ಬೀದರ್ ಮೆಡಿಕಲ್ ಕಾಲೇಜಿನಲ್ಲಿ ಭ್ರಷ್ಟಾಚಾರ: ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತೆರವಾದ ನಂತರ ಕ್ರಮ- ಇ.ತುಕಾರಾಂ

Update: 2019-07-23 18:46 GMT

ಬೆಂಗಳೂರು, ಜು.23: ಬೀದರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಉಪಕರಣ, ಪೀಠೋಪಕರಣ ಖರೀದಿಯಲ್ಲಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಇದು ತೆರವುಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಪರಿಷತ್‌ನಲ್ಲಿ ಸದಸ್ಯ ಅರವಿಂದ ಕುಮಾರ್ ಅರಳಿರವರ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿರುವ ಅವರು, ಬೀದರ್ ಮೆಡಿಕಲ್ ಕಾಲೇಜಿನ ಹಿಂದಿನ ನಿರ್ದೇಶಕ ಡಾ.ಚನ್ನಣ್ಣ, ವೈದ್ಯಕೀಯ ಅಧೀಕ್ಷಕರಾಗಿದ್ದ ಡಾ.ಶಿವಕುಮಾರ ಶೇಟಕಾರ್, ಆನಂದಸಾಗರ ರೆಡ್ಡಿ, ಸಹಾಯಕ ಆಡಳಿತಾಧಿಕಾರಿ ಅನುಸೂಯ ಬಾಬು ಕೋಟೆ ಹಾಗೂ ಪ್ರಕಾಶ ಮಡಿವಾಳ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಲಾಗಿದೆ.

ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸರಕಾರದ ಅಭಿಯೋಜನಾ ಮಂಜೂರಾತಿ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದಾಗ್ಯು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆ ಪ್ರಥಮ ವದರಿಯನ್ನು ದಾಖಲಿಸಿದೆ. ಈ ಬಗ್ಗೆ ಬೆಂಗಳೂರು, ಕಲಬುರ್ಗಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಮಧ್ಯಂತರ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ತೆರವುಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಲಿಖಿತ ರೂಪದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News