ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರ ಧರಣಿ

Update: 2019-07-22 18:51 GMT

ಮಂಡ್ಯ, ಜು.22: 39ನೇ ವರ್ಷದ ರೈತ ಹುತಾತ್ಮರ ನೆನಪಿನ ಅಂಗವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಸಂಘದ (ಮೂಲ ಸಂಘಟನೆ) ಕಾರ್ಯಕರ್ತರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು.

ವಿ.ನಾಲೆಯಲ್ಲಿ ಹತ್ತು ದಿನದ ಬದಲಾಗಿ ಕೊನೇ ಭಾಗದವರೆಗೆ ನೀರು ತಲುಪುವಂತೆ 25 ದಿನಗಳು ನೀರು ಹರಿಸಬೇಕು. ಜಿಲ್ಲೆಯಲ್ಲಿ 85 ಸಾವಿರ ಎಕರೆ ಪ್ರದೇಶದಲ್ಲಿ ಅರ್ಧದಷ್ಟು ಒಣಗಿ ಹೋಗಿದ್ದು, ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಕ್ಕರೆ ಕಾರ್ಖಾನೆಗಳು ಕಳೆದ ಸಾಲಿನಲ್ಲಿ ಅರೆದಿರುವ ಕಬ್ಬಿನ ಬಾಕಿ ಹಣವನ್ನು ಉಳಿಸಿಕೊಂಡಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಜಿಲ್ಲಾಡಳಿತ ಹಾಗೂ ಸರಕಾರ ಮಧ್ಯೆಪ್ರವೇಶಿಸಿ ಕೂಡಲೇ ಬಾಕಿ ಹಣ ಕೊಡಿಸಬೇಕು ಹಾಗೂ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆ ಕಾರ್ಯ ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದರು.

ಮೈಷುಗರ್ ಹಾಗೂ ಪಿಎಸ್‍ಎಸ್‍ಕೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಮೈಷುಗರ್‍ನ್ನು ಸರಕಾರಿ ಸ್ವಾಮ್ಯದಲ್ಲೇ ಹಾಗೂ ಪಿಎಸ್‍ಎಸ್‍ಕೆಯನ್ನು ಸಹಕಾರಿ ಕ್ಷೇತ್ರದಲ್ಲೇ ಉಳಿಸಿಕೊಳ್ಳಬೇಕು. ಟನ್ ಕಬ್ಬಿಗೆ 4 ಸಾವಿರ ರೂ. ನಿಗದಿಪಡಿಸಬೇಕು ಎಂದು ತಾಕೀತು ಮಾಡಿದರು.

ಡಾ.ಸ್ವಾಮಿನಾಥನ್ ವರದಿ ಜಾರಿಗೆ ತಂದು ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ರಾಜ್ಯ ಸರ್ಕಾರ ರೈತರಿಗೆ ಮಾರಕವಾಗಿರುವ ಭೂ ಸ್ವಾಧೀನ ಕಾಯ್ದೆ ಜಾರಿ ಪ್ರಸ್ತಾವ ಕೈಬಿಡಬೇಕು. ಶ್ರೀರಂಗಪಟ್ಟಣ ತಾಲೂಕಿನ ಕಲ್ಲುಗಣಿಗಾರಿಕೆ ನಿಷೇಧಿತ ಪ್ರದೇಶಗಳಲ್ಲಿ ಮೀಸಲು ಪಡೆ ನಿಯೋಜಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತ ವಿರೋಧಿ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಪ್ರಸ್ತಾವನೆ ಕೈಬಿಡಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕು. ಮದ್ದೂರು ತಾಲೂಕಿನ ಆತಗೂರು ಹೋಬಳಿಯಲ್ಲಿ ಜಮೀನಿನ ರೀ ಸರ್ವೆಯಲ್ಲಿ ಆಗಿರುವ ಗೊಂದಲ ನಿವಾರಣೆಗೆ, ಭೂ ದಾಖಲೆ ತಜ್ಞರ ಸಮಿತಿ ರಚಿಸಬೇಕು.
ಜಿಲ್ಲೆಯ ಕೆರೆಕಟ್ಟೆಗಳ ಹೂಳು ತೆಗೆಸಬೇಕು. ಲೀಟರ್ ಹಾಲಿಗೆ ಕನಿಷ್ಠ 30 ರೂ. ನಿಗದಿ ಮಾಡಬೇಕು. ರೇಷ್ಮೆ ಬೆಲೆ ಕುಸಿತವಾಗಿದ್ದು, ಪ್ರೋತ್ಸಾಹಧನವನ್ನು ಕೆ.ಜಿಗೆ 50 ರೂ. ಹೆಚ್ಚಿಸಬೇಕು. ಡಾ.ಬಸವರಾಜು ವರದಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಮಂಜೇಶ್‍ಗೌಡ, ಇಂಡುವಾಳು ಚಂದ್ರಶೇಖರ್, ಹೆಮ್ಮಿಗೆ ಚಂದ್ರಶೇಖರ್, ಇಂಡುವಾಳು ಬಸವರಾಜು, ಸಿ.ಸ್ವಾಮಿಗೌಡ, ಕೆ.ನಾಗೇಂದ್ರ, ಕೆ.ರಾಮಲಿಂಗೇಗೌಡ, ಸೊ.ಶಿ.ಪ್ರಕಾಶ್, ಕೆ.ಜಿ.ಉಮೇಶ್, ಜೆ.ದಿನೇಶ್, ಶೇಖರ್, ಶ್ರೀಕಂಠಯ್ಯ, ವೈ.ಕೆ.ರಾಮೇಗೌಡ, ಸಿ.ರಮೇಶ್, ಚನ್ನಸಂದ್ರ ರಮೇಶ್, ಕೆ.ಆರ್.ತೇಜಸ್‍ಕುಮಾರ್ ಹಾಗೂ ಕನ್ನಲಿ ಉಮೇಶ್ ಇತರರು ಭಾಗವಹಿಸಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News