ಅಪರಾಧ ಪ್ರಕರಣಗಳಿಗೆ ಕಡಿವಾಣಕ್ಕೆ ನಿರ್ಧಾರ: ಸಮಸ್ಯೆಗಳನ್ನು ಆಲಿಸಲು ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಸಮಯ ನಿಗದಿ

Update: 2019-07-23 18:50 GMT
ಅಲೋಕ್ ಕುಮಾರ್

ಬೆಂಗಳೂರು, ಜು.23: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜನರ ಸಮಸ್ಯೆಗಳನ್ನು ಆಲಿಸಲು ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಮಯ ನಿಗದಿಪಡಿಸಿದ್ದಾರೆ.

ನಗರದಾದ್ಯಂತ ಹಲವಾರು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯದ ನೆಪವೊಡ್ಡಿ ಇನ್‌ಸ್ಪೆಕ್ಟರ್‌ಗಳು ಠಾಣೆಗಳಲ್ಲಿ ಇರುವುದಿಲ್ಲ. ಇದರಿಂದಾಗಿ ಕಿಡಿಗೇಡಿಗಳನ್ನು ಹಲವು ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡರೂ, ಅದನ್ನು ಯಾರ ಬಳಿ ಹೇಳಬೇಕೆಂದು ತೋಚದೆ ನಾಗರಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಆದುದರಿಂದಾಗಿ, ಪೊಲೀಸ್ ಆಯುಕ್ತರು ಇದನ್ನು ಮನಗಂಡು ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಿಕ್ಕಾಗಿ ಒಂದು ನಿರ್ದಿಷ್ಟ ಸಮಯ ಮೀಸಲಿಟ್ಟಿದ್ದಾರೆ.

ಕಾನೂನು ಸುವ್ಯವಸ್ಥೆಯ ಇನ್‌ಸ್ಪೆಕ್ಟರ್ ಸಂಜೆ 4.30ರಿಂದ 6 ಗಂಟೆವರೆಗೆ ಹಾಗೂ ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ಸಂಜೆ 4ರಿಂದ 5ರವರೆಗೆ ಕಡ್ಡಾಯವಾಗಿ ಪೊಲೀಸ್ ಠಾಣೆಗಳಲ್ಲಿ ಹಾಜರು ಇರುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಕಿಡಿಗೇಡಿಗಳು ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಬೆದರಿಕೆ, ಹ್ತಾ ವಸೂಲಿ, ಮೀಟರ್ ಬಡ್ಡಿ ದಂಧೆ, ಹಲ್ಲೆ ಸೇರಿ ಮುಂತಾದ ಅಪರಾಧ ಚಟುವಟಿಕೆಗಳನ್ನು ಕಡಿವಾಣ ಹಾಕುವ ಸಲುವಾಗಿ ಜನರ ಸಮಸ್ಯೆಗಳನ್ನು ಆಲಿಸುವಂತೆ ಹೇಳಿದ್ದಾರೆ.

ಆಯುಕ್ತರು ನಿಗದಿ ಮಾಡಿರುವ ಸಮಯದಲ್ಲಿ ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ ಇನ್ನುಳಿದ ವೇಳೆ ಅನ್ಯ ಕೆಲಸಗಳನ್ನು ಮಾಡುವಂತಿಲ್ಲ. ಕರ್ತವ್ಯ ನೆಪದಲ್ಲಿ ಠಾಣೆ ವ್ಯಾಪ್ತಿಯಿಂದ ಹೊರಗೆ ಇರುವಂತಿಲ್ಲ. ಠಾಣೆಗಳಿಗೆ ಭೇಟಿ ನೀಡುವ ಜನರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪಡಿಹಾರ ಕಲ್ಪಿಸುವ ಕೆಲಸ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಸಹಾಯವಾಣಿ ಸದ್ಬಳಕೆಗೆ ಚಿಂತನೆ: ಪ್ರತಿ ತಿಂಗಳು ಜನರಿಂದ ಪೊಲೀಸ್ ಸಹಾಯವಾಣಿ ‘100’ಗೆ ಕನಿಷ್ಠ 50 ಸಾವಿರದಿಂದ 70 ಸಾವಿರ ೆನ್ ಕರೆಗಳು ಬರುತ್ತವೆ. ತುರ್ತು ಸಂದರ್ಭಗಳಲ್ಲಿ ಪೊಲೀಸರಿಗೆ ದೂರುಗಳನ್ನು ನೀಡುತ್ತಾರೆ. ದೂರುಗಳನ್ನು ಪ್ರತ್ಯೇಕಗೊಳಿಸಿ ಸಂಬಂಧಪಟ್ಟ ವಿಭಾಗಗಳಿಗೆ ರವಾನಿಸಲಾಗುತ್ತದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಲು ಸಹಾಯವಾಣಿ ಮೂಲಕ ಜನರಿಗೆ ಮತ್ತಷ್ಟು ಸೇವೆ ನೀಡಲು ಪೊಲೀಸರು ಮುಂದಾಗಿದ್ದಾರೆ.

ಜನಸ್ನೇಹಿ ಪೊಲೀಸ್ ಸೇವೆ ನೀಡುವ ಉದ್ದೇಶದಿಂದ ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಸಮಯ ನಿಗದಿ ಮಾಡಲಾಗಿದೆ. ಸಂಜೆ ಸಮಯದಲ್ಲಿ ಎಲ್ಲ ಠಾಣೆಗಳಲ್ಲಿರುವ ಪೊಲೀಸ್ ಅಧಿಕಾರಿಗಳು ಒಂದು ಗಂಟೆ ಸಮಯವನ್ನು ಜನರ ಸಮಸ್ಯೆಗಳನ್ನು ಆಲಿಸಲು ಮೀಸಲಿಡಲಿದ್ದಾರೆ. ಇದರಿಂದ ಅಪರಾಧಿ ಚಟುವಟಿಕೆಗಳಿಗೆ ಸಾಕಷ್ಟು ಕಡಿವಾಣ ಹಾಕಲು ಸಾಧ್ಯವಿದೆ.

-ಅಲೋಕ್ ಕುಮಾರ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News