ಬಿಜೆಪಿ ದೇಶದಲ್ಲಿ ಅನೈತಿಕ ರಾಜಕಾರಣಕ್ಕೆ ಹೊಸ ಭಾಷ್ಯ ಬರೆದಿದೆ: ಸಿಎಂ ಕುಮಾರಸ್ವಾಮಿ

Update: 2019-07-21 14:16 GMT

ಬೆಂಗಳೂರು, ಜು.21: ಬಿಜೆಪಿಯು ಕರ್ನಾಟಕದ ರಾಜಕಾರಣವನ್ನು ಪಾತಾಳಕ್ಕೆ ಕೊಂಡೊಯ್ದಿರುವುದಲ್ಲದೆ ದೇಶದಲ್ಲಿ ಅನೈತಿಕ ರಾಜಕಾರಣಕ್ಕೆ ಹೊಸ ಭಾಷ್ಯ ಬರೆದಿರುವುದು ಅತ್ಯಂತ ನೋವಿನ ಹಾಗೂ ಜಿಗುಪ್ಸೆ ತರುವ ಸಂಗತಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಆಡಳಿತಾರೂಢ ಮಿತ್ರ ಪಕ್ಷಗಳ ಶಾಸಕರನ್ನು ಬಲವಂತವಾಗಿ ಕರೆದೊಯ್ದು ಬಿಜೆಪಿಯು ಪ್ರಜಾಪ್ರಭುತ್ವದ ಅಣಕವಾಡಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಶೇಷ ವಿಮಾನಗಳಲ್ಲಿ ನಮ್ಮ ಶಾಸಕರೊಂದಿಗೆ ತೆರಳಿರುವುದನ್ನು ಮಾಧ್ಯಮಗಳಿಂದ ಸ್ಪಷ್ಟವಾಗಿದೆ. ಅನೈತಿಕ ಹಾಗೂ ಕಾನೂನು ಬಾಹಿರ ವಿಧಾನಗಳಿಂದ ಅಧಿಕಾರಕ್ಕೆ ಬರಲು ಹಾತೊರೆಯುತ್ತಿರುವ ಬಿಜೆಪಿಯು, ಈ ಎಲ್ಲ ಬೆಳವಣಿಗೆಗಳ ನಡುವೆ, ನಾನು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದೆ. ವಿಶ್ವಾಸ ನಿಲುವಳಿಯನ್ನು ಮತಕ್ಕೆ ಹಾಕುವಂತೆ ರಾಜಭವನದ ಮೂಲಕ ಗಡುವುಗಳನ್ನೂ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಅಧಿಕಾರಕ್ಕೆ ಅಂಟಿಕೊಳ್ಳುವ ಉದ್ದೇಶ ಹೊಂದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಬಯಸುತ್ತೇನೆ. ವಿಶ್ವಾಸ ಮತ ಕುರಿತು ವಿಸ್ತೃತ ಚರ್ಚೆಗೆ ಸಮಯ ಕೋರಿರುವುದರ ಹಿಂದೆ ನನ್ನ ಉದ್ದೇಶವಿರುವುದು ಒಂದೇ- ಬಿಜೆಪಿಯು ನೈತಿಕತೆಯ ಕುರಿತು ಮಾತನಾಡುತ್ತಲೇ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೂಲತತ್ವ, ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿರುವುದು ಇಡೀ ದೇಶಕ್ಕೆ ಅರಿವಾಗಬೇಕು. ಈ ಸಂದರ್ಭದಲ್ಲಿ, ನಮ್ಮಿಂದ ದೂರ ಹೋಗಿರುವ ಶಾಸಕರು ಹಿಂದಿರುಗಿ, ಅಧಿವೇಶನದಲ್ಲಿ ಪಾಲ್ಗೊಂಡು, ಬಿಜೆಪಿ ಅವರನ್ನು ಹೇಗೆ ಬಲವಂತವಾಗಿ ಕರೆದೊಯ್ದಿದೆ ಎಂಬುದನ್ನು ಬಹಿರಂಗಪಡಿಸಬೇಕೆಂದು ಮನವಿ ಮಾಡುತ್ತೇನೆ. ಬಿಜೆಪಿಯು ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ಹೇಗೆ ಹಾಳುಗೆಡವಿದೆ ಎಂಬುದನ್ನು ಸದನದಲ್ಲಿ ವಿವರಿಸುವಂತೆ ಕೋರುತ್ತೇನೆ.

ಆ ಶಾಸಕರಿಗೆ ಇನ್ನೊಂದು ವಿಷಯ ತಿಳಿಸ ಬಯಸುತ್ತೇನೆ. ಯಾವುದೇ ಹಿಂಜರಿಕೆಯಿಲ್ಲದೆ ಬನ್ನಿ; ನಿಮ್ಮ ಸಮಸ್ಯೆಗಳೂ ಸೇರಿದಂತೆ ಎಲ್ಲ ವಿಷಯಗಳ ಕುರಿತು ಒಟ್ಟಾಗಿ ಕುಳಿತು ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ. ಯಾಕೆಂದರೆ, ರಾಜಕೀಯ ಪ್ರಭಾವದ ದುರ್ಬಳಕೆಯ ಮೂಲಕ ಪ್ರಜಾಪ್ರಭುತ್ವದ ಬುನಾದಿಯನ್ನೇ ಅಲುಗಾಡಿಸುತ್ತಿರುವ, ಜನತಂತ್ರದಡಿ ಆಯ್ಕೆಯಾದ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳಿಂದ ಸರ್ಕಾರವನ್ನು ಪಾರು ಮಾಡಬೇಕಾಗಿದೆ.

ಅಧಿಕಾರಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಾಂವಿಧಾನಿಕವಾಗಿ ರಚಿಸಲಾದ ಸಂಸ್ಥೆಗಳನ್ನೇ ನಾಶಪಡಿಸಲು ಮುಂದಾಗಿರುವ ದುಷ್ಟ ಶಕ್ತಿಗಳಿಂದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ಉಳಿಸಲು ಜೊತೆಯಾಗಿ ಹೋರಾಟ ನಡೆಸೋಣ ಎಂದು ಕುಮಾರಸ್ವಾಮಿ ಪತ್ರಿಕಾ ಪ್ರಕಟನೆಯಲ್ಲಿ ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News