ರಾಕ್ಷಸ ರಾಜಕಾರಣ ಕೊನೆಗೊಳ್ಳಲು ಮೈತ್ರಿ ಸರಕಾರ ಪತನವಾಗಬೇಕು: ಎಚ್.ವಿಶ್ವನಾಥ್

Update: 2019-07-21 12:22 GMT

ಬೆಂಗಳೂರು, ಜು. 21: ಕರ್ನಾಟಕದಲ್ಲಿರುವ ರಾಕ್ಷಸ ರಾಜಕಾರಣ ಕೊನೆಯಾಗಿಸಲು ಮೈತ್ರಿ ಸರಕಾರ ಹೋಗಬೇಕಿದೆ. ಜೆಡಿಎಸ್ ಆಫರ್ ನೀಡಿದರೂ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ನಲ್ಲಿ ಯಾರೂ ಮುಂದಾಗುತ್ತಿಲ್ಲ ಎಂದು ಬಂಡಾಯ ಶಾಸಕ ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ರವಿವಾರ ಮುಂಬೈನಿಂದ ವಿಡಿಯೋ ಮೂಲಕ ಸಂದೇಶ ರವಾನಿಸಿರುವ ಅವರು, ಕೊನೆ ಗಳಿಗೆಯಲ್ಲಿ ಸರಕಾರ ಉಳಿಸಿಕೊಳ್ಳಲು ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ನವರು ಸಿಎಂ ಆಗ್ತಾರೆ ಎಂದು ಹೇಳುತ್ತಿದ್ದಾರೆ. ಸತ್ತ ಹೆಣವನ್ನು ಬದುಕಿಸಲು ಋಷಿಗಳು ಯಾರು ನಮ್ಮ ಬಳಿ ಇಲ್ಲ. ಸಾಯುತ್ತಿರುವ ಸರಕಾರವನ್ನು ಬದುಕಿಸಲು ಕಮಂಡಲದಿಂದ ನೀರು ತೆಗೆದು ಚುಮುಕಿಸಲು ಋಷಿಗಳು ಯಾರು ಇಲ್ಲ ಎಂಬುದನ್ನು ಎರಡೂ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಆಫರ್ ನೀಡುವ ಸಂಬಂಧ ಹೈಕಮಾಂಡ್ ಮಟ್ಟದಲ್ಲಿಯೂ ಚರ್ಚೆಗಳು ನಡೆದರೂ ಏನು ಮಾಡಲು ಸಾಧ್ಯವಿಲ್ಲ. ಅಧರ್ಮದಲ್ಲಿ ಹೋಗುತ್ತಿರುವ ಮೈತ್ರಿ ಸರಕಾರ ಕೊನೆಯಾಗಬೇಕಿದೆ. ಸಿದ್ದರಾಮಯ್ಯನವರು ಸಿಎಂ ಆದರೂ ಯಾವ ಶಾಸಕರು ತಮ್ಮ ರಾಜೀನಾಮೆಯನ್ನು ಹಿಂಪಡೆಯಲ್ಲ. ಎಲ್ಲರ ನಿರ್ಧಾರ ಅಚಲವಾಗಿದ್ದು, ಯಾರೂ ಕೂಡ ಅಧಿಕಾರಕ್ಕಾಗಿ ಅಥವಾ ಸ್ವಹಿತಾಸಕ್ತಿಗಾಗಿ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೈತ್ರಿ ಧರ್ಮ ಕರ್ನಾಟಕ ರಾಜಕಾರಣದಲ್ಲಿ ಮುಗಿದು ಹೋಗಿದೆ. ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷದ ನಾಯಕರನ್ನು ಹೀನಾಯವಾಗಿ ಸೋಲಿಸಲಾಗಿದೆ. ಸೋಲಿನ ಬಳಿಕ ಎರಡೂ ಪಕ್ಷಗಳ ಅಭ್ಯರ್ಥಿಗಳ ಸೋಲಿಗೆ ಕಾರಣವೇನು ಎಂಬುದರ ಬಗ್ಗೆಯೂ ಚರ್ಚೆ ಆಗಲಿಲ್ಲ. ಇದೀಗ ಅಧಿಕಾರಕ್ಕಾಗಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತೇವೆ ಎನ್ನುವುದು ಮೂರ್ಖತನ ಎಂದು ಜರಿದಿದ್ದಾರೆ.

ರೆಸಾರ್ಟಿನಲ್ಲಿರುವ ಶಾಸಕರನ್ನು ಫ್ರೀಯಾಗಿ ಬಿಟ್ಟರೆ ಹಲವರು ನಮ್ಮನ್ನು ಸೇರಿಕೊಳ್ಳಲಿದ್ದಾರೆ. ಹಾಗಾಗಿ ಎಲ್ಲರನ್ನು ರೆಸಾರ್ಟಿನ ಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಇಲ್ಲಿ ಯಾರು ಮಂತ್ರಿಯಾಗುವ ಉದ್ದೇಶದಿಂದ ರಾಜೀನಾಮೆ ನೀಡಿಲ್ಲ. ಡಿ.ಕೆ.ಶಿವಕುಮಾರ್ ಓರ್ವ ಶೋಮ್ಯಾನ್. ಪ್ರಚಾರಕ್ಕಾಗಿ ಈ ರೀತಿಯ ಮಾತುಗಳನ್ನಾಡುತ್ತಾರೆ. ಮುಂಬೈಗೆ ಬಂದರೂ ಯಾರನ್ನು ಭೇಟಿಯಾಗಿಲ್ಲ. ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡುವುದು, ಫೋಟೋ ತೆಗೆಸಿಕೊಳ್ಳುವುದು ಶಿವಕುಮಾರ್ ಅವರ ಕೆಲಸ ಎಂದು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News