ಕಿತ್ತು ಹೋದ ಕಿತ್ತೂರಿನ ಚರಿತ್ರೆಯ ಪುಟಗಳನ್ನು ಜೋಡಿಸುತ್ತಾ....

Update: 2019-07-22 18:31 GMT

ಭಾರತದ ಸ್ವಾತಂತ್ರ ಸಂಗ್ರಾಮದ ವಿಷಯವಾಗಿ ವೀರ ವನಿತೆಯರ ಬಗ್ಗೆ ಹೇಳುವಾಗ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತದೆ. ಆ ಜಿಲ್ಲೆಯ ಹಲವಾರು ವೀರ ವನಿತೆಯರು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಉತ್ತರದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಖಡ್ಗವನ್ನು ಎತ್ತುವುದಕ್ಕಿಂತ 33 ವರ್ಷ ಪೂರ್ವದಲ್ಲಿ ದಕ್ಷಿಣ ಭಾರತದ ಬೆಳಗಾವಿ ಜಿಲ್ಲೆಯ ಕಿತ್ತೂರಿನ ವೀರ ರಾಣಿ ಚೆನ್ನಮ್ಮ ನಾಗರಿಕ ಹಕ್ಕುಗಳ ಸಂರಕ್ಷಣೆಗಾಗಿ ಮತ್ತು ಸಂಸ್ಥಾನದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಯುದ್ಧ ಮಾಡಿದರು. ಕಿತ್ತೂರು ಚೆನ್ನಮ ಇತಿಹಾಸದ ಕುರಿತಂತೆ ಹಲವು ಬರಹಗಳು, ಕೃತಿಗಳು ಬಂದಿವೆ. ಇದೀಗ ಡಾ. ಮಲ್ಲಿಕಾರ್ಜುನ ಆಯ್ ಮಿಂಚ ಅವರು ‘ಬ್ರಿಟಿಷರ ಆಡಳಿತ ಮತ್ತು ರಾಣಿ ಕಿತ್ತೂರ ಚೆನ್ನಮ್ಮ’ ಕುರಿತ ಪುಸ್ತಕವೊಂದನ್ನು ಹೊರತಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಈ ಕೃತಿಯನ್ನು ಪ್ರಕಟಿಸಿದೆ.

