ಭಾರೀ ಪ್ರವಾಹ: ಎನ್‍ಡಿಆರ್ ಎಫ್ ರಕ್ಷಣಾ ಬೋಟಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

Update: 2019-07-22 08:06 GMT
ಸಾಂದರ್ಭಿಕ ಚಿತ್ರ

ಪಾಟ್ನಾ, ಜು.22: ಬಿಹಾರದ ಪ್ರವಾಹಪೀಡಿತ ಮೋತಿಹಾರಿ ಜಿಲ್ಲೆಯ ಗೋಬ್ರಿ ಗ್ರಾಮದ ಗರ್ಭಿಣಿಯೊಬ್ಬರು ಎನ್‍ ಡಿಆರ್‍ಎಫ್  ರಕ್ಷಣಾ ಬೋಟಿನಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಜುಲೈ 20ರಂದು ನಡೆದಿದೆ. ತಾಯಿ ಮಗು ಇದೀಗ ಆರೋಗ್ಯದಿಂದಿದ್ದಾರೆ.

ಸಬೀನಾ ಖಾತೂನ್ (41) ಎಂಬ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಾಗ ಆಕೆಯನ್ನು  ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಕುಟುಂಬ ನಿರ್ಧರಿಸಿತ್ತು. ಅದೇ ಸಮಯ ಅಲ್ಲೇ ಹತ್ತಿರದಲ್ಲಿ ಪ್ರವಾಹ ಪೀಡಿತರ ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದ ಎಎಸ್‍ಐ ವಿಜಯ್ ಝಾ ನೇತೃತ್ವದ ಎನ್‍ಡಿಆರ್‍ಎಫ್ ಪಡೆ ಈ ವಿಚಾರ ತಿಳಿದು ಮಹಿಳೆಯ ಮನೆಗೆ ಧಾವಿಸಿ ಆಕೆಯನ್ನು ರಕ್ಷಣಾ ಬೋಟಿನಲ್ಲಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿತ್ತು.

ಬೋಟಿನಲ್ಲಿ ಎನ್‍ಡಿಆರ್‍ಎಫ್  ನರ್ಸಿಂಗ್ ಸಹಾಯಕ ರಾಣಾ ಪ್ರತಾಪ್ ಯಾದವ್ ಸಹಿತ ಆಶಾ ಕಾರ್ಯಕರ್ತೆಯರೂ ಇದ್ದರು. ಆದರೆ ದಾರಿ ಮಧ್ಯದಲ್ಲಿ ಸಬೀನಾ ಸ್ಥಿತಿ ವಿಷಮಿಸಿ ಆಕೆ ಬೋಟಿನಲ್ಲಿಯೇ ನರ್ಸಿಂಗ್ ಸಹಾಯಕ ಹಾಗೂ ಆಶಾ ಕಾರ್ಯಕರ್ತೆಯರ ಸಹಾಯದಿಂದ  ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಇಬ್ಬರನ್ನೂ ಬಝಾರಿಯಾ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News