಯೆ ಸೃಷ್ಟಿಸುತ್ತದೆ. ಸ್ಥಳೀಯ ನ್ಯಾಯಾಲಯಗಳಲ್ಲೂ ಪ್ರಾದೇಶಿಕ ಭಾಷೆಗಳನ್ನೇ ಬಳಸಲಾಗುತ್ತಿರುವ ರಾಜ್ಯಗಳಲ್ಲೂ, ಕಾನೂನು ವೃತ್ತಿಯನ್ನು ಇಂಗ್ಲಿಷ್‌ನಲ್ಲೇ ನಡೆಸಬೇಕು ಎಂಬ ಮಾನಸಿಕತೆಯಿಂದಾಗಿ ಈ ಪ್ರಯತ್ನಕ್ಕೆ ಹಿನ್ನಡೆಯುಂಟಾಗಿದೆ.

ಉದಾಹರಣೆಗೆ, ತಮಿಳುನಾಡಿನಲ್ಲಿ ಕೆಳನ್ಯಾಯಾಲಯಗಳಲ್ಲಿ ತಮಿಳು ಭಾಷೆಯನ್ನು ಕಡ್ಡಾಯಗೊಳಿಸುವ ಉದ್ದೇಶದಿಂದ ಅಲ್ಲಿನ ಸರಕಾರ 1976ರಲ್ಲಿ ಕಾನೂನಿಗೆ ತಿದ್ದುಪಡಿ ತಂದಿತ್ತು. ಆದರೆ ಹೆಚ್ಚಿನ ಪ್ರಕ್ರಿಯೆಗಳು ಇಂಗ್ಲಿಷ್‌ನಲ್ಲೇ ಮುಂದುವರಿಯುತ್ತಿವೆ ಯಾಕೆಂದರೆ ತಾವು ಆ ಭಾಷೆ ಮಾತನಾಡದೆ ಇದ್ದರೆ ಗ್ರಾಹಕರಿಗೆ ತಮ್ಮ ಮೇಲೆ ನಂಬಿಕೆ ಬರುವುದಿಲ್ಲ ಎಂದು ಅಲ್ಲಿನ ಅನೇಕ ವಕೀಲರು ಭಾವಿಸುತ್ತಾರೆ. ವಿಶೇಷವಾಗಿ ಇದು, ಉಚ್ಚ ನ್ಯಾಯಾಲಯದ ಆವರಣದಲ್ಲಿ ಹಲವು ಪೌರ ನ್ಯಾಯಾಲಯಗಳು ಕಾರ್ಯಾಚರಿಸುವ ಚೆನ್ನೈ ವಿಷಯದಲ್ಲಿ ನಿಜವೂ ಆಗಿದೆ. ಸ್ಥಳೀಯ ನ್ಯಾಯಾಲಯಗಳಲ್ಲಿ ತಮಿಳನ್ನು ಕಡೆಗಣಿಸುವಲ್ಲಿ ಉಚ್ಚ ನ್ಯಾಯಾಲಯದ ಕಾಣಿಕೆಯೂ ಇದೆ. ತಮಿಳುನಾಡು ಅಧಿಕೃತ ಭಾಷಾ ಕಾಯ್ದೆಯ 4ಬಿ ವಿಧಿಯ ಪ್ರಕಾರ, ತಮಿಳನ್ನು ಉಚ್ಚ ನ್ಯಾಯಾಲಯದ ಕೆಳ ನ್ಯಾಯಾಲಯಗಳ ಭಾಷೆಯಾಗಿ ಪರಿಗಣಿಸಲಾಗಿದೆ. ಅಲ್ಲಿ ತೀರ್ಪು ಮತ್ತು ಆದೇಶಗಳನ್ನು ತಮಿಳಿನಲ್ಲಿ ಬರೆಯಬೇಕೆಂದು ಸೂಚಿಸಲಾಗಿದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನ್ಯಾಯಿಕ ಅಧಿಕಾರಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲು ಉಚ್ಚ ನ್ಯಾಯಾಲಯಕ್ಕೆ ಈ ಕಾಯ್ದೆ ಅವಕಾಶ ನೀಡಿತ್ತು. 1994ರ ಮದ್ರಾಸ್ ಉಚ್ಚ ನ್ಯಾಯಾಲಯದ ಪೂರ್ಣ ನ್ಯಾಯಾಲಯದ ನಿರ್ಣಯದಲ್ಲಿ ಕೆಳಹಂತದ ನ್ಯಾಯಾಧೀಶರು ತಮ್ಮ ತೀರ್ಪು ಮತ್ತು ಆದೇಶಗಳನ್ನು ಇಂಗ್ಲಿಷ್ ಅಥವಾ ತಮಿಳಿನಲ್ಲಿ ಬರೆಯಲು ಅವಕಾಶ ನೀಡಲಾಯಿತು. ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್, ಕಚೇರಿ ಪ್ರಕಟನೆಯ ಮೂಲಕ ಕೆಳಹಂತದ ನ್ಯಾಯಾಧೀಶರಿಗೆ ಸೂಚಿಸಿದ ಈ ನಿರ್ಣಯದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಯಿತು. 