ಮತ್ತೊಮ್ಮೆ ನಾನೇ ಸಿಎಂ: ಆದಿತ್ಯ ಠಾಕ್ರೆಗೆ ಫಡ್ನವೀಸ್ ತಿರುಗೇಟು

Update: 2019-07-22 08:23 GMT

ಮುಂಬೈ, ಜು.22: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವ ಕುರಿತಂತೆ ಆದಿತ್ಯ ಠಾಕ್ರೆ  ಹೇಳಿಕೆಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಾವು ಮತ್ತೆ ಈ ಹುದ್ದೆಯೇರಲು ವಾಪಸ್ ಬರುವುದಾಗಿ ತಿಳಿಸಿದರು.

“ನಾನು ಕೇವಲ ಬಿಜೆಪಿ ಮುಖ್ಯಮಂತ್ರಿಯಲ್ಲ, ನಾನು ಶಿವಸೇನೆಯ ಮುಖ್ಯಮಂತ್ರಿ ಕೂಡ ಹೌದು. ಇತರ ಮಿತ್ರ ಪಕ್ಷಗಳ ಸಿಎಂ ಕೂಡ ಆಗಿದ್ದೇನೆ'' ಎಂದು ಫಡ್ನವೀಸ್ ಹೇಳಿದ್ದಾರೆ.

“ಈ ಚುನಾವಣೆಯನ್ನು ಮೈತ್ರಿ ಆಧಾರದಲ್ಲಿಯೇ ಹೋರಾಡಲಾಗುವುದು, ಈ ನಿಟ್ಟಿನಲ್ಲಿ ಸಂಶಯ ಬೇಡ'' ಎಂದು ಗೋರೆಗಾಂವ್ ನ ನೆಸ್ಕೋ ಮೈದಾನದಲ್ಲಿ  ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ  ಫಡ್ನವೀಸ್ ಹೇಳಿದರು.

“ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷ ಸ್ಪರ್ಧಿಸಲಿದೆ ಎಂಬ ಬಗ್ಗೆ ಸದ್ಯದಲ್ಲಿಯೇ ನಿರ್ಧರಿಸುತ್ತೇವೆ. ಯಾರು ಸಿಎಂ ಆಗುತ್ತಾರೆಂಬ ಈ ಸಂಪೂರ್ಣ ಚರ್ಚೆ... ಈ ಬಗ್ಗೆ ಜನರೇ ನಿರ್ಧರಿಸುತ್ತಾರೆ,'' ಎಂದು ಫಡ್ನವೀಸ್ ಹೇಳಿದರು.

ಸಿಎಂ ಹುದ್ದೆ ಹಂಚಿಕೆ ಕುರಿತಂತೆ ವಿವಾದ ಹುಟ್ಟು ಹಾಕಿದ್ದಕ್ಕಾಗಿ ಮಾಧ್ಯಮವನ್ನು ದೂರಿದ ಅವರು, “ಮಾಧ್ಯಮಗಳು 24 ಗಂಟೆಗಳೂ ಸುದ್ದಿ ಬಿತ್ತರಿಸುವುದರಿಂದ ಅವುಗಳಿಗೆ ಮೇವಿನ ಅಗತ್ಯವಿದೆ'' ಎಂದರು. “ನಮ್ಮ ಮಿತ್ರ ಪಕ್ಷಗಳಲ್ಲಿ ಮಾಧ್ಯಮದ ಜತೆ ಮಾತನಾಡಲು ಆಸಕ್ತರಿರುವ ಜನರಿದ್ದಾರೆ'' ಎಂದು ಆದಿತ್ಯ ಠಾಕ್ರೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಫಡ್ನವೀಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News