ಪ್ರಕಟಿತ, ಅಪ್ರಕಟಿತ ಪುಸ್ತಕಗಳು, ಲೇಖನಗಳು, ದಿನಪತ್ರಿಕೆಗಳು ವಾರಪತ್ರಿಕೆಗಳು, ನಿಯತ ಕಾಲಿಕೆಗಳು, ಗೆಜೆಟಿಯೆರ್‌ಗಳು, ಪತ್ರ ಇತ್ಯಾದಿ ಮೂಲಗಳನ್ನು ಕೂಲಂಕಷವಾಗಿ ಅಭ್ಯಸಿಸಿ ಈ ಕೃತಿಯನ್ನು ಬರೆಯಲಾಗಿದೆ. ಮರಾಠಿ, ಕೊಂಕಣಿ ಮತ್ತು ಕನ್ನಡದ ಜೊತೆಗೆ ಬೆಸೆದುಕೊಂಡಿರುವ ಕಿತ್ತೂರು ಚೆನ್ನಮ್ಮನ ಬದುಕು ಮತ್ತು ಹೋರಾಟವನ್ನು ಆಯುವುದು ಸಣ್ಣ ಕೆಲಸವೇನೂ ಅಲ್ಲ. ಮೂರು ಭಾಷೆ ಮತ್ತು ಸಂಸ್ಕೃತಿಯ ಜೊತೆಗಿನ ಅಧ್ಯಯನ, ಒಡನಾಟ, ಸಾಮಿಪ್ಯವಿದ್ದರೆ ಮಾತ್ರ ಇದು ಸಾಧ್ಯ. ರಾಣಿ ಚನ್ನಮ್ಮಳ ಸಂಸ್ಥಾನದ ಅಧ್ಯಯನವನ್ನು ಪ್ರತ್ಯೇಕವಾಗಿ ಕೈಗೊಂಡು ಅದರ ವಿವರಗಳನ್ನು ಇತರ ವೀರರಾಣಿಯರೊಂದಿಗೆ ಹೋಲಿಸಿ, ಎಣಿಕೆ ಮಾಡಿ ಈ ಕೃತಿಯಲ್ಲಿ ವಿವರಗಳನ್ನು ದಾಖಲಿಸಲಾಗಿದೆ. ಮೊದಲ ಅಧ್ಯಾಯದಲ್ಲಿ ಕಿತ್ತೂರಿನ ವಿಸ್ತೃತವಾದ ಐತಿಹಾಸಿಕ ಹಿನ್ನೆಲೆಯನ್ನು ನೀಡಲಾಗಿದೆ. ಕಿತ್ತೂರು ಎನ್ನುವ ಊರಿನ ಭೌಗೋಳಿಕ ಹಿನ್ನೆಲೆ, ಆ ಹೆಸರಿನ ವಿಶೇಷತೆಗಳಿಂದ ಆರಂಭವಾಗುವ ಕಥನ, ನಿಧಾನಕ್ಕೆ ಕಿತ್ತೂರನ್ನು ಆಳಿದ ವಿವಿಧ ನಾಯಕರ ಬೇರುಗಳನ್ನು ತಡವುತ್ತಾ ಹೋಗುತ್ತದೆ. 1816ರ ವೇಳೆಗೆ ಕಿತ್ತೂರಿಂದ ಐದು ಮುಖ್ಯ ರಸ್ತೆಗಳು ನಿರ್ಮಾಣಗೊಂಡಿದ್ದವು. ಅದರಲ್ಲಿಯ ಎರಡು ರಸ್ತೆಗಳು ಉತ್ತರ ಪುಣೆಯ ದಿಕ್ಕಿನಲ್ಲಿರುವ ಒಂದು ಈಶಾನ್ಯ ದಿಕ್ಕಿನ ಕಡೆಗೆ ಸೋಲಾಪುರ ದಿಕ್ಕಿನಲ್ಲಿತ್ತು. ಒಂದು ಆಗ್ನೇಯ ದಿಕ್ಕಿನ ಧಾರವಾಡದ ಕಡೆಗೆ ಹರಡಿತ್ತು ಹಾಗೂ ಒಂದು ರಸ್ತೆ ಗೋವೆಯ ಕಡೆಗಿತ್ತು. ಅಂದು ಸಂಪರ್ಕ ವ್ಯವಸ್ಥೆ ಕೆಟ್ಟದಾಗಿದ್ದರೂ ಕಿತ್ತೂರ ಸಂಸ್ಥಾನದ ವ್ಯಾಪಾರ ಉದ್ದಿಮೆಗಳು ಪ್ರಗತಿಯಲ್ಲಿದ್ದವು. ಪಶ್ಚಿಮ ಘಟ್ಟದ ಪಟ್ಟಣಗಳೊಂದಿಗೆ ಜನರು ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟನ್ನು ಹೊಂದಿದ್ದು ಕಿತ್ತೂರು ಸಮೃದ್ಧಿಯ ಸಂಕೇತವಾಗಿತ್ತು ಎಂದು ಲೇಖಕರು ವಿವರಿಸುತ್ತಾರೆ.

ಕಿತ್ತೂರು ಚೆನ್ನಮ್ಮನ ಹೋರಾಟವನ್ನು ಕೇಂದ್ರವಾಗಿರಿಸಿಕೊಂಡ ಹಲವು ಬರಹಗಳು ಕಿತ್ತೂರಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಚರ್ಚಿಸಿದ್ದು ಕಡಿಮೆ. ಕಿತ್ತೂರಿನ ಮೇಲೆ ಬ್ರಿಟಿಷರ ಕಣ್ಣು ಬೀಳುವುದಕ್ಕೆ ಕಾರಣವಾದ ಅಂಶಗಳನ್ನು ಗುರುತಿಸುವಾಗ ಇದು ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಚೆನ್ನಮ್ಮನ ಆಡಳಿತ ಮತ್ತು ಆಕೆ ಬ್ರಿಟಿಷರನ್ನು ಮುಖಾಮುಖಿಯಾಗಿಸಲು ಕಾರಣವಾದ ಅಂಶಗಳನ್ನು ವಿಸ್ತೃತವಾಗಿ ಲೇಖಕರು ಕಟ್ಟಿಕೊಡುತ್ತಾರೆ. ಇದು ಕೇವಲ, ಬ್ರಿಟಿಷರು ಮತ್ತು ಚೆನ್ನಮ್ಮನ ಮುಖಾಮುಖಿ ಮಾತ್ರವಲ್ಲ, ಅಖಂಡ ಕರ್ನಾಟಕವನ್ನು ಗುರುತಿಸಲು ಕಾರಣವಾಗುವ ಹಲವು ಮಹತ್ವದ ವಿವರಗಳು ಇಲ್ಲಿ ದೊರಕುತ್ತವೆ. 110 ಪುಟಗಳ ಈ ಕೃತಿಯ ಮುಖಬೆಲೆ 50 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News