2013ರಲ್ಲಿ ಉಚ್ಚ ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತು. ಆದರೆ, ನ್ಯಾಯಾಲಯ ಕಾನೂನಿನ ನಿರ್ದಿಷ್ಟ ಆಯಾಮವನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ತಿಳಿಸಿದ ನ್ಯಾಯಪೀಠ 2014ರಲ್ಲಿ ಈ ತೀರ್ಪಿನ ಪುನರ್‌ಪರಿಶೀಲನೆಗೆ ಅವಕಾಶ ನೀಡಿತು. 2014ರಲ್ಲಿ ಸರ್ವೋಚ್ಚ ನ್ಯಾಯಾಲಯ ಈ ಪುನರ್‌ಪರಿಶೀಲನಾ ಆದೇಶಕ್ಕೆ ತಡೆ ವಿಧಿಸಿತು ಮತ್ತು ಅಂದಿನಿಂದ ಈ ಪ್ರಕರಣ ನ್ಯಾಯಾಲಯದಲ್ಲಿ ಬಾಕಿಯುಳಿದಿದೆ. ತಮಿಳನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ಭಾಷೆಯನ್ನಾಗಿ ಮಾಡುವಂತೆ ಹಲವು ದಶಕಗಳಿಂದ ತಮಿಳುನಾಡಿನ ವಕೀಲರು ಆಗ್ರಹಿಸುತ್ತಲೇ ಬಂದಿದ್ದಾರೆ. 2006ರಲ್ಲಿ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ರಾಜ್ಯದ ಮುಖ್ಯಮಂತ್ರಿಯಾದಾಗ ಉಚ್ಚ ನ್ಯಾಯಾಲಯದಲ್ಲಿ ತಮಿಳು ಭಾಷೆಯನ್ನು ಬಳಸುವಂತೆ ಸರಕಾರ ಸಲಹೆ ನೀಡಿತ್ತು. ತಮಿಳನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ಭಾಷೆಯನ್ನಾಗಿ ಮಾಡುವ ಪ್ರಸ್ತಾವವನ್ನು ಕೇಂದ್ರಕ್ಕೆ ಕಳುಹಿಸಿದಾಗ ಅದು ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿಲುವು ಕೇಳಿತ್ತು ಮತ್ತು ಶ್ರೇಷ್ಠ ನ್ಯಾಯಾಲಯ ಈ ಪ್ರಸ್ತಾವನೆಯನ್ನೇ ತಿರಸ್ಕರಿಸಿತ್ತು ಎಂದು ಮದ್ರಾಸ್ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಕೆ. ಚಂದ್ರು ತಿಳಿಸಿದ್ದಾರೆ. ಇದಕ್ಕೆ ಒಂದು ಕಾರಣ, ಎಲ್ಲ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರು ಹೊರರಾಜ್ಯದವರಾಗಿರುತ್ತಾರೆ ಹಾಗಾಗಿ ಅವರಿಗೆ ಸ್ಥಳೀಯ ಭಾಷೆಗಳು ತಿಳಿದಿರುವುದಿಲ್ಲ. ಇದೇ ರೀತಿಯ ಪ್ರಸ್ತಾವನೆಯನ್ನು ಸರ್ವೋಚ್ಚ ನ್ಯಾಯಾಲಯ 1997ರಲ್ಲೂ ತಿರಸ್ಕರಿಸಿತ್ತು. ಕಾನೂನನ್ನು ಜನರ ಬಳಿ ಕೊಂಡೊಯ್ಯಲು ಸರ್ವೋಚ್ಚ ನ್ಯಾಯಾಲಯ ಬಯಸುವುದಾದರೆ ಅದು ಉಚ್ಚ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸಲು ಅವಕಾಶ ನೀಡಬೇಕು ಎಂದು ಹೇಳುತ್ತಾರೆ ಚಂದ್ರು. ಉಚ್ಚ ನ್ಯಾಯಾಲಯಗಳಲ್ಲಿ ಇಂಗ್ಲಿಷ್ ಬಳಕೆಯಿಂದ ಆ ಭಾಷೆಯನ್ನು ಸುಲಲಿತವಾಗಿ ಮಾತನಾಡಬಲ್ಲ ಮತ್ತು ಮಾತನಾಡದ ವಕೀಲರ ಮಧ್ಯೆ ಅಸಮಾನತೆ ಉಂಟಾಗುತ್ತದೆ. ಕಾನೂನನ್ನು ಚೆನ್ನಾಗಿ ಅರಿತ ಓರ್ವ ವ್ಯಕ್ತಿ ಇಂಗ್ಲಿಷ್‌ನಲ್ಲಿ ಅಷ್ಟೊಂದು ಹಿಡಿತವಿಲ್ಲದ ಕಾರಣಕ್ಕೆ ಉಚ್ಚ ನ್ಯಾಯಾಲಯದಲ್ಲಿ ಸಮಸ್ಯೆ ಎದುರಿಸಬಹುದು ಎಂದವರು ಹೇಳುತ್ತಾರೆ. ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿರುವ ವಕೀಲರ ಮಾರುಕಟ್ಟೆಯೂ ದೊಡ್ಡದಾಗಿದೆ. ಉದಾಹರಣೆಗೆ, ವೃತ್ತಿ ದಿಗ್ಗಜರಾದ ಮುಕುಲ್ ರೊಹಟ್ಗಿ ಮತ್ತು ಹರೀಶ್ ಸಾಳ್ವೆಯಂತಹವರು ಇಂಗ್ಲಿಷ್ ಭಾಷೆಯ ಮೇಲೆ ತಮಗೆ ಇರುವ ಹಿಡಿತದಿಂದ ದೇಶದ ಯಾವುದೇ ಉಚ್ಚ ನ್ಯಾಯಾಲಯದಲ್ಲೂ ನಿರ್ಭೀತವಾಗಿ ವಾದ ಮಂಡಿಸಬಹುದು. ಆದರೆ, ಕೇವಲ ತೆಲುಗು ಮಾತನಾಡಬಲ್ಲ ತೆಲಂಗಾಣದ ವಕೀಲನೊಬ್ಬ ಕೇವಲ ತೆಲುಗು ಭಾಷಿಕ ರಾಜ್ಯಗಳಿಗಷ್ಟೇ ಸೀಮಿತಗೊಳ್ಳುತ್ತಾನೆ. ಇದರರ್ಥ ಈ ಬೆಳವಣಿಗೆಯಿಂದ ಉಪನಗರ ಮತ್ತು ಗ್ರಾಮೀಣ ಭಾಗದ ವಕೀಲರ ಸಮಸ್ಯೆಗಳು ಹೆಚ್ಚಾಗುತ್ತವೆ. ನ್ಯಾಯಾಲಯಗಳಲ್ಲಿ ತಮಿಳನ್ನು ಬಳಸಬೇಕು ಎಂದು ಆಗ್ರಹಿಸಿ ಹಲವು ಬಾರಿ ಉಪವಾಸ ಸತ್ಯಾಗ್ರಹ ಆಚರಿಸಿರುವ ಚೆನ್ನೈ ಮೂಲದ ವಕೀಲ ಎಸ್. ರಾಜು ಹೇಳುವಂತೆ, ಶಿಕ್ಷಣ ಮತ್ತು ಆಮೂಲಕ ಇಂಗ್ಲಿಷ್ ಜ್ಞಾನ ಪಡೆಯುವಲ್ಲಿ ವರ್ಗ ಮತ್ತು ಜಾತಿ ಬಹುಮುಖ್ಯ ಪಾತ್ರ ನಿಭಾಯಿಸುತ್ತದೆ. ನನ್ನ ಪ್ರಕಾರ, ಇಂಗ್ಲಿಷ್ ಮಾತನಾಡಲು ತಿಳಿಯದ ವಕೀಲರು ಹೆಚ್ಚು ಹಣ ಮಾಡಲು ತಿಳಿಯದ ದಿನಗೂಲಿ ಕಾರ್ಮಿಕರಿಗೆ ಸಮ ಎಂದು ರಾಜು ಹೇಳುತ್ತಾರೆ. ಇಂಗ್ಲಿಷ್ ಮಾತನಾಡಬಲ್ಲ ವಕೀಲರನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಬೇಕಾದರೆ ಯಾವುದೇ ನ್ಯಾಯಾಲಯಕ್ಕೆ ತೆರಳಿ ನೀವೇ ನೋಡಿ ಎಂದು ಹೇಳುತ್ತಾರೆ ರಾಜು.

ಕೃಪೆ: scroll.in

Writer - ಶ್ರುತಿಸಾಗರ್ ಯಮುನನ್

contributor

Editor - ಶ್ರುತಿಸಾಗರ್ ಯಮುನನ್

contributor

Similar News