ಕುಮಾರ ವ್ಯಾಸನ ‘ವಿದುರ ನೀತಿ’ ಸಂಹಿತೆ

Update: 2019-07-21 18:39 GMT

ಕುಮಾರ ವ್ಯಾಸ ಬರೆದ ಮಹಾಭಾರತ ಕಾವ್ಯದ ಸೊಗಡೇ ಬೇರೆ. ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿಯ ಮೂಲಕ ಮಹಾಭಾರತ ಕನ್ನಡದಲ್ಲಿ ಹೊಸದಾಗಿ ಹುಟ್ಟಿತು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಕುಮಾರ ವ್ಯಾಸನನ್ನು ಹಲವು ವಿದ್ವಾಂಸರು ಆಧುನಿಕ ಕನ್ನಡಕ್ಕೆ ಪರಿಚಯಿಸಿದ್ದಾರೆ. ಇದೀಗ ಕನ್ನಡ ಸಾಹಿತ್ಯ ಪರಿಷತ್ ಕುಮಾರ ವ್ಯಾಸ ಭಾರತದಲ್ಲಿ ಬರುವ ವಿದುರ ಧೃತರಾಷ್ಟ್ರನಿಗೆ ಹೇಳುವ ಮಾತುಗಳನ್ನಷ್ಟೇ ಆಯ್ದು ‘ವಿದುರ ನೀತಿ’ ಎಂಬ ಹೆಸರಲ್ಲಿ ಪ್ರಕಟಿಸಿದೆ. ವಿದ್ವಾಂಸರಾದ ಎನ್. ರಂಗನಾಥ ಶರ್ಮ ಇದನ್ನು ಕನ್ನಡಕ್ಕಿಳಿಸಿದ್ದಾರೆ.

  ಮಹಾಭಾರತದಲ್ಲಿ ವಿದುರನದು ವಿಶಿಷ್ಟ ಸ್ವಂತಿಕೆಯಿರುವ ಸಾತ್ವಿಕ ಮತ್ತು ಅಷ್ಟೇ ನಿಷ್ಠುರತೆಯನ್ನು ಹೊಂದಿರುವ ಪಾತ್ರ. ಕೌರವರ ಜೊತೆಗಿದ್ದೂ, ಪಾಂಡವರಿಗೆ ಅನ್ಯಾಯವಾದಾಗ ಅದನ್ನು ಎತ್ತಿ ಹೇಳಲು ಆತ ಹಿಂಜರಿಯಲಿಲ್ಲ. ಆತನ ಪಾತ್ರವನ್ನು ಹಲವು ವಿದ್ವಾಂಸರು ವಿಮರ್ಶಕರು ವಿಶ್ಲೇಷಿಸಿದ್ದಾರೆ. ಇರಾವತಿ ಕರ್ವೆಯ ಪ್ರಕಾರ ವಿದುರ ಪಾಂಡವರ ಪರವಾಗಿರಲು ಇನ್ನಿತರ ಆನುವಂಶಿಕ ಕಾರಣಗಳನ್ನು ಒತ್ತಿ ಹೇಳುತ್ತಾರೆ. ಕುಂತಿಗೂ ವಿದುರನಿಗೂ ಇರುವ ಸಂಬಂಧ ಮತ್ತು ಧರ್ಮರಾಯನಿಗೂ ವಿದುರನಿಗೂ ಇರುವ ತಂದೆ-ಮಗನ ಸಂಬಂಧಗಳನ್ನು ಕುತೂಹಲಕರವಾಗಿ ನಿರೂಪಿಸುತ್ತಾರೆ. ಈ ಪುಟ್ಟ ಕೃತಿಯಲ್ಲಿ ವಿದುರ-ಧೃತರಾಷ್ಟ್ರನ ನಡುವಿನ ಸಂಭಾಷಣೆಯ ನೆಪದಲ್ಲಿ ಕುಮಾರವ್ಯಾಸ ಸಮಾಜಕ್ಕೆ ಕೆಲವು ನೀತಿ ಸಂಹಿತೆಗಳನ್ನು ಬೋಧಿಸುತ್ತಾನೆ. ಇಲ್ಲಿ ಕವಿ ಕುಮಾರವ್ಯಾಸನಿಗಿಂತ ತತ್ವಜ್ಞಾನಿ ಕುಮಾರವ್ಯಾಸನನ್ನು ನಾವು ಗುರುತಿಸಬಹುದು. ಮಹಾಭಾರತದಲ್ಲಿ ಯುದ್ಧ ಇನ್ನೇನು ಆರಂಭವಾಗಬೇಕು ಎನ್ನುವಾಗ ಶಸ್ತ್ರಾಸ್ತ್ರ ಕೆಳಗಿಟ್ಟ ಅರ್ಜುನನಿಗೆ ಕೃಷ್ಣ ಬೋಧಿಸುವ ಹಿತೋಪದೇಶ ಮುಂದೆ ಭಗವದ್ಗೀತೆಯಾಯಿತು. ಇರಾವತಿ ಕರ್ವೆ ಪ್ರಕಾರ, ಭಗವದ್ಗೀತೆ ಮಹಾಭಾರತದ ಪೂರ್ಣ ಭಾಗವಲ್ಲ, ಅದನ್ನು ಆ ಬಳಿಕ ಸೇರ್ಪಡೆಗೊಳಿಸಲಾಗಿದೆ ಎಂದು ವಿಶ್ಲೇಷಿಸುತ್ತಾರೆ. ವಿದುರನ ನೀತಿ ಸಂಹಿತೆಯೂ ಮಹಾಭಾರತದ ಭಾಗವಾಗಿರಬೇಕಾಗಿಲ್ಲ. ಅಂದಿನ ಸಮಾಜದ ಕಟ್ಟುಕಟ್ಟಳೆಗಳನ್ನು ವಿದುರನ ಪಾತ್ರದ ಮೂಲಕ ತಿಳಿಸುವ ಪ್ರಯತ್ನವಾಗಿರುವ ಸಾಧ್ಯತೆಗಳೂ ಇವೆ. ಇಲ್ಲಿ ಮುಖ್ಯವಾಗಿ ಒಬ್ಬ ಅರಸ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ವಿದುರನು ಧೃತರಾಷ್ಟ್ರನಿಗೆ ವಿವರಿಸುತ್ತಾನೆ.

