ಅರ್ಜಿ ಸಲ್ಲಿಸಿದ ಎಲ್ಲ ದಲಿತರಿಗೂ ಕೊಳವೆ ಬಾವಿಗೆ ಅವಕಾಶಕ್ಕೆ ಆಗ್ರಹ: ಜು.25 ರಂದು ರಾಜ್ಯಾದ್ಯಂತ ಪ್ರತಿಭಟನೆ ಕರೆ

Update: 2019-07-23 18:47 GMT

ಬೆಂಗಳೂರು, ಜು.23: ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿಗೆ ಅರ್ಜಿ ಸಲ್ಲಿಸಿದ ಎಲ್ಲ ದಲಿತರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ, ದಲಿತರ ಅಭಿವೃದ್ಧಿಗೆ ಎಸ್ಟಿಪಿ ಹಾಗೂ ಟಿಎಸ್ಪಿ ಯೋಜನೆ ಅಡಿ ನೀಡಿರುವ ಹಣ ಸಮರ್ಪಕ ಬಳಕೆಗಾಗಿ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಜು.25 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ಗಂಗಾ ಕಲ್ಯಾಣ ಕೊಳವೆ ಬಾವಿ ಯೋಜನೆ ಅಡಿಯಲ್ಲಿ ಪ್ರತಿವರ್ಷ ಎಸ್ಸಿ-ಎಸ್ಟಿ ಸಮುದಾಯದವರು ಸಾವಿರಾರು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ, ಶಾಸಕರ ನೇತೃತ್ವದಲ್ಲಿ ಹಂಚಿಕೆಯಾಗುವ ಈ ಯೋಜನೆ ಬೆರಳೆಣಿಕೆ ಅರ್ಜಿದಾರರಿಗೆ, ರಾಜಕೀಯ ಬೆಂಬಲವಿರುವ ಶಾಸಕರ ಆಪ್ತರಿಗೆ ಅಷ್ಟೇ ಸಿಗುತ್ತಿದೆ. ನೂರಾರು ರೂ.ಗಳನ್ನು ಖರ್ಚು ಮಾಡಿ ಅರ್ಜಿ ಸಲ್ಲಿಸುತ್ತಿರುವವರಿಗೆ ಈ ಯೋಜನೆಯ ಫಲ ಸಿಗುತ್ತಲೇ ಇಲ್ಲ.

ರಾಜ್ಯದಲ್ಲಿ ಸಾವಿರಾರು ದಲಿತ ಕುಟುಂಬಗಳಿಗೆ ಭೂಮಿಯೇ ಇಲ್ಲ. ಇನ್ನು ಭೂಮಿಯಿರುವ ದಲಿತರಿಗೆ ನೀರಿಲ್ಲದಂತಾಗಿದೆ. ಹೀಗಾಗಿ, ಕೊಳವೆ ಬಾವಿ ಕಲ್ಪಿಸಿದರೆ ನೀರು ಸಿಗುತ್ತದೆ. ದಲಿತರ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದುದರಿಂದಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಅವಕಾಶ ನೀಡಬೇಕು. ಅದರ ಜತೆಗೆ, ಪ್ರತಿವರ್ಷ ಎಸ್ಟಿಪಿ ಮತ್ತು ಟಿಎಸ್ಪಿ ಯೋಜನೆ ಅಡಿ ಕೋಟ್ಯಂತರ ರೂ.ಗಳು ಪರಿಶಿಷ್ಟರ ಅಭಿವೃದ್ಧಿಗಾಗಿ ನೀಡುತ್ತಿದ್ದರೂ, ಅದು ಎಲ್ಲರಿಗೂ ತಲುಪುತ್ತಿಲ್ಲ. ಇದು ಎಲ್ಲರಿಗೂ ತಲುಪಬೇಕು ಎಂದು ಆಗ್ರಹಿಸಿ ಪ್ರತಿಭಟನೆಗೆ ಸಮಿತಿ ಕರೆ ನೀಡಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News