ಕುತೂಹಲ ಕೆರಳಿಸಿರುವ ಕರ್ನಾಟಕದ ರಾಜಕೀಯ ಬೆಳವಣಿಗೆ

Update: 2019-07-21 13:26 GMT

ಬೆಂಗಳೂರು, ಜು. 21: ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿಯುವ ಆತಂಕದಲ್ಲಿರುವ ಮೈತ್ರಿ ಸರಕಾರದ ಭವಿಷ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಿಎಂ ಕುಮಾರಸ್ವಾಮಿ ನಾಳೆ(ಜು.22)ಯಾಚಿಸಲಿರುವ ‘ವಿಶ್ವಾಸಮತ’ ಗೆಲ್ಲಲಿದ್ದಾರೆಯೋ, ಸೋಲಲಿದ್ದಾರೆಯೋ ಎಂಬ ಕುತೂಹಲ ಸೃಷ್ಟಿಸಿದೆ.

ಅತೃಪ್ತ ಶಾಸಕರ ಮನವೋಲಿಕೆಗೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಅಂತಿಮ ಪ್ರಯತ್ನ ಮುಂದುವರಿಸಿದ್ದಾರೆ. ಆದರೆ, ‘ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೆ ಇಲ್ಲ, ರಾಕ್ಷಸ ರಾಜಕಾರಣದಲ್ಲಿ ತೊಡಗಿರುವ ಮೈತ್ರಿ ಸರಕಾರ ಪತನವಾಗಲೇಬೇಕು’ ಎಂದು ಮುಂಬೈನಲ್ಲಿರುವ ಅತೃಪ್ತ ಶಾಸಕರು ತಮ್ಮ ಬಿಗಿಪಟ್ಟು ಸಡಿಲಿಸುತ್ತಿಲ್ಲ.

ಹೀಗಾಗಿ ಮೈತ್ರಿ ಸರಕಾರ ಉಳಿಸಿಕೊಳ್ಳಲು ಜೆಡಿಎಸ್ ವರಿಷ್ಠ ದೇವೇಗೌಡ ರಂಗ ಪ್ರವೇಶಿಸಿದ್ದು, ಶಾಸಕ ರಾಮಲಿಂಗಾರೆಡ್ಡಿ ಮೂಲಕ ಅತೃಪ್ತರ ಮನವೊಲಿಕೆ ರಣತಂತ್ರ ನಡೆದಿದೆ. ಈ ಮಧ್ಯೆ ಸುಪ್ರೀಂ ಕೋರ್ಟ್‌ನಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಪಕ್ಷದ ಅರ್ಜಿ ನಾಳೆಯೆ ವಿಚಾರಣೆಗೆ ಬರಲಿದೆ.

ರಾಜ್ಯಪಾಲರು, ಸಿಎಂಗೆ ಎರಡೂ ಪತ್ರ ಬರೆದು ವಿಶ್ವಾಸಮತ ಸಾಬೀತಿಗೆ ನಿರ್ದೇಶನ ನೀಡಿದ್ದರೂ ಅದು ಪಾಲನೆ ಮಾಡಿಲ್ಲ. ಹೀಗಾಗಿ ರಾಜ್ಯಪಾಲ ಕ್ರಮಕ್ಕೆ ಮುಂದಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಏತನ್ಮಧ್ಯೆ ಸರಕಾರಕ್ಕೆ ಬೆಂಬಲ ನೀಡಿದ್ದ ಬಿಎಸ್ಪಿ ಶಾಸಕ ಮಹೇಶ್ ವಿಶ್ವಾಸಮತದಿಂದ ದೂರ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಅತೃಪ್ತ ಶಾಸಕರ ಮನವೊಲಿಕೆ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಹೀಗಾಗಿ ಕ್ಷಣಕ್ಷಣಕ್ಕೂ ಮೈತ್ರಿ ಸರಕಾರದ ಸಂಖ್ಯಾಬಲ ಕುಸಿಯುತ್ತಿದೆ. ವಿಶ್ವಾಸಮತ ನಿರ್ಣಯ ಮೇಲಿನ ಚರ್ಚೆ ನಾಳೆಯೆ ಪೂರ್ಣಗೊಳ್ಳಲಿದೆ.

ಅತೃಪ್ತ ಶಾಸಕರ ಆಗಮನದ ನಿರೀಕ್ಷೆ ಮತ್ತು ನಾಳೆ ಬರಲಿರುವ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಭವಿಷ್ಯ ನಿಂತಿದೆ. ಸರಕಾರ ವಿಶ್ವಾಸಮತ ಯಾಚನೆಯಲ್ಲಿ ಗೆಲ್ಲಲಿದೆ ಎಂದು ಮೈತ್ರಿ ಪಕ್ಷಗಳ ಮುಖಂಡರು ಭರವಸೆಯಲ್ಲಿದ್ದಾರೆ.

