​ರಾಮಾಯಣ ಪಠಣ, ರಮಝಾನ್ ಉಪವಾಸ ಮಾಡುವ ಕ್ರೈಸ್ತಪಾದ್ರಿ!

Update: 2019-07-21 04:18 GMT

ತ್ರಿಶ್ಶೂರ್, ಜು.21: ಇಲ್ಲಿಗೆ ಸಮೀಪದ ಚೆರುತುರುತಿ ಎಂಬಲ್ಲಿರುವ ಜ್ಯೋತಿ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ ಮುಖ್ಯಸ್ಥ (ಕಾರ್ಯದರ್ಶಿ ಹಾಗೂ ಸಹಾಯಕ ವ್ಯವಸ್ಥಾಪಕ) ಫಾದರ್ ರಾಯ್ ಜೋಸೆಫ್ ವಡಕ್ಕನ್, ಕರ್ಕಿಡಾಕಂ ತಿಂಗಳ ಪ್ರತಿ ದಿನವೂ ರಾಮಯಣ ಓದುತ್ತಾರೆ. ಈ ವರ್ಷ ಮಾತ್ರವಲ್ಲ; ಪ್ರತಿ ವರ್ಷ ರಾಮಾಯಣ ಓದುತ್ತಾ ಬಂದಿದ್ದಾರೆ. ಭಾರತೀಯ ಸಿದ್ಧಾಂತ, ಈ ಕೆಥೋಲಿಕ್ ಧರ್ಮಗುರುವನ್ನು ವೇದ ಹಾಗೂ ಪುರಾಣಗಳತ್ತ ಆಕರ್ಷಿಸಿದೆ.

ಅವರದ್ದೇ ಮಾತಿನಲ್ಲಿ ಹೇಳುವುದಾದರೆ, "ವೇದಗಳು ಜ್ಞಾನ ಖಜಾನೆ. ಭಗವದ್ಗೀತೆ, ರಾಮಾಯಣ ಮತ್ತು ಇತರ ಕೃತಿಗಳನ್ನು ಹಲವು ವರ್ಷಗಳಿಂದ ಓದುತ್ತಿದ್ದೇನೆ. ನನ್ನ ಬೋಧನೆಗಳಲ್ಲಿ ಕೂಡಾ ಈ ಜ್ಞಾನ ಬಳಸಿಕೊಳ್ಳುತ್ತೇನೆ. ಅಂಥ ಜ್ಞಾನ ಪಡೆಯಲು ಹಿಂಜರಿಕೆ ಏಕೆ?" ಎಂದು ಪ್ರಶ್ನಿಸುತ್ತಾರೆ. ವಡಕ್ಕನ್, ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

ಕೆಥೋಲಿಕ್ ಸಮುದಾಯ ಇದನ್ನು ಸ್ವೀಕರಿಸುತ್ತದೆಯೇ ಎಂದು ಕೇಳಿದಾಗ, "ಕೆಥೋಲಿಕ್ ಎಂಬ ಪದದ ಅರ್ಥವೇ ಸಾರ್ವತ್ರಿಕ ಎನ್ನುವುದು" ಎಂದು ವಿವರಿಸಿದರು. ಜನ ಎಲ್ಲ ಧರ್ಮಗಳ ಬಗ್ಗೆ ಮುಕ್ತ ಮನಸ್ಸು ಹೊಂದಿಲ್ಲ. ಆದರೆ ವಾಸ್ತವವಾಗಿ ಧಾರ್ಮಿಕ ಗ್ರಂಥಗಳು ಪ್ರೀತಿ, ದಯೆ, ಶಾಂತಿಯನ್ನು ಬೋಧಿಸುತ್ತವೆ" ಎನ್ನುವುದು ಅವರ ಅಭಿಪ್ರಾಯ. ರಾಮಾಯಣ ಜನರನ್ನು ದುಷ್ಟಶಕ್ತಿಗಳ ವಿರುದ್ಧದ ಹೋರಾಟಕ್ಕೆ ಅಣಿಗೊಳಿಸುತ್ತದೆ ಎಂದು ಹೇಳುತ್ತಾರೆ.

ಆಸಕ್ತಿಯ ವಿಚಾರವೆಂದರೆ, ಫಾದರ್ ವಡಕ್ಕನ್, ರಮಝಾನ್ ತಿಂಗಳಲ್ಲಿ ಉಪವಾಸಕ್ಕಾಗಿ ಮುಸ್ಲಿಮರ ಜತೆ ಸೇರುತ್ತಾರೆ, ಧಾರ್ಮಿಕ ಸಾಮರಸ್ಯದ ಸಲುವಾಗಿ ಹೀಗೆ ಮಾಡುತ್ತೇನೆ ಎನ್ನುವುದು ಅವರ ಸಮರ್ಥನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News