  ವಿದುರ ಒಂದು ಪುರಾಣ ಪಾತ್ರ. ಹಾಗೆಯೇ ವಿದುರ ನೀತಿ ಎಷ್ಟರ ಮಟ್ಟಿಗೆ ವರ್ತಮಾನಕ್ಕೆ ಅನ್ವಯವಾಗುತ್ತದೆ ಎನ್ನುವುದು ಚರ್ಚೆಗೆ ಅರ್ಹವಾಗಿರುವ ವಿಷಯ. ಮಹಿಳೆಯರ ಕುರಿತಂತೆ ಶೂದ್ರರ ಕುರಿತಂತೆ ವಿದುರನ ಕೆಲವು ನಿಲುವುಗಳು ಒಪ್ಪುವಂತಿಲ್ಲ. ಹಾಗೆಯೇ ಹಲವೆಡೆ ಬ್ರಾಹ್ಮಣರ ಹಿರಿಮೆಯನ್ನೂ ವಿದುರ ಸಾರುತ್ತಾನೆ. ಆತನ ಕೆಲವು ನಿಲುವುಗಳು ಮನು ಸಂಹಿತೆಯಿಂದ ಪ್ರಭಾವಿತಗೊಂಡಿವೆ. ಕಾವ್ಯವಾಗಿ ವಿದುರ ನೀತಿ ಯಾವ ರೀತಿಯಲ್ಲೂ ನಮ್ಮನ್ನು ಸೆಳೆಯುವುದಿಲ್ಲ. ವಿದುರನ ಮೂಲಕ ಕುಮಾರವ್ಯಾಸನ ಸಾಮಾಜಿಕ, ರಾಜಕೀಯ ನಿಲುವುಗಳನ್ನು ನಾವು ಈ ಕೃತಿಯ ಮೂಲಕ ಅರ್ಥೈಸಿಕೊಳ್ಳಬಹುದು. ಸುಮಾರು 137 ಚರಣಗಳಿರುವ ಈ ವಿದುರನ ನೀತಿಗಳಲ್ಲಿ ಕಾಳುಗಳ ಜೊತೆಗೆ ಜೊಳ್ಳು ಸೇರಿಕೊಂಡಿವೆ ಎನ್ನುವ ವಿಮರ್ಶಾ ದೃಷ್ಟಿಯೊಂದನ್ನು ಇಟ್ಟುಕೊಂಡು ಕುತೂಹಲಕ್ಕಾಗಿ ಕೃತಿಯನ್ನು ಓದಬಹುದಾಗಿದೆ.

63 ಪುಟಗಳ ಈ ಕೃತಿಯ ಮುಖಬೆಲೆ 40 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News