ನಾಳೆ ಬೆಳಗ್ಗೆ 11ಗಂಟೆಗೆ ವಿಧಾನ ಮಂಡಲ ಅಧಿವೇಶನ ಆರಂಭಗೊಳ್ಳಲಿದ್ದು, ‘ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸ ವ್ಯಕ್ತಪಡಿಸುವ’ ಪ್ರಸ್ತಾವ ಮೇಲೆ ಮುಂದುವರಿದ ಚರ್ಚೆ, ಸರಕಾರದ ಉತ್ತರ ಹಾಗೂ ಸಂಜೆ ವೇಳೆ ಮತಕ್ಕೆ ಹಾಕುವ ಸಾಧ್ಯತೆಗಳಿವೆ. ಸರಕಾರದ ನೇತೃತ್ವ ವಹಿಸಿರುವ ಸಿಎಂ ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಮುಖಂಡರು ಸರಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಈ ಮಧ್ಯೆ ವಿಪಕ್ಷ ಬಿಜೆಪಿ ಅಕ್ಷರಶಃ ಮೌನಕ್ಕೆ ಶರಣಾಗಿದ್ದು, ಸರಕಾರ ಉರುಳಿಸಲು ತರೆಮರೆಯಲ್ಲೆ ಹರಸಾಹಸ ನಡೆಸಿದೆ.

ಹೊಟೇಲ್, ರೆಸಾರ್ಟ್‌ಗಳಲ್ಲಿ ಬೀಡುಬಿಟ್ಟಿರುವ ಆಡಳಿತಾರೂಢ ಮೈತ್ರಿ ಪಕ್ಷಗಳ ಹಾಗೂ ವಿಪಕ್ಷ ಬಿಜೆಪಿ ಶಾಸಕರು ರವಿವಾರ ರಜೆಯ ಮಸ್ತಿ ಮುಗಿಸಿದ್ದಾರೆ. ಈ ಮಧ್ಯೆ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಸದನಕ್ಕೆ ತಮ್ಮ ಶಾಸಕರ ಕಡ್ಡಾಯ ಹಾಜರಿಗೆ ‘ವಿಪ್’ ಜಾರಿಗೊಳಿಸಲಾಗಿದೆ.

‘ವಿಶ್ವಾಸಮತ ಯಾಚನೆ ಅಂತಿಮ ಘಟ್ಟದಲ್ಲಿದ್ದು, ನಾಳೆ ಎಲ್ಲದಕ್ಕೂ ಉತ್ತರ ಸಿಗಲಿದೆ. ರಾಜೀನಾಮೆ ನೀಡಿರುವ 15 ಅತೃಪ್ತರನ್ನು ಸದನಕ್ಕೆ ಬರುವಂತೆ ಒತ್ತಾಯಿಸುವಂತಿಲ್ಲ ಎಂದು ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ. ಅವರಿಗೆ ‘ವಿಪ್’ ಅನ್ವಯ ಆಗುವುದಿಲ್ಲ’ ಎಂದು ವಿಪಕ್ಷ ನಾಯಕ ಬಿಎಸ್‌ವೈ ಹೇಳಿದ್ದು, ಸರಕಾರ ರಚಿಸುವ ವಿಶ್ವಾಸದಲ್ಲಿದ್ದಾರೆ.

ನಿರೀಕ್ಷಿತ ಸಂಖ್ಯಾಬಲ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಸದನದಲ್ಲಿ ವಿದಾಯದ ಭಾಷಣ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಮೈತ್ರಿ ಸರಕಾರ ಉಳಿಯಲಿದೆ ಎಂದು ಕಾಂಗ್ರೆಸ್-ಜೆಡಿಎಸ್ ಮುಖಂಡರು ಹೇಳುತ್ತಿದ್ದಾರೆ. ಆದರೆ, ಎಲ್ಲ ಪ್ರಶ್ನೆಗಳಿಗೆ ನಾಳಿನ ಅಧಿವೇಶನ ಕಲಾಪದಲ್ಲೆ ಉತ್ತರ ಸಿಗಲಿದೆ ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ.

‘ಮೈತ್ರಿ ಸರಕಾರದ ಶಾಸಕರು ಹಾಗೂ ಸಚಿವರು ವಿಧಾನಸಭೆಯಲ್ಲಿ ಸುಮ್ಮನೆ ಕಾಲ ಕಳೆಯದೆ ಬೇಗನೆ ವಿಶ್ವಾಸಮತ ಯಾಚಿಸಬೇಕು. ಚಂದ್ರಗುಪ್ತ ಮೌರ್ಯನ ಕಾಲದಿಂದ ಈಗಿನವರೆಗೆ ಮಾತನಾಡುತ್ತಾ ಕೂರುವ ಅಗತ್ಯವಿಲ್ಲ. ಶುಕ್ರವಾರವೆ ಸಾಕಷ್ಟು ಮಾತುಕತೆಗಳು ನಡೆದಿವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರವೇ ವಿಶ್ವಾಸಮತ ಯಾಚಿಸಲಿ’

-ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News